ಎಲ್ಲರೂ ದಯವಿಟ್ಟು ಪ್ರಸಾದ ಸ್ವೀಕರಿಸಿ: ಭಕ್ತರಿಗೆ ಶ್ರೀಮಠದ ಮಕ್ಕಳ ಮನವಿ
ಮೈಸೂರು

ಎಲ್ಲರೂ ದಯವಿಟ್ಟು ಪ್ರಸಾದ ಸ್ವೀಕರಿಸಿ: ಭಕ್ತರಿಗೆ ಶ್ರೀಮಠದ ಮಕ್ಕಳ ಮನವಿ

January 23, 2019

ತುಮಕೂರು: ಸಿದ್ದಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಹೇಗೆ ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದರೋ, ಅವರ ಮಠದ ಪುಟ್ಟ ವಿದ್ಯಾರ್ಥಿಗಳೂ ಅದೇ ಕಾಯಕವನ್ನು ಮುಂದುವರಿಸಿದ್ದಾರೆ.

ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಎಲ್ಲಾ ಭಕ್ತಾದಿಗಳೂ ನಂತರ ಶ್ರೀ ಮಠದಲ್ಲಿ ಪ್ರಸಾದ ಸ್ವೀಕರಿಸಿಯೇ ತೆರಳಬೇಕು. ಆ ಮೂಲಕ ಶ್ರೀಗಳ ಮನದಾಸೆಯನ್ನು ಪೂರೈಸಬೇಕು ಎಂದು ಮಠದ ಶಿಷ್ಯರು, ಶ್ರೀಗಳ ಅನುಯಾಯಿಗಳು ಭಕ್ತಾದಿಗಳಿಗೆ ಮೈಕ್ ಮೂಲಕ ವಿನಂತಿ ಮಾಡುತ್ತಿದ್ದರು.

ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಸಾವಿರಾರು ಗಣ್ಯರು ಧಾವಿಸಿದ್ದರು. ಅವರೆಲ್ಲರಿಗೂ ಶ್ರೀ ಮಠದ ವಿದ್ಯಾರ್ಥಿಗಳದ್ದು ಒಂದೇ ಮನವಿ. ಮಠಕ್ಕೆ ಬಂದವರು ಹಾಗೇ ಹೋಗಬೇಡಿ. ದಯಮಾಡಿ ಪ್ರಸಾದ ಸ್ವೀಕರಿಸಿಯೇ ಹೋಗಿ ಎಂಬುದಾಗಿತ್ತು. ವಿದ್ಯಾರ್ಥಿಗಳು ಅಲ್ಲಲ್ಲಿಯೇ ನಿಂತು ಭಕ್ತ ಸಮೂಹಕ್ಕೆ ಪ್ರಸಾದ ನೀಡುವ ಸ್ಥಳದ ಕಡೆ ಕೈತೋರಿಸುತ್ತಿದ್ದರು. ಇನ್ನು ಕೆಲ ವಿದ್ಯಾರ್ಥಿಗಳು ಬಿಸಿಲಲ್ಲಿ ದಣಿದು ಬಂದವರ ದಾಹ ಇಂಗಿಸಲು ಶ್ರಮಿಸುತ್ತಿದ್ದರು. ಶ್ರೀಗಳ ಅಂತಿಮ ದರ್ಶನಕ್ಕೆ ಉದ್ದದ ಸರದಿ ಸಾಲಿನಲ್ಲಿ ನಿಂತಿರುತ್ತಿದ್ದ ಲಕ್ಷಾಂತರ ಭಕ್ತಾದಿಗಳಿಗೆ ಕುಡಿಯುವ ನೀರನ್ನು ಪೂರೈಸುವ ಕಾಯಕವನ್ನೂ ವಿದ್ಯಾರ್ಥಿಗಳು ಮಾಡುತ್ತಿದ್ದರು. ಆ ಮೂಲಕ ಶ್ರೀಗಳ ಆಶಯವನ್ನು ತಪ್ಪದೇ ಪಾಲಿಸಿದರು. ಮಠಕ್ಕೆ ಬಂದ ಭಕ್ತಾದಿಗಳು ಎಂದಿಗೂ ಹಸಿವಿನಿಂದ ಹೋಗ ಬಾರದು ಎಂಬ ಶ್ರೀಗಳ ದಾಸೋಹ ಕಾಯಕವನ್ನು ಶ್ರೀ ಮಠದ ವಿದ್ಯಾರ್ಥಿಗಳು ಚಾಚು ತಪ್ಪದೆ ಪಾಲಿಸುವ ಮೂಲಕ ಶ್ರೀಮಠದ ದಶಕಗಳ ಸಂಪ್ರದಾಯವನ್ನು ಮುಂದುವರಿಸಿದರು.

Translate »