ಬೆಂಗಳೂರು,ಮಾ.18(ಕೆಎಂಶಿ)-ತಹಸೀಲ್ದಾರ್ ನಿಯೋಜನೆ ವಿಚಾರದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಇಬ್ಬರು ಹಿರಿಯ ಪ್ರಭಾವಿ ಸಚಿವರು ಪರಸ್ಪರ ಕಚ್ಚಾಡಿಕೊಂಡಿದ್ದಾರೆ. ವಿಧಾನಸಭೆಯ ಮೊಗಸಾಲೆ ಯಲ್ಲೇ ನಡೆದ ಸಚಿವರ ಈ ರಂಪಾಟ, ಅಧಿ ಕಾರಿಗಳು ಮತ್ತು ಪತ್ರಕರ್ತರಿಗೆ ಮನರಂಜನೆ ನೀಡಿದರೆ, ಇನ್ನಿತರೆ ಸಚಿವರು-ಶಾಸಕರಿಗೆ ಇರುಸು-ಮುರಿಸು ಉಂಟು ಮಾಡಿದೆ. ಮಾಗಡಿ ತಾಲೂಕು ತಹಸೀಲ್ದಾರ್ ನೇಮಕಾತಿ ಬಗ್ಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ್ ನಡುವೆ ಈ ರಂಪಾಟ ನಡೆದಿದೆ. ಈಗ ನೇಮಕಗೊಂಡಿರುವ ಅಧಿಕಾರಿ ಭ್ರಷ್ಟನಿದ್ದಾನೆ, ಆತನನ್ನು ತಕ್ಷಣವೇ ವರ್ಗಾವಣೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರ ಗಮನಕ್ಕೆ ತಂದರು. ನೀವು ಜಿಲ್ಲೆಯೊಂದಕ್ಕೆ ಅಧಿಕಾರಿ ಗಳ ನೇಮಕಾತಿ ಮಾಡುವಾಗ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಬೇಕು. ನೀವು ಯಾರನ್ನಾದರೂ ನೇಮಕ ಮಾಡಿ, ಒಳ್ಳೆಯ ಅಧಿಕಾರಿಗಳನ್ನು ನೇಮಿಸಿ. ನನಗೆ ಇಂತಹವರು ಬೇಡ, ಬದಲಾಯಿಸಿ ಎಂದು ಅಶೋಕ್ ಅವರಿಗೆ ಮನವಿ ಮಾಡಿ ದರು. ಮಠಾಧೀಶರೊಬ್ಬರು ಹಾಗೂ ಪ್ರಮುಖ ರಾಜಕೀಯ ಮುಖಂಡರು, ಆತನೇ ತಾಲೂಕಿಗೆ ಬೇಕೆಂದು ನೇಮಕಾತಿ ಮಾಡಿಸಿದ್ದಾರೆ, ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದರು.
ಉಸ್ತುವಾರಿ ಸಚಿವನಾಗಿ ನಾನು ಹೇಳುತ್ತಿದ್ದೇನೆ. ನನ್ನ ಮಾತಿಗೆ ಬೆಲೆ ಇಲ್ಲವೇ? ಎಂದು ಏರಿದ ಧ್ವನಿಯಲ್ಲಿ ಡಾ. ಅಶ್ವತ್ಥನಾರಾಯಣ ಕಂದಾಯ ಸಚಿವರನ್ನು ಪ್ರಶ್ನಿಸಿ, ಮುಗಿಬಿದ್ದರು. ಅಲ್ಲದೆ ನನ್ನ ಮಾತಿಗೆ ಬೆಲೆ ಇಲ್ಲ ಎಂದಾದರೆ ಏನರ್ಥ, ನನಗೆ ಅಷ್ಟೂ ಬೆಲೆ ಇಲ್ಲವೆ, ನೀವು ಏನೆಂದುಕೊಂಡಿದ್ದೀರಿ ಎಂದು ಖಾರವಾಗಿ ನುಡಿದರು.
ಇದಕ್ಕೆ ತಿರುಗೇಟು ನೀಡಿದ ಅಶೋಕ್, ಇಲಾಖೆ ಸಚಿವನಾದ ನನಗೆ ಯಾರನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕೆಂಬುದು ಗೊತ್ತಿದೆ, ನಿಮ್ಮಿಂದ ನಾನು ಪಾಠ ಕಲಿಯಬೇಕಿಲ್ಲ. ಪಕ್ಷದಲ್ಲಿ ನಾನು ನಿಮಗಿಂತಲೂ ಹಿರಿಯವ, ನನಗೆ ನಿಮ್ಮ ಉಪದೇಶ ಬೇಡ ಎಂದು ಮುಖ ಮುರಿದು ಮಾತನಾಡಿದರು. ಕಂದಾಯ ಸಚಿವರ ಮಾತಿನಿಂದ ಸಿಟ್ಟಗೆದ್ದ ಡಾ. ಅಶ್ವತ್ಥನಾರಾಯಣ, ಅವರ ಮೇಲೆ ಆರೋಪಗಳ ಸುರಿಮಳೆಯನ್ನೇ ಮಾಡಿದರು.
ಅಶೋಕ್ ಕೂಡ ತಾವು ಕಮ್ಮಿ ಇಲ್ಲ ಎನ್ನುವಂತೆ ಉನ್ನತ ಶಿಕ್ಷಣ ಸಚಿವರ ಗುಣಗಾನ ಮಾಡಿದರು. ಇದು ಎಲ್ಲೆ ಮೀರಿ ಮೊಗಸಾಲೆಯಲ್ಲಿ ಇರುವವರೆಲ್ಲರನ್ನೂ ಅಲ್ಲಿಗೆ ಕರೆತರುವಂತೆ ಮಾಡಿತು. ಅಲ್ಲಿಯೇ ಇದ್ದ ಕೆಲವು ಸಚಿವರು ಮತ್ತು ಶಾಸಕರು, ಇಬ್ಬರು ಸಚಿವರ ಗಲಾಟೆ ಅತಿರೇಕಕ್ಕೆ ಹೋಗುತ್ತಿರುವುದನ್ನು ಗಮನಿಸಿ ಇಬ್ಬರನ್ನೂ ಸಮಾಧಾನಪಡಿಸಿ, ದೂರ-ದೂರ ಕರೆದುಕೊಂಡು ಹೋದರು.