ಸಿದ್ಧಗಂಗೆ: ಶ್ರೀ ವಿಳಂಬಿನಾಮ ಸಂವತ್ಸರದ ಉತ್ತರಾಯಣ ಪುಣ್ಯಕಾಲ. ಹೇಮಂತ ಋತುವಿನ ಪಾಡ್ಯ ದಿನ. ಮಂಗಳವಾರ ಸಂಜೆ 5ರ ವೇಳೆ. ಪಶ್ಚಿಮ ದಿಗಂತದ ಅಂಚಿನತ್ತ ಸಾಗುತ್ತಿದ್ದ ಸೂರ್ಯ ನಿರ್ಗಮಿಸುವುದನ್ನೂ ಮರೆತು ಭುವಿಯತ್ತ ತಿರುಗಿ ಒಂದೆಡೆ ದಿಟ್ಟಿಸಿ ನೋಡುತ್ತಲೇ ಇದ್ದ. ತುಮಕೂರು ಜಿಲ್ಲೆಯ ಸಿದ್ಧಗಂಗೆಯ ಬೆಟ್ಟದ ಭಾರೀ ಬಂಡೆಗಳು, ಬೃಹತ್ ಕಟ್ಟಡಗಳ ನಡುವೆ ಮತ್ತೊಂದು ಸೂರ್ಯನ ಮೆರವಣಿಗೆ ನಿಧಾನವಾಗಿ ಸಾಗುತ್ತಿತ್ತು. ಬಗೆ ಬಗೆ ಹೂವುಗಳಿಂದ ಅಲಂಕೃತವಾದ ರುದ್ರಾಕ್ಷಿ ರಥದಲ್ಲಿ ಮಂದಸ್ಮಿತರಾಗಿ ಆಸೀನರಾಗಿದ್ದ ಕಾವಿಧಾರಿ ಸೂರ್ಯನ ತೇಜಸ್ಸು ಕಂಡು ರವಿತೇಜನೇ ಬೆರಗಾಗಿದ್ದ!
ಮಹಾನ್ ಮಾನವತಾವಾದಿ, ತ್ರಿವಿಧ ದಾಸೋಹಿ, ಶತಮಾನ ದಾಟಿದ ಕಾಯಕ ಯೋಗಿ, ನಡೆದಾಡುವ ದೇವರನ್ನು ಕಳುಹಿಸಿಕೊಡಲು ಮನಸ್ಸಿಲ್ಲದ ಭಕ್ತಗಣ, ಕೊನೆಯ ಬಾರಿಗೆಂಬಂತೆ ನಡೆಯಲೂ ಬಿಡದೆ, 6 ಅಡಿ ಎತ್ತರದ ರುದ್ರಾಕ್ಷಿ ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆದೊಯ್ಯುತ್ತಿತ್ತು. ಸಂಜೆ 5.14ರ ವೇಳೆಗೆ ಆರಂಭಗೊಂಡ ಮೆರವಣಿಗೆ ಸಂಜೆ 5.50 ಕಳೆದರೂ ಮುಗಿದೇ ಇರಲಿಲ್ಲ. ಆ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಲೇ ದಿನಕರ ದಿನದ ಕೆಲಸ ಮುಗಿಯಿತೆಂಬಂತೆ ಪಶ್ಚಿಮ ದಿಗಂತದಲ್ಲಿ ನಿದಾನವಾಗಿ ಲೀನವಾದ.
ಮೆರವಣಿಗೆ: ಹಿರಿಯ ಶ್ರೀಗಳ ಸಂಗವನ್ನು ಬಿಡಲಾರೆ ಎಂಬ ಭಾವದಲ್ಲಿ ರುದ್ರಾಕ್ಷಿ ರಥದಲ್ಲಿ ಲಿಂಗ ಕಾಯದ ಮುಂದೆಯೇ ಸಿದ್ಧಗಂಗೆ ಮಠದ ಕಿರಿಯ ಸ್ವಾಮೀಜಿ ಕುಳಿತಿದ್ದರೆ, ಹಲವು ಹಿರಿಯ-ಕಿರಿಯ ಸ್ವಾಮೀಜಿಗಳು ರುದ್ರಾಕ್ಷಿ ರಥದ ಮುಂದೆ ನಡೆದೇ ಸಾಗಿದ್ದರು. ಮೆರವಣಿಗೆ ವೇಳೆ ನೂಕು ನುಗ್ಗಲಾಗದಂತೆ ಮಾರ್ಗದ ಎರಡೂ ಬದಿ ಪೊಲೀಸರ ಪಡೆ ಸಾಲಾಗಿ ನಿಂತು ರಕ್ಷಣಾ ಗೋಡೆ ರಚಿಸಿದ್ದರೆ, ಅವರ ಬೆನ್ನ ಹಿಂದೆಯೇ ಲಕ್ಷಾಂತರ ಭಕ್ತರು ನಿಂತು ಶ್ರೀಗಳ ಮಂದಸ್ಮಿತ ಮುಖವನ್ನು ಕೊನೆಯ ಬಾರಿಗೆಂಬಂತೆ ಕಣ್ತುಂಬಿಕೊಂಡರು. ಅಕ್ಕಪಕ್ಕದ ಕಟ್ಟಡಗಳ ಮೇಲೆಲ್ಲ ವಿದ್ಯಾರ್ಥಿಗಳ ಜೈಕಾರ ಮೊಳಗಿಸುತ್ತಿದ್ದರು. ಮೆರವಣಿಗೆಯ ಮೊದಲ ಸಾಲಿನಲ್ಲಿ ನಂದಿಕಂಬ ಕುಣಿತ ಸಾಗಿದ್ದರೆ, ವಿವಿಧ ಜನಪದ ಕಲಾತಂಡಗಳು ಕಲಾ ಪ್ರದರ್ಶನದೊಂದಿಗೆ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದವು.
ಶ್ರೀಗಳ ಸ್ತುತಿ ಮತ್ತು ಶಿವ-ಬಸವ ಮಂತ್ರ ಘೋಷಗಳ ನಡುವೆ ಬಲು ನಿದಾನವಾಗಿ ಸಾಗಿದ ರಥ ಹಳೆ ಮಠದ ಬಳಿಯೇ ಇದ್ದ ಕ್ರಿಯಾ ಸಮಾಧಿ ಸ್ಥಳವನ್ನು ತಲುಪಿದಾಗ ಸಂಜೆ 5.52 ಆಗಿತ್ತು. ಪಡುವಣದಲ್ಲಿ ಹೊನ್ನವರ್ಣದ ಅಲಂಕಾರವಾಗಿತ್ತು.
ರುದ್ರಾಕ್ಷಿ ಪಲ್ಲಕ್ಕಿಯಲ್ಲಿ ಪದ್ಮಾಸನ ಹಾಕಿ ಆಸೀನರಾಗಿದ್ದ ನಡೆದಾಡುವ ದೇವರ ಲಿಂಗಕಾಯವನ್ನು ಪಲ್ಲಕ್ಕಿ ಸಮೇತವೇ ರಥದಿಂದ ಸ್ವಾಮೀಜಿಗಳೇ ಇಳಿಸಿಕೊಂಡು, ಕ್ರಿಯಾ ಸಮಾಧಿಗೆ ಸಿದ್ಧವಾಗಿದ್ದ ಭವನದ ಅಂಗಳದಲ್ಲೇ ತಾತ್ಕಾಲಿಕವಾಗಿ ನಿರ್ಮಿಸಿದ್ದ ವೇದಿಕೆ ಮೇಲಿರಿಸಿದರು. ಬಳಿಕ ರಾಜ್ಯ ಸರ್ಕಾರದ ವತಿಯಿಂದ ಗೌರವ ಸಲ್ಲಿಕೆ ನಡೆಯಿತು. ಮೊದಲಿಗೆ ನಾಲ್ವರು ಪೊಲೀಸ್ ಸಿಬ್ಬಂದಿ ಹಿಡಿದು ಬಂದ ರಾಷ್ಟ್ರಧ್ವಜವನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಶ್ರೀಗಳ ಮಡಿಲಿನಲ್ಲಿರಿಸಿ ನಮಿಸಿ ಸರ್ಕಾರಿ ಗೌರವ ಅರ್ಪಿಸಿದರು. ಬಳಿಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು.
ನಂತರ ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿ ಯೂರಪ್ಪ, ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ಪುಷ್ಪನಮನ ಸಲ್ಲಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಈಶ್ವರ ಖಂಡ್ರೆ, ಮಾಜಿ ಸಚಿವ ಎಸ್.ಆರ್. ಪಾಟೀಲ್ ಮತ್ತಿತರರು ಶ್ರೀಗಳಿಗೆ ಅಂತಿನ ನಮನ ಸಲ್ಲಿಸಿದರು.
ಈ ಸಂದರ್ಭ ಶ್ರೀಗಳಿಗೆ ಗೌರವಪೂರ್ವಕವಾಗಿ ಭಕ್ತರು ಜಯಘೋಷ ಮೊಳಗಿಸಿದರೆ, ಇನ್ನೊಂದೆಡೆ ಪೊಲೀಸ್ ಬ್ಯಾಂಡ್ ನಡೆದಿತ್ತು. ಇದೇ ವೇಳೆ ಸಶಸ್ತ್ರ ಪಡೆಯ ಗೌರವ ರಕ್ಷಣೆ ತಂಡದ 18 ಪೊಲೀಸ್ ಸಿಬ್ಬಂದಿ ಹಲವು ಸುತ್ತು ಕುಶಾಲತೋಪು ಸಿಡಿಸಿದರು. ಬಳಿಕ ಪೊಲೀಸ್ ಬ್ಯಾಂಡ್‍ನಲ್ಲಿ ರಾಷ್ಟ್ರಗೀತೆ ನುಡಿಸಲಾಯಿತು. ಆ ಬಳಿಕ ಶ್ರೀಗಳ ಮಡಿಲಲ್ಲಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿಗಳ ಮೂಲಕ ಶ್ರೀ ಮಠದ ಕಿರಿಯ ಸ್ವಾಮೀಜಿಗಳಿಗೆ ಹಸ್ತಾಂತರಿಸಲಾಯಿತು. ಅಲ್ಲಿಗೆ, ಅವಿರತ ಶ್ರಮಿಸಿದ ಕಾಯಕ ಯೋಗಿಗೆ ಸರ್ಕಾರಿ ಗೌರವ ಸಲ್ಲಿಸುವ ಕಾರ್ಯ ಪೂರ್ಣಗೊಂಡಿತು. ಅಷ್ಟರ ವೇಳೆಗೆ ಸಂಜೆ 6.19 ಸಮಯವಾಗಿತ್ತು. ಬಳಿಕ ಕ್ರಿಯಾ ಸಮಾಧಿ ಸ್ಥಳಕ್ಕೆ ಶ್ರೀಗಳ ಲಿಂಗಕಾಯವನ್ನು ಪಲ್ಲಕ್ಕಿ ಸಮೇತವೇ ಹಲವು ಸ್ವಾಮೀಜಿಗಳೇ ಮಂತ್ರ ಘೋಷಗಳ ಜತೆಗೆ ಕೊಂಡೊಯ್ದರು. ಆ ಮೂಲಕ ದಶಕಗಳ ಕಾಲ ತಮ್ಮೆಲ್ಲರಿಗೂ ಮಹಾ ಗುರುವಾಗಿದ್ದ, ಮಾರ್ಗದರ್ಶಕರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಗುರು ನಮನ ಸಲ್ಲಿಸಿದರು.