ಎನ್ 95 ವಾಲ್ವ್ ಮಾಸ್ಕ್ ಮಾರಾಟಕ್ಕೆ ನಿರ್ಬಂಧ
ಮೈಸೂರು

ಎನ್ 95 ವಾಲ್ವ್ ಮಾಸ್ಕ್ ಮಾರಾಟಕ್ಕೆ ನಿರ್ಬಂಧ

July 23, 2020

ಮೈಸೂರು, ಜು.22(ಆರ್‍ಕೆ)- ವಾಲ್ವ್ ಹೊಂದಿರುವ ಎನ್95 ಮಾಸ್ಕ್‍ಗಳನ್ನು ಮಾರಾಟ ಮಾಡಬಾರದೆಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ (ಡಿಜಿಹೆಚ್‍ಎಸ್)ರು ಬರೆದಿರುವ ಪತ್ರದಲ್ಲಿ ವಾಲ್ವ್ ಇರುವ ಮಾಸ್ಕ್‍ನಿಂದ ಕೊರೊನಾ ವೈರಸ್ ನಿಯಂತ್ರಿಸಲು ಸಾಧ್ಯವಿಲ್ಲವಾದ್ದರಿಂದ ಅವುಗಳ ಮಾರಾಟ ಮಾಡಬಾರದೆಂದು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ನಿರ್ಬಂಧವೇರಿದ್ದು, ಸಾರ್ವಜನಿಕರು ಅಂತಹ ಮಾಸ್ಕ್‍ಗಳನ್ನು ಖರೀದಿಸಬಾರದೆಂದೂ ಸೂಚನೆ ನೀಡಿದ್ದಾರೆ.

ವಾಲ್ವ್‍ಡ್ ರೆಸ್ಪಿರೇಟರ್ ಇರುವ ಮಾಸ್ಕ್‍ಗಳನ್ನು ಜನರು ಬಳಸುತ್ತಿರುವುದನ್ನು ಗಮನಿಸಿರುವ ಡಿಜಿಹೆಚ್‍ಎಸ್, ಅದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಅಂತಹ ಮಾಸ್ಕ್‍ಗಳನ್ನು ಮಾರಾಟ ಮಾಡಲು ನಿರ್ಬಂ ಧಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಾಲ್ವ್ ರೆಸ್ಪಿರೇಟರ್ ಇರುವ ಮಾಸ್ಕ್ ಬಳಸುವುದರಿಂದ ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಡೈರೆಕ್ಟರ್ ಜನರಲ್ ಆಫ್ ಹೆಲ್ತ್ ಸರ್ವೀಸಸ್‍ನ ರಾಜೀವ್ ಗರ್ಗ್, ವೈದ್ಯಕೀಯ ಶಿಕ್ಷಣ ಇಲಾಖೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಈ ಮಾಸ್ಕ್ ಧರಿಸಿದ ವ್ಯಕ್ತಿ ಸೋಂಕಿತನಾಗಿದ್ದರೆ, ವಾಲ್ವ್‍ನಿಂದ ಕೊರೊನಾ ವೈರಸ್ ಸೋಂಕು ಇತರರಿಗೆ ಹರಡುವ ಸಾಧ್ಯತೆ ಇದೆ. ಈ ಮಾಸ್ಕ್‍ನಿಂದ ಕೋವಿಡ್-19 ನಿಯಂತ್ರಣ ಅಸಾಧ್ಯ ಎಂದು ತಿಳಿಸಿದ್ದಾರೆ. ಈ ನಿರ್ದೇಶನದನ್ವಯ ವ್ಯಾಪಕ ಪ್ರಚಾರ ನೀಡಿ ಮಾರಾಟಗಾರರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುಂದಾಗಿದ್ದು, ಇಷ್ಟರಲ್ಲೇ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »