ಮೈಸೂರು, ಆ.24(ಎಂಕೆ)-ಸುಮಾರು 6 ಅಡಿ ಆಳದ ವಾಟರ್ ವಾಲ್ವ್ ಚೇಂಬರ್ಗೆ ಸ್ಕೂಟರ್ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರಿನ ರಾಜ್ಕುಮಾರ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಇಲ್ಲಿನ ಶಕ್ತಿನಗರದ ನಿವಾಸಿ ದೇವರಾಜು (59) ಎಂಬುವರು ರಾತ್ರಿ 8 ಗಂಟೆಯಲ್ಲಿ ಯರಗನಹಳ್ಳಿ ಕಡೆಯಿಂದ ಸಾತಗಳ್ಳಿ ಕಡೆಗೆ ರಾಜ್ಕುಮಾರ್ ರಸ್ತೆಯಲ್ಲಿ ಬರುವಾಗ ನಿಯಂತ್ರಣ ತಪ್ಪಿದ ಪರಿಣಾಮ ಬಿಎಸ್ಎನ್ಎಲ್ ಕಚೇರಿ ಸಮೀಪದ ರಸ್ತೆ ಬದಿ ಯಲ್ಲಿದ್ದ ಸುಮಾರು ಆರು ಅಡಿ ಆಳದ ವಾಟರ್ ವಾಲ್ವ್ ಗುಂಡಿಯೊಳಗೆ ಸ್ಕೂಟರ್ ಉರುಳಿಬಿದ್ದರೆ, ಸವಾರ ದೇವರಾಜು ಗುಂಡಿಯ ಹೊರಗಡೆ ಬಿದ್ದಿದ್ದಾರೆ.
ಘಟನೆಯಿಂದ ಬೈಕ್ ಸವಾರ ದೇವರಾಜು ಮುಖ, ಕೈ-ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಂದು ವೇಳೆ ಅವರು ಸ್ಕೂಟರ್ನೊಂದಿಗೆ ಗುಂಡಿಯೊಳಗೆ ಬಿದ್ದಿದ್ದರೆ, ಸಾವನ್ನಪ್ಪುವ ಸಾಧ್ಯತೆಯಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಎಎಸ್ಐ ರಾಜು, ಹೆಡ್ಕಾನ್ಸ್ಸ್ಟೇಬಲ್ ಸೈಯದ್ ನೂರಿ ಅಕ್ಕ-ಪಕ್ಕದ ನಿವಾಸಿಗಳ ಸಹಾಯದಿಂದ ಗುಂಡಿಯೊಳಗೆ ಬಿದ್ದಿದ್ದ ಸ್ಕೂಟರ್ ಅನ್ನು ಮೇಲೆತ್ತಿದ್ದು, ಗಾಯ ಗೊಂಡಿದ್ದ ದೇವರಾಜು ಅವರನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.