ಕಾಂಗ್ರೆಸ್ ಪಕ್ಷ ಟೀಕಿಸಿದ್ದಕ್ಕೆ ವಕ್ತಾರ ಸ್ಥಾನದಿಂದ ಸಂಜಯ್ ಝಾ ವಜಾ
ಮೈಸೂರು

ಕಾಂಗ್ರೆಸ್ ಪಕ್ಷ ಟೀಕಿಸಿದ್ದಕ್ಕೆ ವಕ್ತಾರ ಸ್ಥಾನದಿಂದ ಸಂಜಯ್ ಝಾ ವಜಾ

June 19, 2020

ನವದೆಹಲಿ, ಜೂ.18- ಪಂಡಿತ್ ಜವಾಹರಲಾಲ ನೆಹರೂ ಕಾಲದಲ್ಲಿದ್ದ ಪ್ರಜಾತಂತ್ರ, ಉದಾರ ಮೌಲ್ಯ ಹಾಗೂ ಸಹಿಷ್ಣುತೆಯಿಂದ ಇಂದು ಪಕ್ಷ ದೂರ ಸರಿಯುತ್ತಿದೆ ಎಂದು ಹೇಳಿದ್ದ ಸಂಜಯ್ ಝಾ ಅವರನ್ನು ತನ್ನ ಪಕ್ಷದ ವಕ್ತಾರ ಸ್ಥಾನದಿಂದ ಕಾಂಗ್ರೆಸ್ ವಜಾ ಮಾಡಿದೆ. ಪಕ್ಷದ ಧೋರಣೆ, ನೀತಿಯನ್ನು ಟೀಕಿಸಿ ಅವರು ಪತ್ರಿಕೆಯೊಂದರಲ್ಲಿ ಲೇಖನ ಬರೆದಿರುವ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ರಾತ್ರಿ ಈ ನಿರ್ಧಾರ ತೆಗೆದುಕೊಂಡಿ ದ್ದಾರೆ. ಈ ಆದೇಶವು ಕೂಡಲೇ ಜಾರಿಗೆ ಬರುತ್ತದೆ ಎಂದ ಅಧ್ಯಕ್ಷೆ, ಝಾ ಅವರ ಸ್ಥಾನದಲ್ಲಿ ಅಭಿಷೇಕ್ ದತ್ ಸಾಧನಾ ಭಾರ್ತಿ ಅವರನ್ನು ವಕ್ತಾರರನ್ನಾಗಿ ನೇಮಿಸಿದ್ದಾರೆ. ನಿರಂಕುಶಾಧಿಕಾರಿಯಾಗುವುದರ ವಿರುದ್ಧ ಎಚ್ಚರಿಕೆ ನೀಡಿ ಪಂಡಿತ್ ನೆಹರು ಅವರು ಒಮ್ಮೆ ಪತ್ರಿಕೆಯೊಂದರಲ್ಲಿ ಸ್ವಯಂ ವಿಮರ್ಶಾತ್ಮಕ ಬರಹ ಬರೆದಿದ್ದರು ಎಂಬುದಾಗಿ ಸಂಜಯ್ ಝಾ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದರು. ಅದು ನಿಜವಾದ ಕಾಂಗ್ರೆಸ್ ಆಗಿತ್ತು. ಅಲ್ಲಿ ಪ್ರಜಾಪ್ರಭುತ್ವ, ಉದಾರತೆ, ಸಹಿಷ್ಣುತೆ ಎಲ್ಲವೂ ಒಳಗೊಂಡಿತ್ತು. ಆದರೆ ಈಗ ನಾವು ಈ ಮೌಲ್ಯಗಳಿಂದ ದೂರ ಸರಿಯುತ್ತಿದ್ದೇವೆ ಎಂದು ಟ್ವೀಟ್‍ನಲ್ಲಿ ಅವರು ಅಸಮಾಧಾನ ಹೊರಹಾಕಿದ್ದಾರೆ.

ಎರಡು ಲೋಕಸಭೆ ಹಾಗೂ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಭಾರೀ ಹಿನ್ನಡೆ ಅನುಭವಿಸಿದೆ. ಇದರ ಹೊರತಾಗಿಯೂ ಪಕ್ಷ ಮೇಲೇಳಲು ಮತ್ತು ತುರ್ತು ಪ್ರಜ್ಞೆಯೊಂದಿಗೆ ಕೆಲಸ ಮಾಡಲು ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ ಎಂದು ಸಂಜಯ್ ಝಾ ಲೇಖನದಲ್ಲಿ ಉಲ್ಲೇಖಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ನಾಯಕತ್ವದ ವಿಷಯ ಬಂದಾಗ ಸೋನಿಯಾ ಗಾಂಧಿ ಕಳೆದ ಆಗಸ್ಟ್‍ನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯನ್ನು ಮತ್ತೊಮ್ಮೆ ವಹಿಸಿಕೊಂಡಿದ್ದರು. ಆದರೆ ಈ ವ್ಯವಸ್ಥೆಯು ತಾತ್ಕಾಲಿಕ ವಾಗಿದೆ ಮತ್ತು ಶೀಘ್ರದಲ್ಲೇ ಪಕ್ಷವು ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡುತ್ತದೆ ಎಂದೂ ಹೇಳಿದ್ದರು. ಆದರೆ ಮುಂದೆ ಆದದ್ದು ಬೇರೆನೇ ಎಂಬುದಾಗಿಯೂ ಅವರು ಲೇಖನದಲ್ಲಿ ಉಲ್ಲೇಖಿಸಿದ್ದರು. ವಕ್ತಾರ ಸ್ಥಾನದಿಂದ ವಜಾ ಮಾಡಿದ ನಂತರ ಮಾತನಾಡಿರುವ ಝಾ, ಇನ್ನು ಮುಂದೆಯೂ ತಾನು ಪಕ್ಷದ ಶಿಸ್ತಿನ, ಭಯರಹಿತ ಸಿದ್ಧಾಂತದ ಸೈನಿಕನಾಗಿ ಪಕ್ಷದಲ್ಲಿ ಇರುತ್ತೇನೆ ಎಂದಿದ್ದಾರೆ.

Translate »