ಹನೂರು,ಮಾ.10-ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ರಸ್ತೆ ಅಭಿವೃದ್ಧಿಗೆ ಆಯವ್ಯಯದಲ್ಲಿನ ಅನುದಾನ ಲಭ್ಯತೆಗೆ ಅನುಗುಣವಾಗಿ ಕ್ರಮ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ಹನೂರು ತಾಲೂಕಿನ ರಸ್ತೆ ಗಳು ಹಾಳಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಶಾಸಕ ನರೇಂದ್ರ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೊಳ್ಳೇಗಾಲ-ಹನೂರು ಮಾರ್ಗದ 24 ಕಿ.ಮೀ ರಸ್ತೆ ಕಾಮಗಾರಿಯನ್ನು ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನೊಂದಿಗೆ ಕೆ-ಶಿಪ್ 3ರ 1ನೇ ಪ್ಯಾಕೇಜ್‍ನಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಹನೂರು-ಮ.ಬೆಟ್ಟ ರಸ್ತೆ ಅಭಿವೃದ್ಧಿಗೆ ಕ್ರಮ: ತಾಲೂಕು ಕೇಂದ್ರ ಹನೂರಿನಿಂದ-ಮಲೆ ಮಹದೇಶ್ವರ ಬೆಟ್ಟದವರೆಗಿನ ರಸ್ತೆ ಸ್ಥಿತಿಗತಿ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಈ ಮಾರ್ಗವು 53.85 ಕಿ.ಮೀ ಉದ್ದವಿದ್ದು 26.11 ಕಿ.ಮೀ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯ ವಾಗಿದೆ. ರಾಮಾಪುರ ಗ್ರಾಮ ಪರಿಮಿತಿಯ 1.5ಕಿ.ಮೀ ರಸ್ತೆ ಮತ್ತು ಮಹದೇಶ್ವರ ಬೆಟ್ಟ 850ಮೀ ಚತುಷ್ಪಥ ರಸ್ತೆಯನ್ನು 2018-19ನೇ ಸಾಲಿನ ಅನುದಾನದಲ್ಲಿ 9.5ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಟೆಂಡರ್ ಹಂತದಲ್ಲಿದೆ. ಇನ್ನುಳಿದಂತೆ ಕೌದಳ್ಳಿ ಗ್ರಾಮದವರೆಗಿನ 7.79ಕಿ.ಮೀ ಮತ್ತು ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗಿನ 17ಕಿ.ಮೀ ರಸ್ತೆ ಯನ್ನು ಅನುದಾನದ ಲಭ್ಯತೆ ಅನುಗುಣವಾಗಿ ಅಭಿವೃದ್ಧಿಪಡಿಸ ಲಾಗುವುದು ಎಂದು ಉತ್ತರಿಸಿದರು.
ಕೇಂದ್ರ ಸರ್ಕಾರದ ಅನುಮೋದನೆ ಮೇರೆಗೆ ಜಾರಿಗೊಳಿಸ ಲಾಗುವುದು: ಚಾ.ನಗರದಲ್ಲಿ ನೀರಾವರಿ ಆಶ್ರಯದಲ್ಲಿ ಭತ್ತ ಬೆಳೆಯುತ್ತಿರುವ ಪ್ರಮಾಣ ಮತ್ತು ಅದರ ಖರೀದಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಶಾಸಕ ನರೇಂದ್ರರ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಚಾ.ನಗರದಲ್ಲಿ 2019-20ನೇ ಸಾಲಿನಲ್ಲಿ 12,858 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಸುಮಾರು 7,71,540 ಕ್ವಿಂಟಾಲ್ ಭತ್ತ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಕಳೆದ 2018-19ರ ಸಾಲಿನಲ್ಲಿ ಬೆಂಬಲಬೆಲೆ ಯೋಜನೆಯಡಿ 13,977 ಕ್ವಿಂಟಾಲ್ ಭತ್ತ ಖರೀದಿಸಲಾಗಿದ್ದು, ಚಾ.ನಗರ ತಾಲೂಕಿನಲ್ಲಿ 8035 ಕ್ವಿಂಟಾಲ್, ಕೊಳ್ಳೇಗಾಲ ತಾಲೂಕಿನಲ್ಲಿ 5118 ಕ್ವಿಂಟಾಲ್ ಮತ್ತು ಯಳಂದೂರು ತಾಲೂಕಿನಲ್ಲಿ 823 ಕ್ವಿಂಟಾಲ್ ಖರೀದಿಸ ಲಾಗಿದೆ. ಅಂತೆಯೇ 2019-20ನೇ ಸಾಲಿನಲ್ಲಿಯೂ ಭತ್ತ ಖರೀದಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಮುಂದಿನ ವರ್ಷಗ ಳಲ್ಲಿಯೂ ಸಹ ಸರ್ಕಾರದಿಂದ ಖರೀದಿ ಗುರಿ ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೇಂದ್ರ ಸರ್ಕಾರದ ಅನು ಮೋದನೆಯಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.