ಕಾರಿನ ಗಾಜು ಒಡೆದು 2.9 ಲಕ್ಷ ರೂ. ಹಣ ಕಳವು
ಮೈಸೂರು

ಕಾರಿನ ಗಾಜು ಒಡೆದು 2.9 ಲಕ್ಷ ರೂ. ಹಣ ಕಳವು

November 1, 2018

ಮೈಸೂರು: ಕಾರಿನ ಗಾಜು ಒಡೆದು ಉದ್ಯಮಿಯೊಬ್ಬರ 2.9 ಲಕ್ಷ ರೂ. ನಗದು ಕಳವು ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನ ವಿವಿ ಮೊಹಲ್ಲಾದ ಹೆಚ್‍ಡಿಎಫ್‍ಸಿ ಬ್ಯಾಂಕ್ ಎದುರು ಇಂದು ಮಧ್ಯಾಹ್ನ ಸಂಭವಿಸಿದೆ.

ಮೈಸೂರಿನ ಗೋಕುಲಂ 3ನೇ ಹಂತದ ನಿವಾಸಿ ನಾರಾಯಣ ಅವರ ಮಗ ಶೇಖರ್ ಹಣ ಕಳೆದುಕೊಂಡವರು. ಕೆ.ಆರ್. ನಗರದಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿರುವ ಅವರು, ಇಂದು ಮಧ್ಯಾಹ್ನ 1.30 ಗಂಟೆ ವೇಳೆಗೆ ಗೋಕುಲಂನ ವಿಜಯಾ ಬ್ಯಾಂಕ್ ಶಾಖೆಯಲ್ಲಿ 4 ಲಕ್ಷ ರೂ. ಹಣ ಡ್ರಾ ಮಾಡಿ ಮಾರುತಿ ಸ್ವಿಫ್ಟ್ (ಕೆಎ 09, ಝಡ್1199) ಕಾರಿನಲ್ಲಿ ವಿವಿ ಮೊಹಲ್ಲಾದ ಟೆಂಪಲ್ ರಸ್ತೆಗೆ ಬಂದು 2,90,000 ರೂ.ಗಳನ್ನು ಬ್ಯಾಗ್‍ನಲ್ಲಿರಿಸಿ ಬ್ಯಾಗನ್ನು ಕಾರಿನ ಡ್ಯಾಷ್ ಬೋರ್ಡ್‍ನಲ್ಲಿಟ್ಟು ಕಾರನ್ನು ಹೆಚ್‍ಡಿಎಫ್‍ಸಿ ಬ್ಯಾಂಕಿನ ಮುಂದೆ ನಿಲ್ಲಿಸಿ ಬ್ಯಾಂಕ್‍ಗೆ ತೆರಳಿದ್ದರು.

ಬ್ಯಾಂಕಿನಿಂದ ಹೊರ ಬಂದಾಗ ಕಾರಿನ ಎಡ ಬದಿ ಮುಂದಿನ ಗಾಜು ಒಡೆದಿರು ವುದು ಕಂಡಿತು. ನೋಡಿದಾಗ ಹಣವಿದ್ದ ಬ್ಯಾಗ್ ನಾಪತ್ತೆಯಾಗಿರುವುದು ತಿಳಿಯಿತು. ತಕ್ಷಣ ಶೇಖರ್ ಅವರು ವಿವಿ ಪುರಂ ಠಾಣೆಗೆ ತೆರಳಿ ವಿಷಯ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ಇನ್ಸ್‍ಪೆಕ್ಟರ್ (ಇನ್‍ಚಾರ್ಜ್) ಪ್ರಕಾಶ ಹಾಗೂ ಸಿಬ್ಬಂದಿ ಮಹಜರು ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಠಾಣೆ ಪೊಲೀಸರು, ಸ್ಥಳದಲ್ಲಿರುವ ಸಿಸಿ ಕ್ಯಾಮರಾಗಳ ಫುಟೇಜಸ್‍ಗಳನ್ನು ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.ಶೇಖರ್ ಅವರು ಹಣ ಡ್ರಾ ಮಾಡಿ ಬರುತ್ತಿದ್ದುದನ್ನು ನೋಡಿರುವ ಖದೀಮ ಕಾರನ್ನು ಹಿಂಬಾಲಿಸಿ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Translate »