ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ, ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನ ಆಚರಣೆ
ಮೈಸೂರು

ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ, ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನ ಆಚರಣೆ

November 1, 2018

ಮೈಸೂರು:  ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 34ನೇ ಪುಣ್ಯ ಸ್ಮರಣೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಸರ್ದಾರ್ ಪಾಟೇಲ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಸಿ.ಹೆಚ್.ವಿಜಯಶಂಕರ್, ಅವರು, ಇಂದಿರಾಗಾಂಧಿ ಅವರದ್ದು ಸರಳ ವ್ಯಕ್ತಿತ್ವವಾಗಿತ್ತು. ಆದಿವಾಸಿ, ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ ಏಳಿಗೆಗೆ ನಾನು ಬದ್ಧ ಎನ್ನುತ್ತಾ ಅದೇ ಮಾರ್ಗದಲ್ಲಿ ನಡೆದರು. ಅವರು ತಮ್ಮ ಆಡಳಿತದಲ್ಲಿ ಬಡವರ ಹಿತರಕ್ಷಣೆಗೆ ಆದ್ಯತೆ ನೀಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಈ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿ ಪಾಗಿಟ್ಟ ಇಂದಿರಾ ಗಾಂಧಿ ಅವರನ್ನು ಸ್ಮರಿಸಿ ನಾವು ಅವರ ಆದರ್ಶಗಳನ್ನು ಜೀವಂತ ವಾಗಿಡಬೇಕು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ, ಜನತೆಗೆ ಸುಳ್ಳು ಹೇಳಿ ವಿಶ್ವಾಸ ಗಳಿಸುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಎಂಥ ಸಂದಿಗ್ಧ ಸ್ಥಿತಿಯಲ್ಲೂ ಸತ್ಯ ಹೇಳುವ ಮನೋಭಾವವನ್ನು ನಮ್ಮ ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕು. ಸತ್ಯ ಹೇಳಲು ಯಾರೂ ಭಯಪಡುವ ಅಗತ್ಯವಿಲ್ಲ. ಕಾಂಗ್ರೆಸ್ ಕುಟುಂಬ ರಾಜಕಾರಣದ ಪಕ್ಷ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಸ್ವಾತಂತ್ರ್ಯ ಭಾರತದಲ್ಲಿ ಸಂವಿಧಾನ ಆಶಯದಲ್ಲಿ ಸಾಮಾನ್ಯ ಜನರ ಧ್ವನಿಯಾಗಿ ದೇಶದ ಮುನ್ನಡೆಗೆ ಪಕ್ಷ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಕಾರ್ಮಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು, ಕಾಂಗ್ರೆಸ್‍ನ ಪ್ರಮುಖರಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಪ್ರಮುಖ ರಾಜಕೀಯ ಮುತ್ಸದ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಸ್ವಾತಂತ್ರ್ಯ ಸಂದರ್ಭದಲ್ಲಿಯೂ ಹೋರಾಟ ನಡೆಸಿದರಲ್ಲದೇ, ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ದೇಶದ ನಕ್ಷೆಯನ್ನು ಕಣ್ತುಂಬಿಕೊಳ್ಳಲು ಸರ್ದಾರ್ ಅವರ ಕೊಡುಗೆ ಅಪಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಾಸು, ಕಾಂಗ್ರೆಸ್ ವಕ್ತಾರೆ ಮಂಜುಳಾ ಮಾನಸ, ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಡಿ.ಈಶ್ವರ ಚಕ್ಕಡಿ, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »