ಅರಣ್ಯಕ್ಕೆ ಬೆಂಕಿ ಇಟ್ಟಿದ್ದ ಮೂವರ ಬಂಧನ
ಮೈಸೂರು

ಅರಣ್ಯಕ್ಕೆ ಬೆಂಕಿ ಇಟ್ಟಿದ್ದ ಮೂವರ ಬಂಧನ

April 24, 2021

ಗುಂಡ್ಲುಪೇಟೆ,ಏ.23(ಸೋಮ್.ಜಿ)-ಇತ್ತೀಚಿಗೆ ಬಂಡೀಪುರ ಹುಲಿ ಯೋಜನೆಯ ಮದ್ದೂರು ಅರಣ್ಯಕ್ಕೆ ಬೆಂಕಿಯಿಟ್ಟಿದ್ದ ಮೂವರು ಆರೋಪಿಗಳನ್ನು ಆರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಮದ್ದೂರು, ಮೂಲೆಹೊಳೆ ಹಾಗೂ ಹಿಮವದ್ ಗೋಪಾಲ ಸ್ವಾಮಿಬೆಟ್ಟ ವಲಯದ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದ ಲಕ್ಕೀಪುರ ಕಾಲೋನಿಯ ನಿವಾಸಿ ಚಲುವ ಬಿನ್ ದೊಡ್ಡ ಕರಿಯ(48), ಮಣಿ ಬಿನ್ ಮೂರ್ತಿ(16), ಹಾಗೂ ಕೇರಳದ ಕೊಂಕಳಿಯ ಗಣೇಶ ಬಿನ್ ಬೊಮ್ಮ(38) ಬಂಧಿತರು. ಇನ್ನೂ 6 ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದ್ದೂರು ವಲಯದ ಆರ್‍ಎಫ್‍ಓ ಬಿ.ಸುಧಾಕರ್ ನೇತೃತ್ವ ದಲ್ಲಿ ಡಿಆರ್‍ಎಫ್‍ಓಗಳಾದ ಎಲ್.ನಾಗರಾಜು, ಸ್ವಾಮಿ, ರಾಮ ಲಿಂಗಪ್ಪ, ಗಾರ್ಡ್‍ಗಳಾದ ನವೀನ್, ದೇವಪ್ಪ, ಅರಣ್ಯ ವೀಕ್ಷಕ ರಾದ ರಾಜಪ್ಪ, ನಾಗೇಶ, ಪ್ರದೀಪ, ಸಿದ್ದಲಿಂಗ, ಕೃಷ್ಣಸ್ವಾಮಿ, ಚಾಲಕರಾದ ಜೀವನ್ ಹಾಗೂ ಪ್ರಶಾಂತ್ ಕಾರ್ಯಾಚರಣೆ ನಡೆಸಿ, ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿ ಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ 1972 ಸೆ. 09, 27, 29, 30, 35/6, 50 ಹಾಗೂ 51ರಡಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಲ್ಲಾ ಆರೋಪಿಗಳೂ ಕರ್ನಾಟಕ, ಕೇರಳ ಹಾಗೂ ತಮಿಳು ನಾಡು ರಾಜ್ಯಗಳಲ್ಲಿ ಅರಣ್ಯ ಅಕ್ರಮಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಮಾಹಿತಿ ಇದೆ. ಈ ಹಿಂದೆಯೂ ಮರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಬಂಧಿತನಾಗಿದ್ದ ಚಲುವ ಅರಣ್ಯ ಇಲಾಖೆಯ ಮೇಲಿನ ದ್ವೇಷದಿಂದ ಕೇರಳದಿಂದ ನಾಲ್ವರು ಹಾಗೂ ಲಕ್ಕೀಪುರದಿಂದ ಐವರನ್ನು ಮಾರ್ಚ್31ರಂದು ಕರೆತಂದು ಮೂಲೆ ಹೊಳೆ ಅರಣ್ಯದಲ್ಲಿ ಏಕ ಕಾಲದಲ್ಲಿ ನಾಲ್ಕೈದು ಕಡೆ ಅರಣ್ಯಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ಈ ಪ್ರಕರಣದ ಪ್ರಮುಖ ಆರೋಪಿ ಚೆಲುವ ಮದ್ದೂರು ವಲಯದಲ್ಲಿ ಮರಗಳ ಕಳ್ಳಸಾಗಾಣೆ ಮಾಡಿಕೊಂಡಿದ್ದ ಎಂಬುದು ತನಿಖೆ ಯಲ್ಲಿ ಬಹಿರಂಗವಾಗಿದೆ.

Translate »