ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿದ್ದಂಡ ಸಿ.ನಂದ ನಿಧನ
ಮೈಸೂರು

ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿದ್ದಂಡ ಸಿ.ನಂದ ನಿಧನ

December 13, 2018

ಮಡಿಕೇರಿ: ಭಾರತೀಯ ಸೇನೆಯ ಹೆಮ್ಮೆಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೊಡಗಿನ ಬಿದ್ದಂಡ ಸಿ.ನಂದ (87) ಅವರು ಇಂದು ನಿಧನ ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನದಲ್ಲಿದ್ದಾಗಲೇ ಬುಧವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.

ಸೇನಾ ಕ್ಷೇತ್ರದ ಹೆಜ್ಜೆ ಗುರುತು: ನಾಲ್ಕು ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ‘ಲೆಫ್ಟಿನೆಂಟ್ ಜನರಲ್’ ಉನ್ನತ ಹುದ್ದೆ ಯನ್ನು ಅಲಂಕರಿಸಿದ ಬಿದ್ದಂಡ ಸಿ.ನಂದ ಭಾರತೀಯ ಭೂಸೇನೆಯ ಉತ್ತರ ವಲ ಯದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದವರು. ತಮ್ಮ ದ್ವಿತೀಯ ಸೇವಾ ಅವಧಿಯಲ್ಲಿ “ಪರಮ ವಿಶಿಷ್ಟ ಸೇವಾ ಪದಕ” ಮತ್ತು “ಅತೀ ವಿಶಿಷ್ಟ ಸೇವಾ ಪದಕ” ಪುರಸ್ಕøತರಾದವರು. ನಿವೃತ್ತಿಯ ನಂತರ ಕೊಡಗು ವನ್ಯಜೀವಿ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್‍ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಮಾಜ ಸೇವಾ ಕಾರ್ಯ ಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು.

ಡೆಹ್ರಾಡೂನ್‍ನಲ್ಲಿ ಬಿ.ಸಿ. ನಂದ ಅವರು ಶಿಕ್ಷಣ ಪಡೆಯುತ್ತಿರುವ ಹಂತದಲ್ಲಿ ಇವರ ಮನೆಯ ಸಮೀಪವೇ ಇದ್ದ ‘ಇಂಡಿ ಯನ್ ಮಿಲಿಟರಿ ಅಕಾಡೆಮಿ’ ಮತ್ತು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಪಾಯಿಗಳು ಹಾಗೂ ತಮ್ಮ ಸಮೀಪದ ಬಂಧುವೇ ಆಗಿದ್ದ ಜನರಲ್ ತಿಮ್ಮಯ್ಯ ಅವರ ಸಮವಸ್ತ್ರದೊಂದಿ ಗಿನ ಶಿಸ್ತುಬದ್ಧ ಜೀವನ ಇವರನ್ನು ಬಹು ವಾಗಿ ಆಕರ್ಷಿಸಿತ್ತು. ತಾನು ಮುಂದೊಮ್ಮೆ ಈ ಸಮವಸ್ತ್ರ ಧರಿಸಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆನ್ನುವ ಪ್ರೇರಣೆಯನ್ನು ಅವರಿಗೆ ನೀಡಿತ್ತು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಥಮ ಸೇನಾಧಿಕಾರಿ: ಸೇನಾಧಿಕಾರಿಯಾಗಿ ಸಾಧನೆಯ ಹೆಜ್ಜೆ ಗುರುತುಗಳನ್ನು ಅತ್ಯಂತ ಸ್ಪಷ್ಟವಾಗಿ ಮೂಡಿಸಿರುವ ಬಿ.ಸಿ.ನಂದ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಓರ್ವ ಸೇನಾಧಿಕಾರಿಯಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ಸೇನಾಧಿಕಾರಿ ಬಿ.ಸಿ.ನಂದ ಅವರು ಎನ್ನುವುದು ಮತ್ತೊಂದು ಹೆಮ್ಮೆಯ ವಿಚಾರ.

ಬಿ.ಸಿ.ನಂದ ಅವರು ಪತ್ನಿ ಮೇರಿಯಂಡ ಲೀಲಾ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಭಾರತೀಯ ಭೂಸೇನೆಯಲ್ಲಿ ಇಂದಿಗೂ ತಮ್ಮ ಹೆಸರು ಮತ್ತು ಪ್ರಭಾವವನ್ನು ಉಳಿಸಿಕೊಂಡಿದ್ದ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರು, ಮಹರ್ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸಿದವರು. ಎಲ್ಲಾ ಸಿಪಾಯಿಗಳು ಹಾಗೂ ಸೇನಾಧಿಕಾರಿಗಳು ಅತ್ಯಂತ ಪ್ರೀತಿ, ಗೌರವಗಳಿಂದ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರನ್ನು ಕಾಣುತ್ತಿದ್ದುದು ಕೊಡಗಿನ ಸೇನಾಧಿಕಾರಿಗಳ ಬಗ್ಗೆ ಮತ್ತು ಕೊಡಗಿನ ಸೇನಾ ಪರಂಪರೆಗೆ ಸಂದ ಬಹುದೊಡ್ಡ ಗೌರವವಾಗಿದೆ.

ಅರಣ್ಯಾಧಿಕಾರಿಯ ಪುತ್ರ: ಕೊಡಗಿನ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿ 1931ರ ಮೇ 12ರಂದು ಬಿದ್ದಂಡ ಚೆಂಗಪ್ಪ ಮತ್ತು ಬೊಳ್ಳವ್ವ ದಂಪತಿ ಪುತ್ರನಾಗಿ ಬಿ.ಸಿ.ನಂದ ಜನಿಸಿದರು. ಇವರ ತಂದೆ ಚೆಂಗಪ್ಪ ಅವರು ಆಗಿನ ಅತ್ಯಂತ ಪ್ರಸಿದ್ಧ ಅರಣ್ಯಾಧಿಕಾರಿಯಾಗಿದ್ದರೆ, (ಅಂಡಮಾನ್‍ನಲ್ಲಿ) ತಾಯಿ ಬೊಳ್ಳವ್ವ ಅವರು ಸ್ವತಂತ್ರ ಭಾರತದ ಪ್ರಪ್ರಥಮ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಸಹೋದರಿ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಬಿದ್ದಂಡ ಚಂಗಪ್ಪ ನಂದ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಡಿಕೆÉೀರಿಯ ಸೈಂಟ್ ಜೋಸೆಫ್ ಕಾನ್ವೆಂಟ್‍ನಲ್ಲಿ ಪಡೆದು, ಉನ್ನತ ಶಿಕ್ಷಣವನ್ನು ಮದ್ರಾಸ್ ಮತ್ತು ಡೆಹ್ರಾಡೂನ್‍ನಲ್ಲಿ ಪಡೆದುಕೊಂಡು 1949ರಲ್ಲಿ ಐಎಂಎಗೆ ಸೇರ್ಪಡೆಗೊಂಡರು. ಎರಡು ವರ್ಷಗಳ ಬಳಿಕ 1951ರ ಜ.10ರಂದು ಭಾರತೀಯ ಸೇನೆಯ ಭಾಗವಾದರು. ನಿವೃತ್ತಿಯಾದ ನಂತರ ಇವರು ಮಡಿಕೇರಿ ಸಮೀಪದ ಅಬ್ಬಿಫಾಲ್ಸ್ ರಸ್ತೆ ಬದಿಯ ನಿಸರ್ಗ ರಮಣೀಯ ತಾಣದ ಮನೆಯಲ್ಲಿ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದರು.
ಅರಣ್ಯ ಉಳಿದರೆ ದೇಶದ ಸಂಪತ್ತು ಉಳಿಯುತ್ತದೆ: ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಬಿ.ಸಿ.ನಂದ ಅವರು, ಅರಣ್ಯ ಉಳಿದರೆ ಮಾತ್ರ ಈ ದೇಶ ಮತ್ತು ದೇಶದ ಸಂಪತ್ತು ಉಳಿಯಲು ಸಾಧ್ಯವೆಂದು ಅಭಿಪ್ರಾಯಪಡುತ್ತಿದ್ದರು.

ಇಳಿ ವಯಸ್ಸಿನಲ್ಲೂ ದೇಶಾಭಿಮಾನದ ಮಾತು: ಸ್ವತಂತ್ರ ಭಾರತದ ಉದ್ದೇಶ ಸಾಕಾರಗೊಳ್ಳಬೇಕಾದರೆ ಪ್ರತಿಯೊಬ್ಬರು ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ನೂತನ ಚಿಂತನೆಗಳನ್ನು ಯೋಜನೆಗಳನ್ನಾಗಿ ರೂಪಿಸಿ ಅಭಿವೃದ್ಧಿ ಪಡಿಸಬೇಕು. ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸುರಕ್ಷತಾ ವ್ಯವಸ್ಥೆಗಳನ್ನು ಆಧುನೀಕರಣಗೊಳಿಸಬೇಕೆಂದು ಪ್ರತಿಪಾದಿಸುವ ಮೂಲಕ ತಮ್ಮ ಇಳಿ ವಯಸ್ಸಲ್ಲೂ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರು ದೇಶಾಭಿಮಾನ ಮೆರೆದಿದ್ದರು.

ಇಂದು ಅಂತ್ಯಕ್ರಿಯೆ: ವಯೋಸಹಜ ಅನಾರೋಗ್ಯದಿಂದ ವಿಧಿವಶರಾದ ಲೆ.ಜ. ಬಿದ್ದಂಡ ಸಿ. ನಂದಾ ಅವರ ಅಂತ್ಯಕ್ರಿಯೆ ನಾಳೆ (ಗುರುವಾರ) ಅಬ್ಬಿಫಾಲ್ಸ್ ರಸ್ತೆಯ ನಂದಿಮೊಟ್ಟೆಯಲ್ಲಿರುವ ಅವರ ಸ್ವಗೃಹದ ಬಳಿ ನಡೆಯಲಿದೆ. ಭಾರತೀಯ ಸೇನಾ ಪಡೆಯ ಬೆಂಗಳೂರು ಮತ್ತು ಚೆನ್ನೈನ ಎರಡು ಸೇನಾ ತುಕಡಿಗಳು ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಹಿರಿಯ ಸೇನಾ ನಾಯಕನಿಗೆ ದೇಶಾಭಿಮಾನದ ಗೌರವ ಸಮರ್ಪಿಸಲಿವೆ ಎಂದು ತಿಳಿದುಬಂದಿದೆ.

ಲೆ.ಜ. ಬಿ.ಸಿ.ನಂದ ಅವರ ನಿಧನಕ್ಕೆ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಸೇನಾಧಿಕಾರಿಗಳು, ಮಾಜಿ ಸೈನಿಕರು ಹಾಗೂ ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.

Translate »