ಗುಜರಾತ್‍ನಲ್ಲಿ ಸ್ಯಾಂಟ್ರೋ ರವಿ ಬಂಧನ
ಮೈಸೂರು

ಗುಜರಾತ್‍ನಲ್ಲಿ ಸ್ಯಾಂಟ್ರೋ ರವಿ ಬಂಧನ

January 14, 2023

ಮೈಸೂರು, ಜ.13(ಎಸ್‍ಬಿಡಿ)- ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕ ರಣದ ಆರೋಪಿ ಸ್ಯಾಂಟ್ರೋ ರವಿ ಅಲಿ ಯಾಸ್ ಕೆ.ಎಸ್.ಮಂಜುನಾಥನನ್ನು ಬಂಧಿ ಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಪರ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್, ಸ್ಯಾಂಟ್ರೋ ರವಿ (51 ವರ್ಷ) ಹಾಗೂ ಆತನ ಸಹಚರರಾದ ರಾಮ್‍ಜೀ(45) ಹಾಗೂ ಸತೀಶ್‍ಕುಮಾರ್ (35)ನನ್ನು ಶುಕ್ರವಾರ ಮಧ್ಯಾಹ್ನ ಗುಜ ರಾತ್‍ನ ಅಹಮದಾಬಾದ್ ನಗರದ ಬಳಿ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮಧುಸೂದನ್ ಅಲಿಯಾಸ್ ಮಧು ಎಂಬಾತನನ್ನು ಈಗಾಗಲೇ ದಸ್ತಗಿರಿ ಮಾಡಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಶೀಘ್ರ ಕರೆತರಲಾಗುವುದು: ಸ್ಯಾಂಟ್ರೋ ರವಿ, ರಾಮ್‍ಜೀ ಹಾಗೂ ಸತೀಶ್ ಕುಮಾರ್‍ನನ್ನು ಗುಜರಾತ್‍ನ ನ್ಯಾಯಾಲಯಕ್ಕೆ ಹಾಜರುಪಡಿಸಿ, ಟ್ರಾನ್ಸಿಟ್ ರಿಮಾಂಡ್ ಆರ್ಡರ್(ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಬಂಧಿತ ವ್ಯಕ್ತಿಯನ್ನು ಬೇರೆ ರಾಜ್ಯಕ್ಕೆ ಸಾಗಿಸುವ ಉದ್ದೇಶಕ್ಕಾಗಿ ಪೆÇಲೀಸ್ ಕಸ್ಟಡಿಗೆ ಒಪ್ಪಿಸುವ ಆದೇಶ) ಪಡೆದು ಬೆಂಗಳೂರಿಗೆ ಕರೆತರಲಾಗುವುದು. ಪ್ರಯಾಣ ಅವಧಿ ಹೊರತಾಗಿ 24 ಗಂಟೆ ವಿಚಾರಣೆ ನಡೆಸಲು ಅವಕಾಶವಿರುತ್ತದೆ. ನಿಯಮಾನುಸಾರ ಶನಿವಾರ ಬೆಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಶೀಘ್ರವೇ ಮೈಸೂರು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಸ್ಯಾಂಟ್ರೋ ರವಿಗೆ ಇತರೆ ಮೂವರು ಆರೋಪಿಗಳು ಆಶ್ರಯ ನೀಡಿರುವುದಲ್ಲದೆ ಈ ಪ್ರಕರಣದಲ್ಲಿ ಮತ್ಯಾವ ರೀತಿಯ ಪಾತ್ರವಿದೆ ಎನ್ನುವುದು ವಿಚಾರಣೆಯಲ್ಲಿ ತಿಳಿಯಲಿದೆ ಎಂದರು.

ರೂಪ ಬದಲಿಸಿಕೊಂಡಿದ್ದ: ತಲೆ ತುಂಬ ಕೂದಲು, ಕನ್ನಡಕ ಧರಿಸಿರುವ ಸ್ಯಾಂಟ್ರೋ ರವಿ ಫೋಟೋಗಳು ಹೆಚ್ಚು ಹರಿದಾಡಿದ್ದವು. ಆದರೆ ಇಂದು ಪೊಲೀಸರಿಗೆ ಸಿಕ್ಕಿಬಿದ್ದಾಗ ಆತ ಮೀಸೆ ತೆಗೆದಿದ್ದ, ಹಳೆಯ ಫೋಟೋ ರೀತಿ ತಲೆಯಲ್ಲಿ ಕೂದಲಿರಲಿಲ್ಲ. ತುಂಬು ತೋಳಿನ ಸ್ವೆಟ್ಟರ್ ಧರಿಸಿದ್ದ. ಬಂಧನದ ವೇಳೆ ತೆಗೆದ ಸ್ಯಾಂಟ್ರೋ ರವಿ ಫೋಟೋ ತೋರಿಸಿದ ಎಡಿಜಿಪಿ ಅಲೋಕ್ ಕುಮಾರ್ ಅವರು, ಸ್ಯಾಂಟ್ರೋ ರವಿ ಹೊಸಬನಲ್ಲ, ಹಳೆಯ ಕ್ರಿಮಿನಲ್. ಹೇಗೆ ಪರಾರಿಯಾಗಬೇಕು, ಪೊಲೀಸ ರಿಂದ ಹೇಗೆ ತಪ್ಪಿಸಿಕೊಳ್ಳಬೇಕೆನ್ನುವುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ನಮ್ಮ ಪೊಲೀಸರೂ ಕೂಡ ಅತ್ಯಂತ ಚಾಣಾಕ್ಷತನದಿಂದ ನಿರಂತರ ಪರಿಶ್ರಮ ದಿಂದ ಆತನನ್ನು ಬಂಧಿಸಿದ್ದಾರೆ ಎಂದು ಹೇಳಿದರು.

ಮೂರು ಮನೆ ಪರಿಶೀಲನೆ: ದೂರು ನೀಡಿರುವ ಸಂತ್ರಸ್ತೆ ಹಾಗೂ ಒಡನಾಡಿ ಸಂಸ್ಥೆಯವರು ಇನ್ನಿತರರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಮೂರ್ನಾಲ್ಕು ದಿನಗಳ ಹಿಂದೆ ದಟ್ಟಗಳ್ಳಿಯ ಮನೆಯೊಂದನ್ನು ಪರಿಶೀಲಿಸಲಾಗಿತ್ತು. ಇಂದು ದಟ್ಟಗಳ್ಳಿಯಲ್ಲಿರುವ ಮತ್ತೊಂದು ಮನೆ ಹಾಗೂ ಬೆಂಗಳೂರಿನ ಆರ್‍ಆರ್ ನಗರದ ಮನೆಯನ್ನು ಪರಿಶೀಲಿಸಿ, ಕೆಲವು ವಸ್ತುಗಳನ್ನು ವಶಪಡಿಸಿಕೊಂಡು ಸಂರಕ್ಷಿಸಲಾ ಗಿದೆ. ಸ್ಯಾಂಟ್ರೋ ರವಿ ವಿರುದ್ಧ ಒಟ್ಟು 28 ಪ್ರಕರಣಗಳಿವೆ. ಅದರಲ್ಲಿ ಎಷ್ಟು ನ್ಯಾಯಾಲಯದಲ್ಲಿ ಬಾಕಿ ಇವೆ, ಎಷ್ಟು ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಎಲ್ಲವನ್ನೂ ಪರಿಶೀಲನೆ ಮಾಡಬೇಕಿದೆ. ಇಲ್ಲಿಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಆ ವಂಚಕನ ವಿರುದ್ಧ ಆರೋಪ ಸಂಬಂಧ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಕಠಿಣ ಶಿಕ್ಷೆ ಕೊಡಿಸುವ ಗುರಿಯೊಂದಿಗೆ ತನಿಖೆ ಮುಂದುವರೆಸುತ್ತೇವೆ. ಆತನಿಗೆ ಯಾರು, ಯಾವ ರೀತಿ ಸಹಾಯ ಮಾಡಿದ್ದಾರೆ ಎನ್ನುವುದನ್ನು ಕೂಲಂಕುಶವಾಗಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

ಪ್ರಶಂಸೆ, ಬಹುಮಾನ: ಕಾರ್ಯಾಚರಣೆಯಲ್ಲಿ ಭಾಗಿಯಾದ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬನೋತ್, ಡಿಸಿಪಿಗಳಾದ ಮುತ್ತುರಾಜ್, ಎಂ.ಎಸ್.ಗೀತ, ರಾಮನಗರ ಎಸ್ಪಿ ಡಾ.ಸಂತೋಷ್ ಬಾಬು, ಮಂಡ್ಯ ಎಸ್ಪಿ ಎನ್.ಯತೀಶ್, ರಾಯಚೂರು ಎಸ್ಪಿ ಬಿ.ನಿಖಿಲ್, ಪ್ರಕರಣದ ತನಿಖಾಧಿಕಾರಿ ಎನ್‍ಆರ್ ವಿಭಾಗದ ಎಸಿಪಿ ಎಂ.ಶಿವಶಂಕರ್, ಸಿಸಿಬಿ ಎಸಿಪಿ ಅಶ್ವಥ್ ನಾರಾಯಣ, ನರಸಿಂಹರಾಜ ಠಾಣೆ ಇನ್ಸ್‍ಪೆಕ್ಟರ್ ಅಜರುದ್ದೀನ್, ಸಿಬ್ಬಂದಿ ಮಂಜುನಾಥ್, ಮಹೇಶ್, ವಿದ್ಯಾರಣ್ಯಪುರಂ ಇನ್ಸ್‍ಪೆಕ್ಟರ್ ಜಿ.ಸಿ.ರಾಜು, ಮೇಟಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ದಿವಾಕರ್, ವಿಜಯನಗರ ಠಾಣೆಯ ಬಿ.ಎಸ್.ರವಿಶಂಕರ್, ಬೀಚನಹಳ್ಳಿ ಠಾಣೆಯ ಜಯಪ್ರಕಾಶ್, ಸಿಸಿಬಿ ಇನ್ಸ್‍ಪೆಕ್ಟರ್‍ಗಳಾದ ಜಿ.ಶೇಖರ್, ಎ.ಮಲ್ಲೇಶ್, ಲಷ್ಕರ್ ಠಾಣೆ ಪಿ.ಪಿ.ಸಂತೋಷ್, ಕೆ.ಆರ್.ಠಾಣೆ ಎನ್.ವಿ.ಮಹೇಶ್, ಸೆನ್ ಠಾಣೆ ಜಯಕುಮಾರ್, ಚಾಮರಾಜನಗರ ಪೂರ್ವ ಠಾಣೆ ಎ.ಆನಂದ್, ಸಂಚಾರ ಠಾಣೆಯ ನಂದೀಶ್ ಕುಮಾರ್, ಚನ್ನರಾಯಪಟ್ಟಣ ಠಾಣೆಯ ಕೆ.ಎಂ.ವಸಂತ್, ಸಾಲಿಗ್ರಾಮದ ವೃತ್ತದ ಕೆ.ಎಂ.ವಸಂತ್, ಸೆನ್ ಪೊಲೀಸ್ ಠಾಣೆ ರವಿಕುಮಾರ್ ಅವರನ್ನೊಳಗೊಂಡ ತಂಡವನ್ನು ಎಡಿಜಿಪಿ ಮುಕ್ತಕಂಠದಿಂದ ಪ್ರಶಂಶಿಸಿದರು. ಆರೋಪಿಯನ್ನು ಬಂಧಿಸಿ ಕರ್ನಾಟಕ ಪೊಲೀಸ್ ಗೌರವ ಉಳಿಸಿದ್ದಾರೆ. ಈ ತಂಡಕ್ಕೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಡಿಜಿ ಅಭಿನಂದನೆ ತಿಳಿಸಿದ್ದು, ಬಹುಮಾನ ಘೋಷಿಸಿದ್ದಾರೆ ಎಂದರು. ಸ್ಯಾಂಟ್ರೋ ರವಿ ವಂಚಿಸಿ ಮದುವೆಯಾಗಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ, ವರದಕ್ಷಿಣೆ ಕಿರುಕುಳ ನೀಡಿ, ಸುಳ್ಳು ಪ್ರಕರಣ ದಾಖಲಿಸಿದ್ದಾಗಿ ಆತನ 2ನೇ ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ವಿಜಯನಗರ ಠಾಣೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ, ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ, ಐಪಿಸಿ 506(ಉದ್ದೇಶಪೂರ್ವಕ ಅವಹೇಳನ, ಮನಶಾಂತಿ ಕೆಡಿಸುವ ಪ್ರಯತ್ನ), 504(ಕ್ರಿಮಿನಲ್ ಪಿತೂರಿ), 376 (ಅತ್ಯಾಚಾರ), 270 (ಪ್ರಾಣಹಾನಿಕರವಾದ ಸೋಂಕು ಹರಡುವ ಯತ್ನ), ಬಲವಂತದ ಗರ್ಭಪಾತ (313) ಹಾಗೂ 323(ಹಲ್ಲೆ), 498ಎ(ಕೌಟುಂಬಿಕ ದೌರ್ಜನ್ಯ) ಅಡಿ ಜ.2ರಂದು ಪ್ರಕರಣ ದಾಖಲಾಗಿತ್ತು.

Translate »