ರುಕ್ಮಿಣಿ ಮಾದೇಗೌಡ `ಪಾಲಿಕೆ ಸದಸ್ಯತ್ವ ಅಸಿಂಧು’ ಮೇಯರ್ ಸ್ಥಾನಕ್ಕೆ ಕಂಟಕ
ಮೈಸೂರು

ರುಕ್ಮಿಣಿ ಮಾದೇಗೌಡ `ಪಾಲಿಕೆ ಸದಸ್ಯತ್ವ ಅಸಿಂಧು’ ಮೇಯರ್ ಸ್ಥಾನಕ್ಕೆ ಕಂಟಕ

May 27, 2021

ರಾಜ್ಯ ಹೈಕೋರ್ಟ್ ಮಹತ್ವದ ಆದೇಶ
ಆಸ್ತಿ ಸಂಬಂಧ ಸುಳ್ಳು ಮಾಹಿತಿ ಪ್ರತಿಸ್ಪರ್ಧಿ ರಜನಿ ಅಣ್ಣಯ್ಯ ತಕರಾರು

ಹೈಕೋರ್ಟ್ ಆದೇಶವನ್ನು ಗೌರವಿಸುತ್ತೇನೆ. ಆದರೆ ಈ ಆದೇಶವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುವ ಬಗ್ಗೆ ವಕೀಲರೊಂದಿಗೆ ಚರ್ಚೆ ನಡೆಸುತ್ತಿದ್ದು, ಸದ್ಯದಲ್ಲೇ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಲಾಗುವುದು. -ರುಕ್ಮಿಣಿ ಮಾದೇಗೌಡ, ಮೇಯರ್

ಮೈಸೂರು, ಮೇ 26-ಮೈಸೂರಿನ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವವನ್ನು ಹೈಕೋರ್ಟ್ ಅಸಿಂಧುಗೊಳಿಸಿದ್ದು, ಮೇಯರ್ ಸ್ಥಾನಕ್ಕೆ ಕಂಟಕ ಒದಗಿ ಬಂದಿದೆ.

ಹೈಕೋರ್ಟ್ ಆದೇಶದಂತೆ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ಅಸಿಂಧುಗೊಂಡಾಗ ಸಹಜವಾಗಿಯೇ ಪಾಲಿಕೆ ಸದಸ್ಯರಲ್ಲದ ಅವರು, ಮೇಯರ್ ಆಗಿ ಮುಂದುವರೆಯಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಕಾಯಿದೆ ಪ್ರಕಾರ ಮೇಯರ್ ಅವಧಿ ಒಂದು ವರ್ಷದ್ದಾ ಗಿದ್ದು, ಮಧ್ಯೆ ಯಾವುದಾದರೂ ಕಾರಣಕ್ಕೆ ಆ ಸ್ಥಾನ ತೆರವುಗೊಂಡರೂ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವಂತಿಲ್ಲ. ಆಗ ಮೇಯರ್ ಹೊಣೆಗಾರಿಕೆಯನ್ನು ಉಪ ಮೇಯರ್ ನಿರ್ವಹಿಸುತ್ತಾರೆ. ಮೈಸೂರು ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇಯರ್ ಸ್ಥಾನಕ್ಕೆ ಕಂಟಕ ಎದುರಾಗಿದೆ.

ವಿವರ: 2018ರಲ್ಲಿ ನಡೆದ ನಗರ ಪಾಲಿಕೆ ಚುನಾವಣೆಯಲ್ಲಿ ರುಕ್ಮಿಣಿ ಮಾದೇಗೌಡ ಅವರು, ಜೆಡಿಎಸ್ ಅಭ್ಯರ್ಥಿಯಾಗಿ 36ನೇ ವಾರ್ಡ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ದ್ದರು. ಅವರ ಸಮೀಪ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಕಾರ್ಪೊ ರೇಟರ್ ರಜನಿ ಅಣ್ಣಯ್ಯ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ರುಕ್ಮಿಣಿ ಮಾದೇಗೌಡ ಚುನಾವಣೆ ವೇಳೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಲೋಪದೋಷಗಳಿವೆ. ಅವರು ತಮ್ಮ ಆಸ್ತಿ ಪ್ರಮಾಣದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಆದ್ದರಿಂದ ಅವರ ಪಾಲಿಕೆ ಸದಸ್ಯತ್ವವನ್ನು ಅಸಿಂಧುಗೊಳಿಸಿ ಎರಡನೇ ಸ್ಥಾನದಲ್ಲಿರುವ ತಮ್ಮನ್ನೇ ಪಾಲಿಕೆ ಸದಸ್ಯರೆಂದು ಘೋಷಿಸುವಂತೆ ಮನವಿ ಮಾಡಿದ್ದರು.

ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ 2020ರ ಡಿಸೆಂಬರ್ 14ರಂದು ರುಕ್ಮಿಣಿ ಮಾದೇಗೌಡರ ಸದಸ್ಯತ್ವವನ್ನು ಅಸಿಂಧುಗೊಳಿಸಿ ರಜನಿ ಅಣ್ಣಯ್ಯ ಅವರನ್ನು ವಿಜಯಿ ಎಂದು ಆದೇಶ ನೀಡಿತ್ತು. ಈ ಆದೇಶವನ್ನು ರುಕ್ಮಿಣಿ ಮಾದೇಗೌಡ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದಲ್ಲಿ ಇಂದು ತೀರ್ಪು ನೀಡಿದ ಹೈಕೋರ್ಟ್ ರುಕ್ಮಿಣಿ ಮಾದೇಗೌಡರ ನಗರ ಪಾಲಿಕೆ ಸದಸ್ಯತ್ವವನ್ನು ಅಸಿಂಧುಗೊಳಿ ಸಿದ್ದು, ಆ ಸ್ಥಾನಕ್ಕೆ ಮರು ಚುನಾವಣೆ ನಡೆಸಬೇಕೆಂದು ಆದೇಶಿಸಿದೆ.

 

 

Translate »