ಜೀವನದಲ್ಲಿ ತೃಪ್ತಿ, ಮಾನವೀಯತೆ ಮೌಲ್ಯ ಅಳವಡಿಸಿಕೊಳ್ಳಿ :ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಮೈಸೂರು

ಜೀವನದಲ್ಲಿ ತೃಪ್ತಿ, ಮಾನವೀಯತೆ ಮೌಲ್ಯ ಅಳವಡಿಸಿಕೊಳ್ಳಿ :ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

June 11, 2018

ಮೈಸೂರು:  ತೃಪ್ತಿ ಹಾಗೂ ಮಾನವೀಯತೆ ಮೌಲ್ಯ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ ಅವರು ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು.

ಮೈಸೂರಿನ ಕಲಾಮಂದಿರದಲ್ಲಿ ಭಾನು ವಾರ ಹಲವು ಸಂಘ ಸಂಸ್ಥೆಗಳ ಸಹಯೋಗ ದಲ್ಲಿ ಶಿವಮೊಗ್ಗದ ನಾಟ್ಯಶ್ರೀ ಯಕ್ಷಗಾನ ಕಲಾ ತಂಡ ಆಯೋಜಿಸಿದ್ದ `ಶ್ರೀಕೃಷ್ಣ ಕಥಾ-ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ತೃಪ್ತಿ ಗುಣವಿಲ್ಲದಿದ್ದರೆ ದುರಾಸೆಯ ರೋಗ ಅಂಟಿಕೊಂಡು ಪ್ರಾಮಾಣಿಕತೆ ಯನ್ನು ಬಲಿಪಡೆಯುತ್ತದೆ. ಮಾನವೀಯತೆ ಇಲ್ಲದಿದ್ದರೆ ಅನರ್ಥ ಬದುಕಾಗುತ್ತದೆ. ಈ ಎರಡೂ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜ ಸ್ವಚ್ಛವಾಗಿರುತ್ತದೆ ಎಂದು ಅಭಿಪ್ರಾಯಿಸಿದರು.

ನಾನು ಲೋಕಾಯುಕ್ತನಾಗುವ ಮೊದಲು ಕೂಪ ಮಂಡೂಕದಂತೆ ಸಮಾಜದಲ್ಲಿ ಎಲ್ಲರೂ ನನ್ನಂತೆ ಸುಖವಾಗಿದ್ದಾರೆಂದು ಭಾವಿಸಿದ್ದೆ. ಆದರೆ ಲೋಕಾಯುಕ್ತನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಸಮಾಜ ದಲ್ಲಿರುವ ದುಸ್ಥಿತಿಯನ್ನು ಅರಿತೆ. ಮುಖ್ಯ ವಾಗಿ ಸರ್ಕಾರದಿಂದ ಜನರಿಗಾಗುತ್ತಿರುವ ಅನ್ಯಾಯವನ್ನು ತಿಳಿದೆ. 5 ವರ್ಷಗಳಲ್ಲಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರ ವಿರುದ್ಧವೂ ನಮ್ಮ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. 750ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದೆವು ಎಂದು ತಿಳಿಸಿದ ಅವರು, ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ಪ್ರಾಮಾಣ ಕವಾಗಿ ನಡೆದು ಕೊಂಡರೆ ಹಗುರವಾಗಿ ಕಾಣುತ್ತಾರೆ. ತಾನೂ ತಿನ್ನುವುದಿಲ್ಲ, ಬೇರೊಬ್ಬರಿಗೂ ತಿನ್ನಲು ಅವಕಾಶ ಕೊಡುವುದಿಲ್ಲ ಎಂದು ಟೀಕಿಸು ತ್ತಾರೆಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ 50ರ ದಶಕದಿಂದಲೂ ಹಗರಣಗಳು ನಡೆದಿವೆ. ಹತ್ತರಲ್ಲೊಂದು ಹಗರಣ ಬೆಳಕಿಗೆ ಬರುತ್ತಿದೆಯಷ್ಟೆ. 2010 ರಲ್ಲಿ ಸುಮಾರು 70 ಸಾವಿರ ಕೋಟಿ ರೂ. ಕಾಮನವೆಲ್ತ್ ಹಗರಣ, 1.70 ಲಕ್ಷ ಕೋಟಿ ರೂ. 2ಜಿ ಸ್ಪೆಕ್ಟ್ರಮ್ ಹಗರಣ, 1.84 ಲಕ್ಷ ಕೋಟಿ ರೂ. ಕಲ್ಲಿದ್ದಲು ಹಗರಣ ಹೀಗೆ ಹಲವು ಭಾರೀ ಹಗರಣಗಳು ಬೆಳಕಿಗೆ ಬಂದಿವೆ. ಒಂದೊಂದು ಹಗರಣಗಳ ಮೊತ್ತವೂ ನಮ್ಮ ರಾಜ್ಯದ ಒಟ್ಟು ಬಜೆಟ್‍ಗೆ ಸಮವಾಗುವಂತಿವೆ. ಇದಕ್ಕೆಲ್ಲಾ ದುರಾಸೆಯೇ ಕಾರಣ. ಹಾಗೆಯೇ ರಸ್ತೆ ಅಪಘಾತದಲ್ಲಿ ಹರೀಶ್ ನಂಜಪ್ಪನ ದೇಹ ತುಂಡಾಗಿ ದ್ದರೂ ತನ್ನ ಕಣ್ಣುಗಳನ್ನು ದಾನ ಮಾಡಿ ಹೃದಯವಂತನಾದ. ಆದರೆ ಆತ ರಸ್ತೆಯಲ್ಲಿ ಒದ್ದಾಡುವಾಗ ಅಲ್ಲಿದ್ದವರು ಮಾನವೀಯತೆ ಮರೆತು ವೀಡಿಯೋ ಮಾಡುತ್ತಾ ನಿಂತಿದ್ದರು ಎಂದು ಹೇಳುವ ಮೂಲಕ ಎರಡು ಮೌಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ನೆಪಮಾತ್ರಕ್ಕೆ ಅಕಾಡೆಮಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ.ಎ. ಹೆಗಡೆ ದಂಟ್ಕಲ್ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯ ಮೌಲ್ಯಗಳು ಅಳಿ ಯುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ ಕಲೆ ಮತ್ತು ಸಾಹಿತ್ಯದ ಮೇಲಿನ ನಿರಾಸಕ್ತಿ. ಮನುಷ್ಯನ ಅಂತರಂಗವನ್ನು ಸಂಸ್ಕಾರಕ್ಕೆ ಒಳಪಡಿಸುವ ಕಲೆ-ಸಾಹಿತ್ಯದ ಪ್ರಭಾವ ಬಾಲ್ಯದಿಂದಲೇ ಬೀರುವಂತಾಗಬೇಕು. ಆಳುವ ವರ್ಗಕ್ಕೆ ಇದೆಲ್ಲಾ ಅರ್ಥವಾಗುವು ದಿಲ್ಲ. ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯನ್ನು 9 ತಿಂಗಳ ಹಿಂದಷ್ಟೆ ವಿಭಜಿಸಿ, ಅನುದಾನ, ಪ್ರಶಸ್ತಿ ಸೇರಿದಂತೆ ಎಲ್ಲವನ್ನೂ ಎರಡು ಭಾಗವಾಗಿ ಹಂಚಿ ದ್ದಾರೆ. ಇಂತಹ ಅಕಾಡೆಮಿ ಬಹುಮಟ್ಟಿಗೆ ನೆಪಮಾತ್ರವಾಗಿದ್ದು, ಸಮರ್ಪಕವಾಗಿ ಕೆಲಸ ಮಾಡುವುದು ಕಷ್ಟ. ಕಾರ್ಯಕ್ಷೇತ್ರದ ಬಗ್ಗೆಅರಿವಿಲ್ಲದಿರುವವರನ್ನು ಸಚಿವರ ನ್ನಾಗಿ ಮಾಡುವ ಸಂಪ್ರದಾಯ ಮುಂದು ವರಿದಿದೆ ಎಂದು ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿ ಸುವ ಪ್ರಯತ್ನ ನಡೆದಿದೆ. ಆದರೆ ಕನ್ನಡ ನಾಡಿನ ಕಲೆಯಾದ ಯಕ್ಷಗಾನವನ್ನು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತ ಗೊಳಿಸಿ, ಸಂಕುಚಿತಗೊಳಿಸಬಾರದು. ಕಚೇರಿ ಸ್ಥಳಾಂತರ ವಿಚಾರವಾಗಿ ಯಾವ ತಜ್ಞರ ಅಭಿಪ್ರಾಯವನ್ನೂ ಪಡೆದಿಲ್ಲ. ಯಕ್ಷಗಾನ ನಾಡಿನ ಕಲೆಯಾಗಿ ಸೀಮಾ ತೀತವಾಗಿ ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಕಚೇರಿ ಬೆಂಗಳೂರಿನಲ್ಲಿಯೇ ಇರ ಬೇಕೆಂದು ಅಭಿಪ್ರಾಯಿಸಿದ ಅವರು, ತೃಪ್ತಿ ಹೊರಗಿನ ವಸ್ತುಗಳಿಂದ ಸಿಗುವುದಲ್ಲ. ಅದು ಅಂತರಂಗದಲ್ಲೇ ಉದ್ಭವಿಸಿ, ಅರಳ ಬೇಕು. ಸುಖ-ದುಃಖವನ್ನು ತನ್ನದಲ್ಲ ಎಂದು ನಿರ್ಲಿಪ್ತತೆಯಿಂದ ಸ್ವೀಕರಿಸಬೇಕು ಎಂದು ಶ್ರೀಕೃಷ್ಣ ತನ್ನ ಬದುಕಿನಲ್ಲಿ ತೋರಿಸಿಕೊಟ್ಟಿದ್ದನ್ನು ಯಕ್ಷಗಾನ ಮೂಲಕ ಪ್ರಚುರಪಡಿಸುತ್ತಿರುವುದು ಅವಶ್ಯಕವಾಗಿದೆ ಎಂದರು.

ಚಾಮರಾಜನಗರದ ಉದ್ಯಮಿ, ಕಲಾ ಪೋಷಕ ಜಿ.ಎಂ.ಹೆಗಡೆ, ಕಾರ್ಯಕ್ರಮ ಸಂಘಟಕರಾದ ವಿದ್ವಾನ್ ದತ್ತಮೂರ್ತಿ ಭಟ್ ಶಿವಮೊಗ್ಗ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಚಂಡೆ ಮದ್ದಲೆ, ಗಾಯನದ ಹಿಮ್ಮೇಳದೊಂದಿಗೆ ಕುಮಾರಿ ನವ್ಯ ಭಟ್ ಅವರು ಶ್ರೀಕೃಷ್ಣನಾಗಿ ಅಭಿನಯಿಸಿ, ಪ್ರೇಕ್ಷಕರಿಗೆ ಯಕ್ಷಗಾನದ ರಸದೂಟ ಉಣಬಡಿಸಿದರು.

Translate »