ಪುತ್ರಿ ನಿಶ್ಚಿತಾರ್ಥದಲ್ಲಿ ನಿಯಮ ಉಲ್ಲಂಘನೆ ಮಾಜಿ ಮೇಯರ್ ಪತಿ, ಕಲ್ಯಾಣಮಂಟಪ ಆಯೋಜಕರ ವಿರುದ್ಧ ಪ್ರಕರಣ
ಮೈಸೂರು

ಪುತ್ರಿ ನಿಶ್ಚಿತಾರ್ಥದಲ್ಲಿ ನಿಯಮ ಉಲ್ಲಂಘನೆ ಮಾಜಿ ಮೇಯರ್ ಪತಿ, ಕಲ್ಯಾಣಮಂಟಪ ಆಯೋಜಕರ ವಿರುದ್ಧ ಪ್ರಕರಣ

April 24, 2021

ಮೈಸೂರು, ಏ.23(ಆರ್‍ಕೆ)-ಪುತ್ರಿಯ ವಿವಾಹ ನಿಶ್ಚಿತಾರ್ಥ ವೇಳೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಮೇಯರ್ ಪತಿ ಹಾಗೂ ಕಲ್ಯಾಣ ಮಂಟಪದ ಆಯೋಜಕರ ವಿರುದ್ಧ ಸರಸ್ವತಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ವಿಜಯನಗರ 3ನೇ ಹಂತದ ನಿವಾಸಿ, ಮಾಜಿ ಮೇಯರ್ ರಾಜೇಶ್ವರಿ ಅವರ ಪತಿ ಟಿ.ಸೋಮು ಮತ್ತು ನಿವೇದಿತನಗರದ ಸೆಲೆಬ್ರೇಷನ್ ಕನ್‍ವೆನ್ಷನ್ ಸೆಂಟರ್ ಆಯೋಜಕ ರಾಮಚಂದ್ರೇಗೌಡ, ಕೋವಿಡ್ ಮಾರ್ಗಸೂಚಿ ನಿಯಮ ಉಲ್ಲಂಘಿಸಿದವರಾಗಿದ್ದು, ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಿವೇದಿತನಗರದ ಸೆಲೆಬ್ರೇಷನ್ ಕನ್‍ವೆನ್ಷನ್ ಸೆಂಟರ್‍ನಲ್ಲಿ ಇಂದು ಆಲನಹಳ್ಳಿ ಬಡಾವಣೆಯ ಬಿ.ಎಂ.ಸುನಂದ ಮತ್ತು ಸಿ.ವೆಂಕಟಪ್ಪ ಅವರ ಮಗ ವಿ.ಲೋಹಿತ್ ಮತ್ತು ರಾಜೇಶ್ವರಿ ಮತ್ತು ಟಿ.ಸೋಮು ಅವರ ಪುತ್ರಿ ಎಸ್.ಧನಲಕ್ಷ್ಮಿ ವಿವಾಹ ನಿಶ್ಚಿತಾರ್ಥ ಆಯೋಜಿಸಲಾಗಿತ್ತು. ವಿಷಯ ತಿಳಿದು ಕಾರ್ಯಾಚರಣೆ ನಡೆಸಿದ ಸರಸ್ವತಿಪುರಂ ಠಾಣೆ ಸಬ್ ಇನ್ಸ್‍ಪೆಕ್ಟರ್ ಎಸ್.ರಾಚಯ್ಯ ಅವರು, ಕಾರ್ಯಕ್ರಮದಲ್ಲಿ 70ರಿಂದ 80 ಮಂದಿ ಪಾಲ್ಗೊಂಡಿದ್ದುದು ಕಂಡುಬಂದ ಹಿನ್ನೆಲೆ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದರು ಎಂದು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Translate »