ರಿಂಗ್ ರಸ್ತೆ ಜಂಕ್ಷನ್‍ಗಳನ್ನು `ಬ್ಲ್ಯಾಕ್ ಸ್ಪಾಟ್’ ಎಂದು ಘೋಷಿಸಿದರೆ 30 ಕೋಟಿ ರೂ.ಗಳಲ್ಲಿ ಫ್ಲೈಓವರ್, ಅಂಡರ್‍ಪಾಸ್ ನಿರ್ಮಾಣ: ಸಂಸದ ಪ್ರತಾಪಸಿಂಹ
ಮೈಸೂರು

ರಿಂಗ್ ರಸ್ತೆ ಜಂಕ್ಷನ್‍ಗಳನ್ನು `ಬ್ಲ್ಯಾಕ್ ಸ್ಪಾಟ್’ ಎಂದು ಘೋಷಿಸಿದರೆ 30 ಕೋಟಿ ರೂ.ಗಳಲ್ಲಿ ಫ್ಲೈಓವರ್, ಅಂಡರ್‍ಪಾಸ್ ನಿರ್ಮಾಣ: ಸಂಸದ ಪ್ರತಾಪಸಿಂಹ

November 11, 2020

ಮೈಸೂರು, ನ.10(ಎಂಟಿವೈ)- ಮೈಸೂರು ರಿಂಗ್ ರಸ್ತೆಯ ಜಂಕ್ಷನ್‍ಗಳನ್ನು `ಬ್ಲ್ಯಾಕ್ ಸ್ಪಾಟ್’ ಎಂದು ಘೋಷಿಸಿದರೆ, ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದ ತಲಾ ಒಂದೊಂದು ಪಾಯಿಂಟ್‍ನಲ್ಲಿ 30 ಕೋಟಿ ರೂ. ವೆಚ್ಚ ದಲ್ಲಿ ಅಂಡರ್ ಪಾಸ್ ಅಥವಾ ಫ್ಲೈಓವರ್ ನಿರ್ಮಿಸುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದ ಆವರಣದಲ್ಲಿ ಮಂಗಳವಾರ ನಡೆದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಿಂಗ್ ರಸ್ತೆಯಲ್ಲಿ ಬೋಗಾದಿ, ತಿ.ನರಸಿಪುರ, ನಂಜನಗೂಡು ಕೆಆರ್‍ಎಸ್ ರಸ್ತೆ ಜಂಕ್ಷನ್‍ನಲ್ಲಿ ಹೆಚ್ಚು ಅಪಘಾತವಾಗುತ್ತಿವೆ. ಆಕ್ಸಿಡೆಂಟ್ ತಪ್ಪಿಸಲು ಅಂಡರ್ ಪಾಸ್ ಅಥವಾ ಫ್ಲೈಓವರ್ ನಿರ್ಮಿಸುವುದು ಅನಿವಾರ್ಯವಾಗಿದೆ. ಕೇಂದ್ರ ಸರ್ಕಾರ ಅಪಘಾತ ಸಂಭವಿಸುವ ಬ್ಲ್ಯಾಕ್ ಸ್ಪಾಟ್‍ಗಳನ್ನು ಅಭಿವೃದ್ಧಿಪಡಿಸಲು 1 ಪಾಯಿಂಟ್‍ಗೆ 30 ಕೋಟಿ ರೂ. ಬಿಡುಗಡೆ ಮಾಡಲಿದೆ. ನಗರ ಪೊಲೀಸರು ರಿಂಗ್ ರಸ್ತೆಯ ಜಂಕ್ಷನ್‍ಗಳನ್ನು ಬ್ಲ್ಯಾಕ್ ಸ್ಪಾಟ್ ಎಂದು ಘೋಷಿಸಿದರೆ, ಅಂಡರ್ ಪಾಸ್ ಅಥವಾ ಫ್ಲೈಓವರ್ ನಿರ್ಮಾ ಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ದಶಪಥ: ಮೈಸೂರು-ಬೆಂಗಳೂರು ನಡುವಿನ 10 ಪಥದ ರಸ್ತೆ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, 2022ರ ಸೆಪ್ಟಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಅಲ್ಲದೆ ಕೊಡಗು ಜಿಲ್ಲೆಗೆ ಪ್ರಯಾಣಿಸುವವರಿಗಾಗಿ 4 ಪಥದ ಹೆದ್ದಾರಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಿಂದ ಕುಶಾಲನಗರದವರೆಗೆ 4 ಪಥದ ರಸ್ತೆ ನಿರ್ಮಾಣವಾಗಲಿದೆ. ಇದಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅ.25ರಂದು ಸರ್ಕಾರದಿಂದ ಅನುಮತಿ ಕೊಡಿಸಲಾಗಿದೆ ಎಂದರು.

ಮೈಸೂರಿನ ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸ ಲಾಗಿದ್ದು, 45 ಕಿ.ಮೀ. ಉದ್ದದ ವರ್ತುಲ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಹಿನಕಲ್ ಜಂಕ್ಷನ್‍ನಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜಂಕ್ಷನ್‍ವರೆಗೆ 15 ಕೋಟಿ ರೂ. ವೆಚ್ಚದಲ್ಲಿ ರಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಉಳಿದ 32 ಕಿಮೀ ರಿಂಗ್ ರಸ್ತೆಯನ್ನು 145 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು ಟೆಂಡರ್ ಹಂತದಲ್ಲಿದೆ. ನಂಜನಗೂಡು ಹಾಗೂ ತಿ.ನರಸೀಪುರ ರಸ್ತೆ ಜಂಕ್ಷನ್‍ನಲ್ಲಿ ಸರ್ವೀಸ್ ರೋಡ್ ನಿರ್ಮಿಸಲಾಗುತ್ತದೆ. ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ 15-20 ದಿನದಲ್ಲಿ ನಡೆಯಲಿದೆ ಎಂದು ವಿವರಿಸಿದರು.

 

 

Translate »