ನಗರ, ಗ್ರಾಮಾಂತರ ಪ್ರದೇಶ ಸೇರಿದಂತೆ ನಂಜನಗೂಡು ವ್ಯಾಪ್ತಿಯ 25 ವಲಯಗಳು ಸೀಲ್‍ಡೌನ್
ಮೈಸೂರು ಗ್ರಾಮಾಂತರ

ನಗರ, ಗ್ರಾಮಾಂತರ ಪ್ರದೇಶ ಸೇರಿದಂತೆ ನಂಜನಗೂಡು ವ್ಯಾಪ್ತಿಯ 25 ವಲಯಗಳು ಸೀಲ್‍ಡೌನ್

April 23, 2020

ನಂಜನಗೂಡು, ಏ.22(ರವಿ)-ಕೊರೊನಾ ರೆಡ್‍ಜೋನ್ ಆಗಿ ಗುರ್ತಿಸಿಕೊಂಡಿರುವ ನಂಜನಗೂಡಿನಲ್ಲಿ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶ ಮೇರೆಗೆ ಬುಧವಾರ ನಗರದ 14 ಹಾಗೂ ಗ್ರಾಮೀಣ ಭಾಗದ 11 ಪ್ರದೇಶಗಳು ಸೇರಿದಂತೆ 25 ವಲಯಗಳನ್ನು ತಾಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಸೀಲ್‍ಡೌನ್ ಮಾಡಿ, ಜನಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದ್ದಾರೆ.

ತಾಲೂಕಿನ ತಾಂಡವಪುರ, ಬಸವನಪುರ, ಕತ್ವಾಡಿಪುರ, ಕೂಗಲೂರು, ಬ್ಯಾಳಾರು, ದೇವರಸನಹಳ್ಳಿ, ದೇವೀರಮ್ಮನಹಳ್ಳಿ ಸೇರಿದಂತೆ ಗ್ರಾಪಂ ವ್ಯಾಪ್ತಿಗೆ ಸೇರಿದ ನಗರದ ಜುಬಿಲಿಯಂಟ್ ಲೇಔಟ್, ವಿದ್ಯಾನಗರ, ರಾಮಸ್ವಾಮಿ ಲೇಔಟ್, ಗೋವಿಂದರಾಜ ಬಡಾವಣೆಗಳನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ವಾಹನ ಹಾಗೂ ಜನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ ನಗರದ ಜನನಿಬಿಡ ಪ್ರದೇಶವಾದ ರಾಷ್ಟ್ರಪತಿ ರಸ್ತೆಯ 6ನೇ ತಿರುವು, ಶ್ರೀಕಂಠಪುರಿ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳನ್ನು ಪ್ಲೇವುಡ್‍ಶೀಟ್‍ನಿಂದ ಮುಚ್ಚಲಾಗಿದೆ. ಜೊತೆಗೆ ರಸ್ತೆಬದಿಯಲ್ಲಿ ಕೆಂಪುಪಟ್ಟಿಯ ಎಚ್ಚರಿಕೆ ಸೂಚಿಸುವ ಟೇಪ್‍ಗಳನ್ನು ಕಟ್ಟಲಾಗಿದ್ದು, ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

ನಗರದ ರಾಷ್ಟ್ರಪತಿ ರಸ್ತೆಯ 20ನೇ ಕ್ರಾಸ್‍ನಲ್ಲಿ ಸೀಲ್‍ಡೌನ್ ಪ್ರಕ್ರಿಯೆ ವೀಕ್ಷಿಸಿದ ನಗರಸಭೆ ಪೌರಾಯುಕ್ತ ಕರಿಬಸವಯ್ಯ ಈ ಕುರಿತು `ಮೈಸೂರು ಮಿತ್ರ’ನ ಜೊತೆ ಮಾತನಾಡಿದರು.

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಂಜನಗೂಡು ನಗರ-ಗ್ರಾಮಾಂತರ ಸೇರಿದಂತೆ 25 ವಲಯಗಳನ್ನು ಸೀಲ್‍ಡೌನ್ ಮಾಡಲಾಗಿದೆ. ನಾಗರಿಕರಿಗೆ ಮೂಲ ಸೌಕರ್ಯ, ಅಗತ್ಯ ವಸ್ತುಗಳ ಪೂರೈಕೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಸೀಲ್‍ಡೌನ್ ಮಾಡಿರುವ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸ್ಥಳೀಯ ನಿವಾಸಿಗಳ ಕುಂದುಕೊರತೆ ಆಲಿಸಲಿದ್ದಾರೆ. ಕೊರೊನಾ ಸೋಂಕಿತರ ಕುಟುಂಬದ ಸದಸ್ಯರೂ ಸೇರಿದಂತೆ ಕೊರೊನಾ ಹಾಟ್‍ಸ್ಪಾಟ್ ಎಂದು ಗುರ್ತಿಸಲ್ಪಟ್ಟ ಪ್ರದೇಶಗಳಿಂದ ಜನರು ಮನೆಯಿಂದ ಹೊರಬರುವುದನ್ನು ಸಂಪೂರ್ಣ ನಿಷೇಧಿಸಿದ್ದು, ಸಿಬ್ಬಂದಿಗಳ ಮೂಲಕ ಅಗತ್ಯ ವಸ್ತುಗಳ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಮುಂದಿನ ಆದೇಶದವರೆಗೂ ನಂಜನಗೂಡಿನ ವಿವಿಧೆಡೆ ಸೀಲ್‍ಡೌನ್ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

Translate »