ಭಾರೀ ಗಾತ್ರದ ಕಂದಕಗಳ ತೋಡುವುದರಿಂದ ಬೆಟ್ಟಕ್ಕೆ ಅಪಾಯ
ಮೈಸೂರು,ಮಾ.೧೩(ಆರ್‌ಕೆಬಿ)-ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್‌ವೇ ಯೋಜನೆ ಮತ್ತು ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವವರಿಗಾಗಿ ಮೆಟ್ಟಿಲುಗಳ ಎರಡೂ ಬದಿಯಲ್ಲಿ ರೇಲಿಂಗ್ ನಿರ್ಮಿ ಸುವ ರಾಜ್ಯ ಸರ್ಕಾರದ ಪ್ರಸ್ತಾವವನ್ನು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ವಿರೋಧಿಸಿದ್ದಾರೆ.
ಉದ್ದೇಶಿತ ರೋಪ್‌ವೇ, ರೇಲಿಂಗ್ ನಿರ್ಮಿ ಸುವುದರಿಂದ ಲಾಭಕ್ಕಿಂತ ಹೆಚ್ಚಾಗಿ ಪರಿಸರ ಮತ್ತು ಪ್ರಕೃತಿಗೆ ಮಾರಕವಾಗಲಿದೆ. ಅಭಿವೃದ್ಧಿ ಹೆಸರಿ ನಲ್ಲಿ ಚಾಮುಂಡಿಬೆಟ್ಟವನ್ನು ಹಾಳು ಮಾಡುವ ರಾಜಕೀಯ ಮುಖಂಡರ ನಡೆ ಸರಿಯಲ್ಲ ಎಂದು ಭಾನುವಾರ ಮುಂಜಾನೆ ಚಾಮುಂಡಿಬೆಟ್ಟದ ಪಾದದ ಬಳಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರೋಪ್‌ವೇ ಮತ್ತು ಮೆಟ್ಟಿಲುಗಳಿಗೆ ರೇಲಿಂಗ್ಸ್ ನಿರ್ಮಿಸುವುದರಿಂದ ಚಾಮುಂಡಿಬೆಟ್ಟಕ್ಕೆ ಹಾನಿ ಯಾಗಲಿದೆ. ಇದರ ಬದಲಿಗೆ ಚಾಮುಂಡಿಬೆಟ್ಟದ ಸುತ್ತಲೂ ಬಫರ್ ಜೋನ್ ರಚಿಸಬೇಕು. ಭೂ ಸ್ವಾಧೀನಮಾಡಿಕೊಂಡು ಚಾಮುಂಡಿಬೆಟ್ಟದ ಪಾದದ ಬಳಿಯೇ ಪಾರ್ಕಿಂಗ್, ಉದ್ಯಾನವನ, ತಂಗುದಾಣ ಇತ್ಯಾದಿಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಬಹುದು. ಪಾದದ ಬಳಿ ಪ್ರತಿನಿತ್ಯ ನೂರಾರು ಮಂದಿ, ಹಬ್ಬ ಮತ್ತು ವಾರಾಂತ್ಯ ದಿನಗಳಲ್ಲಿ ಸಾವಿ ರಾರು ಮಂದಿ ಮೆಟ್ಟಿಲುಗಳ ಮೂಲಕವೇ ಬೆಟ್ಟ ಹತ್ತಿ, ಇಳಿಯುವುದು ಸಾಮಾನ್ಯವಾಗಿದೆ. ಹಾಗಾಗಿ ಇಲ್ಲಿ ಪಾರ್ಕಿಂಗ್ ಇಲ್ಲದೆ ನೂರಾರು ವಾಹನಗಳು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಇಲ್ಲಿ ಪಾರ್ಕಿಂಗ್ ಇನ್ನಿ ತರೆ ಅಭಿವೃದ್ಧಿಪಡಿಸಬಹುದು. ಅದು ಬಿಟ್ಟು ಬೆಟ್ಟ ವನ್ನೆ ಅಗೆದು ರೋಪ್‌ವೇ ನಿರ್ಮಿಸುವುದು ಬೆಟ್ಟದ ಪ್ರಕೃತಿ ದೃಷ್ಟಿಯಿಂದ ಎಷ್ಟು ಸರಿ? ಎಂದು ಪ್ರಶ್ನಿಸಿದರು.
೧೫ರಿಂದ ೨೦ ಆಳವಾದ ಕಂದಕಗಳು: ರೋಪ್‌ವೇ ಯೋಜನೆಗಾಗಿ ೨೦ ಅಡಿಗಳಷ್ಟು ಆಳದ ಕನಿಷ್ಠ ೧೫ರಿಂದ ೨೦ ಕಂದಕಗಳನ್ನು ಅಗೆಯಬೇಕಾಗುತ್ತದೆ. ಈಗಾಗಲೇ ಅನೇಕ ಭೂಕುಸಿತಗಳನ್ನು ಎದುರಿಸಿ ರುವ ಪ್ರದೇಶದಲ್ಲಿ ಮಣ್ಣು ಸಡಿಲಗೊಳುತ್ತದೆ. ಅಲ್ಲದೆ, ರೋಪ್‌ವೇ ಹಳಿಗಳನ್ನು ಹಾಕಲು ಬೆಟ್ಟವನ್ನು ಅಗೆಯಬೇಕಾಗುತ್ತದೆ. ಇದು ಹೆಚ್ಚು ನಾಶಕ್ಕೆ ಕಾರಣ ವಾಗುತ್ತದೆ. ಚಾಮುಂಡಿಬೆಟ್ಟವು ಸೂಕ್ಷ÷್ಮವಾದ ಕಲ್ಲು ಗಳಿಂದ ಕೂಡಿದ್ದು, ಕಂಬಗಳನ್ನು ನೆಟ್ಟರೆ, ಭಾಗಶಃ ಹಸಿರು ಗುಡ್ಡವು ಬರಡಾಗುವ ಅಪಾಯವಿದೆ ಎಂದ ಅವರು, ಬೆಟ್ಟದಲ್ಲಿ ಕಂದಕಗಳನ್ನು ತೆಗೆಯುವುದು ವಿನಾಶಕ್ಕೆ ಕಾರಣವಾಗುತ್ತದೆ. ನಾವು ಪ್ರಕೃತಿಯನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ. ಒಮ್ಮೆ ಬೆಟ್ಟವು ಕಳೆದು ಹೋದರೆ, ಅದು ಶಾಶ್ವತವಾಗಿ ಕಳೆದುಹೋಗುತ್ತದೆ. ಎಲ್ಲಾ ಮೈಸೂರಿನವರು ಯೋಜನೆಗಳನ್ನು ವಿರೋ ಧಿಸಬೇಕು ಮತ್ತು ರಾಜಕಾರಣ ಗಳ ಕುತಂತ್ರಕ್ಕೆ ಬಲಿಯಾಗಬಾರದು ಎಂದು
ಮನವಿ ಮಾಡಿದರು. ಬೆಟ್ಟವನ್ನು ಸಂರಕ್ಷಿಸಲು ಒಡೆಯರು ದೇವಿಕೆರೆ, ತಾವರೆಕಟ್ಟೆ, ಕಾರಂಜಿ ಕಟ್ಟೆ ಕೆರೆ, ಕುಕ್ಕರಹಳ್ಳಿ ಕೆರೆ, ಅಪರಂಜಿ ಕೆರೆ, ಉತ್ತನಹಳ್ಳಿ ಕೆರೆ, ದಳವಾಯಿ ಕೆರೆ, ಗೊಬ್ಬಳಿಕಟ್ಟೆ ಕೆರೆಗಳನ್ನು ನಿರ್ಮಿಸಿದರು. ದುರಾದೃಷ್ಟವಶಾತ್ ಎಲ್ಲಾ ಕೆರೆಗಳು ಮಾನವನ ದುರಾಸೆಗೆ ಬಲಿಯಾಗುತ್ತಿವೆ. ಹೀಗಾಗಿ ಚಾಮುಂಡಿಬೆಟ್ಟ ಹಾಳಾದರೆ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಟ್ಟದ ಮೇಲಿನ ಅಭಿವೃದ್ಧಿಗೆ ಬದಲು, ಪಾದದ ಬಳಿ ಉತ್ತಮ ಪಾರ್ಕಿಂಗ್ ವ್ಯವಸ್ಥೆ, ಆಟದ ಪ್ರದೇಶ ಮತ್ತು, ಧಾರ್ಮಿಕ ಕ್ರಿಯೆಗಳನ್ನು ನಡೆಸುವ ಸ್ಥಳಗಳಂತಹ ಹೆಚ್ಚಿನ ನಾಗರಿಕ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಬಹುದು. ಭಕ್ತರ ಅನುಕೂಲಕ್ಕಾಗಿ ಹೆಚ್ಚಿನ ನೆರಳು ನೀಡುವ ತಂಗುದಾಣ ನಿರ್ಮಿಸಬಹುದು ಎಂದು ಭೈರಪ್ಪ ಅಭಿಪ್ರಾಯಪಟ್ಟರು. ರಾಜಮಾರ್ಗದ ಹೆಸರಿನಲ್ಲಿ ಈಗಾಗಲೇ ಮೈಸೂರು ಅರಮನೆ ಸುತ್ತಮುತ್ತಲಿನ ಪ್ರದೇಶವನ್ನು ಏನು ಮಾಡಿದ್ದಾರೆ ಎಂಬುದು ಕಣ್ಣ ಮುಂದಿದೆ. ೩೫ ಕೋಟಿ ರೂ. ವೆಚ್ಚದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಅಳವಡಿಸಿದ ರೇಲಿಂಗ್ಸ್ಗಳ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.