ಶ್ರೀಶೈಲಂನಲ್ಲಿ ಮೈಸೂರಿನ ನಿವೃತ್ತ ಮುಖ್ಯ ಶಿಕ್ಷಕ ಆತ್ಮಹತ್ಯೆ
ಮೈಸೂರು

ಶ್ರೀಶೈಲಂನಲ್ಲಿ ಮೈಸೂರಿನ ನಿವೃತ್ತ ಮುಖ್ಯ ಶಿಕ್ಷಕ ಆತ್ಮಹತ್ಯೆ

August 10, 2018

ಮೈಸೂರು: ಮೈಸೂರಿನ ನಿವೃತ್ತ ಮುಖ್ಯ ಶಿಕ್ಷಕನೋರ್ವ ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಮೈಸೂರಿನ ನಾಡನಹಳ್ಳಿ ಸರ್ದಾರ್ ವಲ್ಲಬಾಯ್‍ಪಟೇಲ್ ನಗರ ನಿವಾಸಿ ಪರಶಿವಮೂರ್ತಿ (61) ಆತ್ಮಹತ್ಯೆಗೆ ಶರಣಾದವರು.

ಆಗಸ್ಟ್ 4ರಂದು ಕರ್ನೂಲ್ ಜಿಲ್ಲೆಯ ಶ್ರೀಶೈಲಂನ ಬಸ್ ನಿಲ್ದಾಣದ ಬಳಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಬಸ್ ಚಾಲಕ ಸಾಯಿ ಬಾಬಾ ಮಚ ರಿಯಾ ಎಂಬುವರು ಶ್ರೀಶೈಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ ಸ್ಥಳೀಯ ಪೊಲೀಸರು, ಮೃತದೇಹವನ್ನು ಅಲ್ಲಿನ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿರಿಸಿದ್ದಾರೆ. ಶರ್ಟ್ ಕಾಲರ್‍ನಲ್ಲಿ ‘ಕಾರ್ತಿಕ ಟೈಲರ್, ತಿ.ನರಸಿಪುರ’ ಎಂಬ ಲೇಬಲ್ ಇದ್ದು ಪೊಲೀಸರು ವಿಚಾರಣೆ ನಡೆಸಿದಾಗ ಮೃತಪಟ್ಟವರು ಪರಶಿವಮೂರ್ತಿ ಎಂಬುದನ್ನು ಗುರುತಿಸಿದರು. ಕಡೆಗೆ ಸ್ಥಳದಲ್ಲಿ ‘ನಾನು ಶ್ರೀ ಕ್ಷೇತ್ರದಲ್ಲಿ ಮೃತಪಟ್ಟಿದ್ದು, ಈ ಕ್ಷೇತ್ರದಲ್ಲೇ ಅಂತ್ಯಕ್ರಿಯೆ ನೆರವೇರಿಸಿ’ ಎಂದು ಬರೆದಿದ್ದ ಡೆತ್‍ನೋಟ್ ಸಿಕ್ಕಿದೆ ಎಂದು ಪೊಲೀಸರು ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಶ್ರೀಶೈಲಂ ಪೊಲೀಸರಿಂದ ವಿಷಯ ತಿಳಿಯುತ್ತಿದ್ದಂತೆಯೇ ಪರಶಿವಮೂರ್ತಿ ಅವರ ಪತ್ನಿ, ಸಂಬಂಧಿಕರು ಇಂದು ಮುಂಜಾನೆ ಶ್ರೀಶೈಲಂಗೆ ತೆರಳಿದ್ದಾರೆ. ಮೈಸೂರು ತಾಲೂಕು ಕೀಳನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿದ್ದ ಇವರು 3 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ವಾರದ ಹಿಂದೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದರು ಎಂದು ತಿಳಿದು ಬಂದಿದೆ.

Translate »