ಮೈಸೂರು, ಜು.11(ಆರ್‍ಕೆಬಿ)- ಕೆಆರ್‍ಎಸ್‍ಗೆ ಅಪಾಯ ಆಗದಂತೆ ಹೋರಾಟ ನಡೆಸುತ್ತಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೋರಾಟಕ್ಕೆ ರೈತ ಸಂಘ ಸಂಪೂರ್ಣ ಸಹಕಾರ ನೀಡಲಿದೆ ಎಂದು ರಾಜ್ಯರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇಂದಿಲ್ಲಿ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕೆಆರ್‍ಎಸ್ ಉಳಿವಿಗೆ ರೈತಸಂಘ ಕಳೆದ 20 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸಿಕೊಂಡೇ ಬಂದಿದೆ. ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ ಹೆಚ್.ಎಸ್.ದೊರೆಸ್ವಾಮಿ, ರೈತ ಸಂಘದ ಅಧ್ಯಕ್ಷರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ಹೋರಾಟ ನಡೆಸಿದ್ದಾರೆ. ಕೆಆರ್‍ಎಸ್ ಭದ್ರತೆ ದೃಷ್ಟಿಯಿಂದ ರೈತಸಂಘ ಹೋರಾಟ ನಡೆಸಲಿದೆ ಎಂದರು.
ಕೆಆರ್‍ಎಸ್‍ಗೆ ಅಪಾಯವಾಗಲಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆ ನಿಲ್ಲಬೇಕು. ಗಣಿ ಗಾರಿಕೆ ನಿಷೇಧಕ್ಕೆ ನಮ್ಮ ಬೆಂಬಲವಿದೆ. ಇದಕ್ಕೆ ಸುಮಲತಾ ಇರಲಿ, ಹೆಚ್.ಡಿ. ಕುಮಾರಸ್ವಾಮಿ ಇರಲಿ, ಕೆಆರ್‍ಎಸ್ ರಕ್ಷ ಣೆಗೆ ಹೋರಾಟ ಮಾಡಿದರೆ ಅವರಿಗೂ ಸಹಕಾರ ನೀಡುತ್ತೇವೆ. ಒಟ್ಟಾರೆ ಕೆಆರ್‍ಎಸ್‍ಗೆ ಯಾವುದೇ ತೊಂದರೆಯಾಗಬಾರದು ಎಂದರು. ಕನ್ನಂಬಾಡಿ ಉಳಿಸುವ ಬಗ್ಗೆ ಗಣಿ ಸಚಿವ ಮುರುಗೇಶ್ ನಿರಾಣಿ ಮಾತನಾಡ ಬೇಕು. ಮಂಡ್ಯ ಕಾರ್ಖಾನೆ ಉಳಿಸುವ ಬಗ್ಗೆಯೂ ಹೆಚ್.ಡಿ.ಕುಮಾರಸ್ವಾಮಿ ಮಾತ ನಾಡಬೇಕು ಎಂದು ಸಲಹೆ ನೀಡಿದರು.
ಹೆಚ್‍ಡಿಕೆ-ನಿರಾಣಿ ಮಧ್ಯೆ ಒಳಒಪ್ಪಂದ? ಗಣಿಗಾರಿಕೆ ಬಗ್ಗೆ ನೀವೂ ಮಾತನಾಡಬೇಡಿ, ಕಾರ್ಖಾನೆ ವಿಚಾರಕ್ಕೆ ನಾವೂ ಬರುವುದಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಮತ್ತು ಗಣಿ ಸಚಿವ ಮುರುಗೇಶ್ ನಿರಾಣಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂಬ ಬಗ್ಗೆ ಸಂಶಯವಿದೆ ಎಂದು ಸಾಮಾನ್ಯ ಜನರು ಚರ್ಚಿಸುತ್ತಿದ್ದಾರೆ. ಇದರ ಸತ್ಯಾಸತ್ಯತೆ ಹೊರಬರಬೇಕು ಎಂದು ಹೇಳಿದರು.
ಈ ವಾರದೊಳಗೆ ರೈತಸಂಘವು ಮಂಡ್ಯ ಜಿಲ್ಲೆಯ ರೈತರು, ದಲಿತ ಸಂಘಟನೆಗಳು, ಜನಪರ ಸಂಘಟನೆಗಳು, ಶಾಸಕರನ್ನು ಆಹ್ವಾ ನಿಸಿ ದುಂಡು ಮೇಜಿನ ಸಭೆ ನಡೆಸುವ ಮೂಲಕ ಕೆಆರ್‍ಎಸ್ ಉಳಿಸುವ ಹೋರಾಟ ಆರಂಭಿಸಲಾಗುವುದು ಎಂದರು. ಗೋಷ್ಠಿಯಲ್ಲಿ ರೈತಸಂಘದ ಮುಖಂಡ ರಾದ ಅಶ್ವಥ್‍ನಾರಾಯಣ ರಾಜೇ ಅರಸ್, ಮೈಸೂರು ತಾಲೂಕು ಅಧ್ಯಕ್ಷ ಮಂಡಕಳ್ಳಿ ಮಹೇಶ್, ಚಂದ್ರಶೇಖರ್, ಪಿ.ಮರಂ ಕಯ್ಯ ಇನ್ನಿತರರು ಉಪಸ್ಥಿತರಿದ್ದರು.