ಮಂಡ್ಯ,ಮಾ.1(ನಾಗಯ್ಯ)-ಇತ್ತೀಚೆಗೆ ಮಂಡ್ಯ ದಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 38 ರೌಡಿಗಳ ಗಡಿಪಾರಿಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಭಾನುವಾರ ಜಿಲ್ಲಾದಂಡಾಧಿ ಕಾರಿಗಳಾದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕ ಟೇಶ್ ರೌಡಿಗಳ ವಿಚಾರಣೆ ನಡೆಸಿದರು.
ಕಳೆದೆರಡು ತಿಂಗಳಿಂದ ಜಿಲ್ಲೆಯ ವಿವಿಧೆಡೆ ಗಳಲ್ಲಿ ಕ್ಷುಲ್ಲಕ ಕಾರಣಕ್ಕೆ 8ಕ್ಕೂ ಹೆಚ್ಚು ಕೊಲೆ, 10ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಮತ್ತು ಹಲವು ಸರಗಳ್ಳತನ ಪ್ರಕರಣಗಳು ವರದಿಯಾ ಗಿದ್ದು, ಸಾರ್ವಜನಿಕರ ನೆಮ್ಮದಿ ಹದಗೆಟ್ಟಿತ್ತು. ಒಂದಲ್ಲಾ ಒಂದು ಅಪರಾಧ ಪ್ರಕರಣಗಳು ನಿತ್ಯ ನಡೆಯುತ್ತಿದ್ದು, ಪೊಲೀಸರಿಗೂ ತಲೆ ನೋವು ತಂದಿತ್ತು. ಈ ಹಿನ್ನೆಲೆಯಲ್ಲಿ ರೌಡಿಗಳ ಉಪಟಳ ತಡೆಗೆ ಕಾರ್ಯ ಪ್ರವೃತ್ತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಜಿಲ್ಲೆಯೊಳಗೆ ಶಾಂತಿ ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.
ಪೊಲೀಸ್ ಇಲಾಖೆಯ ಮನವಿಯಂತೆಯೇ ಕಳೆದ ವಾರದ ಎಲ್ಲಾ ರೌಡಿಶೀಟರ್‍ಗಳಿಗೆ ನೊಟೀಸ್ ನೀಡಿದ್ದ ಜಿಲ್ಲಾದಂಡಾಧಿಕಾರಿ ಡಾ.ಎಂ.ವಿ.ವೆಂಕ ಟೇಶ್, ಇಂದು ತಮ್ಮ ಕಚೇರಿಯ ಸಭಾಂಗಣ ದಲ್ಲಿಯೇ ವಿಚಾರಣೆ ನಡೆಸಿದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸುಮಾರು 38ಕ್ಕೂ ಹೆಚ್ಚು ರೌಡಿಶೀಟರ್‍ಗಳನ್ನು ವಿಚಾರಣೆ ನಡೆಸಲಾಯಿತು.
ಶೂರಿಟಿ ಕೊಡಿ, ಇಲ್ಲಾ ಗಡಿಪಾರಾಗಿ: ರೌಡಿಗಳ ವಿಚಾರಣೆ ಬಳಿಕ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕ ಟೇಶ್ ಮಾತನಾಡಿ, ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಕೆಲವು ವ್ಯಕ್ತಿಗಳು ದುರ್ನಡತೆಯಿಂದ ಸಮಾಜ ದಲ್ಲಿ ಆತಂಕ ಮತ್ತು ಭಯದ ವಾತಾವರಣ ಸೃಷ್ಠಿ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು, ಚಿಕ್ಕ ಮಕ್ಕಳು ಮತ್ತು ನಾಗರಿಕರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಪೊಲೀಸರು, ಸಮಾಜದ ಗಣ್ಯರು, ಮಾಧ್ಯಮದವರು ಸೇರಿದಂತೆ ನಾನಾ ರೀತಿಯ ದೂರುಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ರೌಡಿಶೀಟರ್‍ಗಳ ಗಡಿಪಾರಿನ ವಿಷಯದಲ್ಲಿ ವಿಚಾರಣೆ ನಡೆಸಲಾಗಿದೆ ಎಂದರು.
ರೌಡಿಗಳ ಗಡಿಪಾರಿನ ಅವಧಿಯು ಅಪ ರಾಧಿಯ ಅಪರಾಧವನ್ನು ಅವಲಂಬಿಸಿರುತ್ತದೆ. ಮೂರು ತಿಂಗಳು, ಆರು ತಿಂಗಳು ಅಥವಾ ಒಂದು ವರ್ಷ ಗಡಿಪಾರು ಮಾಡುತ್ತೇವೆ. ನಂತರ ಅವರಿಗೆ ಅವಕಾಶವನ್ನು ಕೊಟ್ಟು ಪುನರಾವರ್ತನೆ ಮಾಡುತ್ತೇವೆ. ಇಂದು ರೌಡಿ ಶೀಟರ್‍ಗಳ ಜೊತೆ ಹಾಜರಿದ್ದ ಸಂಬಂಧಿಕರು, ವಕೀಲರು ಇನ್ನು ಮುಂದೆ ಇಂತಹ ಪ್ರಕರಣಗಳನ್ನು ಮಾಡುವು ದಿಲ್ಲವೆಂದು ವಿಮೆಯನ್ನು ಕೊಟ್ಟಿದ್ದಾರೆ. ಆದರೆ, ನಾವು ಅವರಿಗೆ ಒಬ್ಬ ಗೆಜೆಟೆಡ್ ಅಧಿಕಾರಿಯ ಶೂರಿಟಿ ಕೊಡಲು ಸೂಚಿಸಿದ್ದೇವೆ. ಅವರ ಪರವಾಗಿ ಶೂರಿಟಿ ಕೊಟ್ಟರೆ ಅಂತಹವರಿಗೆ ಅವಕಾಶವನ್ನು ಕೊಡಲಾಗುತ್ತದೆ. ಇಲ್ಲದಿದ್ದರೆ ಅಂತಹವರನ್ನು ಗಡಿಪಾರು ಮಾಡುತ್ತೇವೆ ಎಂದು ತಿಳಿದರು.
ಹಲವು ವರ್ಷಗಳಿಂದ ಶ್ರೀರಂಗಪಟ್ಟಣ, ಬೆಳ ಗೊಳ, ಪಾಲಳ್ಳಿ, ಮದ್ದೂರು, ಕೆ.ಎಂ.ದೊಡ್ಡಿ, ಮಳವಳ್ಳಿ, ಕೆ.ಆರ್.ಪೇಟೆ ಮತ್ತು ಮಂಡ್ಯದ ನಗರದ ಸುತ್ತ-ಮುತ್ತ ಹಲವಾರು ಗ್ರಾಮಗಳಲ್ಲಿ ರೌಡಿಶೀಟರ್‍ಗಳಿದ್ದಾರೆ. ಅಂತಹವರನ್ನು ಈ ದಿನ ಕರೆಸಿ ಯಾವ ಕಾರಣಕ್ಕಾಗಿ ಗಡಿಪಾರು ಮಾಡಬಾರದು ಎಂಬುದರ ಕಾರಣ ಕೇಳಿ ನೋಟೀಸ್ ನೀಡಿ, ಕೂಲಂಕುಶವಾಗಿ ತನಿಖೆ ಮಾಡಿದ್ದೇವೆ ಎಂದರು.
ಸಮಾಜದ ಮೇಲೆ ಬಹಳ ಗಂಭೀರವಾದ ದುಷ್ಪರಿಣಾಮ ಬೀರುವಂತಹ ಕೆಲವು ಪ್ರಕರಣಗ ಳಿರುವುದು ಕಂಡು ಬಂದಿದೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ಶೂರಿಟಿ ಕೊಡಬೇಕೆಂದು ಹೇಳಿದ್ದೇನೆ. ಮುಂದಿನ ಶುಕ್ರವಾರದೊಳಗೆ ಈ ರೌಡಿಗಳ ಬಗ್ಗೆ ಮತ್ತೆ ತನಿಖೆ ಮಾಡಿ ವರದಿ ನೀಡುವಂತೆ ಆದೇಶಿಸಿದ್ದೇನೆ ಎಂದರು.
ಈ ಪ್ರಕರಣಗಳಲ್ಲಿ ಸಮಾಜಕ್ಕೆ ಗಂಡಾಂತರ, ಭಯ, ಆತಂಕವನ್ನು ಉಂಟು ಮಾಡುತ್ತಿ ದ್ದಾರೋ ಅಂತಹವರನ್ನು ಗುರುತಿಸಿ ಮಂಡ್ಯ ಜಿಲ್ಲೆಯಿಂದ ಗಡಿಪಾರು ಮಾಡಲು ಕಟ್ಟು ನಿಟ್ಟಾದ ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಜಿಲ್ಲೆಯಲ್ಲಿನ ಎಲ್ಲಾ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಜಾಗೃತಿಗೊಳಿಸ ಲಾಗುವುದು. ಭಯ, ಗುಂಪುಗಾರಿಕೆ ಮಾಡಿ ಸಮಸ್ಯೆ ಉಂಟು ಮಾಡುತ್ತಿರುವವರನ್ನು ಗುರುತಿಸಿ ವರದಿ ನೀಡಲು ಸೂಚಿಸಿ, ಜಿಲ್ಲೆಯಲ್ಲಿ ಕಾನೂನು ಸುವ್ಯ ವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಡಳಿತ ನೀಡುವ ನಿರ್ದೇಶನಗಳನ್ನು ಯಾರು ಉಲ್ಲಂಘನೆ ಮಾಡುತ್ತಾರೋ ಅಂತಹ ವರಿಗೆ ಶಾಶ್ವತವಾಗಿ ಜಿಲ್ಲೆಯಿಂದ ಹೊರಹಾಕು ವಂತೆ ಕ್ರಮ ಕೈಗೊಳ್ಳುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆಗೆ ಚರ್ಚೆ ಮಾಡಿದ್ದೇವೆ. ಯಾವ ವ್ಯಕ್ತಿಯು ಕೂಡ ಕಾನೂನನ್ನು ಕೈಗೆತ್ತಿಕೊಳ್ಳ ಬಾರದು. ಎಲ್ಲರೂ ಭ್ರಾತೃತ್ವ, ಶಾಂತಿಯಿಂದ ವರ್ತಿಸಬೇಕು. ಕೋಪ ಬಂದರೂ ನಿಯಂತ್ರಣ ಮಾಡಿಕೊಳ್ಳಬೇಕು. ಯಾರಾದರು ಕಾನೂನನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.