ಇಂದು ಚಾ.ಬೆಟ್ಟದಲ್ಲಿ ಬೀಜದ ಉಂಡೆ ಹಾಕುವ ಕಾರ್ಯಕ್ರಮ
ಮೈಸೂರು

ಇಂದು ಚಾ.ಬೆಟ್ಟದಲ್ಲಿ ಬೀಜದ ಉಂಡೆ ಹಾಕುವ ಕಾರ್ಯಕ್ರಮ

July 14, 2021

ಮೈಸೂರು,ಜು.13(ಪಿಎಂ)-ಭಾರತೀಯ ಜನಸಂಘದ ಸಂಸ್ಥಾ ಪಕ ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಅವರ 68ನೇ ಪುಣ್ಯ ಸ್ಮರಣೆ ಅಂಗವಾಗಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ `ವೃಕ್ಷಾ ರೋಹಣ’ ಅಭಿಯಾನದ ಅಂಗವಾಗಿ ನಾಳೆ (ಜು.14) ಚಾಮುಂಡಿಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ 50 ಸಾವಿರ ಸೀಡ್ ಬಾಲ್ ಹಾಕುವ ಕಾರ್ಯಕ್ರಮ ಏರ್ಪ ಡಿಸಲಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷರೂ ಆದ ವೃಕ್ಷರೋಹಣ ಕಾರ್ಯಕ್ರಮದ ರಾಜ್ಯ ಸಂಚಾಲಕ ಗೋವಿಂದರಾಜು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಪುಣ್ಯ ಸ್ಮರಣೆ ಅಂಗವಾಗಿ ಬಿಜೆಪಿ ವತಿಯಿಂದ `ವೃಕ್ಷಾ ರೋಹಣ’ ಶೀರ್ಷಿಕೆಯಡಿ ಸಸಿ ನೆಡುವ ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ರಾಜ್ಯದಲ್ಲಿ 5 ಲಕ್ಷ ಸೀಡ್ ಬಾಲ್ (ಬೀಜದ ಮಣ್ಣಿನ ಉಂಡೆ) ಹಾಕುವ ಅಭಿಯಾನಕ್ಕೂ ಈಗಾಗಲೇ ಚಾಲನೆ ನೀಡ ಲಾಗಿದೆ. ಅಂತೆಯೇ ನಾಳೆ ಚಾಮುಂಡಿಬೆಟ್ಟದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು ಲಕ್ಷ ಸೀಡ್ ಬಾಲ್ ಹಾಕುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದರು.

ಹಿಂದುಳಿದ ವರ್ಗಗಳ (ಓಬಿಸಿ) ಮೋರ್ಚಾ ರಾಜ್ಯ ಘಟಕದ ವತಿಯಿಂದ ವೃಕ್ಷಾರೋಹಣ ಮತ್ತು ಸೀಡ್ ಬಾಲ್ ಅಭಿಯಾನ ನಡೆಸಲಾಗುತ್ತಿದೆ. ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿ ಒಂದೂವರೆ ಲಕ್ಷ ಸೀಡ್ ಬಾಲ್‍ಗಳನ್ನು ಹಾಕಿ ಅಭಿಯಾನ ಆರಂಭಿಸಲಾಯಿತು. ಅಂತೆಯೇ ಮೈಸೂರು ನಗರ ಮತ್ತು ಗ್ರಾಮಾಂತರ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಒಂದು ಲಕ್ಷ ಸೀಡ್ ಬಾಲ್‍ಗಳನ್ನು ತಯಾರಿಸಿದ್ದು, ಚಾಮುಂಡಿ ಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ 50 ಸಾವಿರ ಸೀಡ್ ಬಾಲ್ ಹಾಕಲಾಗುವುದು. ಉಳಿದ 50 ಸಾವಿರ ಸೀಡ್ ಬಾಲ್‍ಗಳನ್ನು ಚಾಮರಾಜನಗರ ಜಿಲ್ಲೆ ತಳವಾಡಿ ಅರಣ್ಯ ಪ್ರದೇಶದಲ್ಲಿ ಹಾಕಲಾಗುವುದು ಎಂದು ತಿಳಿಸಿದರು.

ನಾಳೆ ಮಧ್ಯಾಹ್ನ 12.30ಕ್ಕೆ ಚಾಮುಂಡಿಬೆಟ್ಟದಲ್ಲಿ ಲಕ್ಷ ಸೀಡ್ ಬಾಲ್ ಹಾಕುವ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ.

ರಾಜ್ಯ ಓಬಿಸಿ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಸಂಸದ ಪ್ರತಾಪ್‍ಸಿಂಹ, ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಎಂಎಲ್‍ಸಿ ಎ.ಹೆಚ್.ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯ ದರ್ಶಿ ಸಿದ್ದರಾಜು, ವಿಭಾಗ ಪ್ರಭಾರಿ ಮ.ವಿ.ರವಿಶಂಕರ್, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ರಕ್ತಚಂದನ, ಬೇವು, ಹೊಂಗೆ, ಕಾಡು ಬಾದಾಮಿ, ನೆರಳೆ ಸೇರಿದಂತೆ ಮೊದಲಾದ ಸೀಡ್ ಬಾಲ್‍ಗಳನ್ನು ಬಿಜೆಪಿ ಕಾರ್ಯಕರ್ತರು ಹಾಕಲಿದ್ದಾರೆ ಎಂದು ಹೇಳಿದರು.

ಓಬಿಸಿ ಮೋರ್ಚಾ ನಗರಾಧ್ಯಕ್ಷ ಜೋಗಿಮಂಜು ಮಾತನಾಡಿ, ಕೇಂದ್ರ ಸಂಪುಟದಲ್ಲಿ ರಾಜ್ಯದ ಬಿಜೆಪಿ ಸಂಸದರಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಜೊತೆಗೆ 27 ಮಂದಿ ಹಿಂದುಳಿದ ಸಮುದಾಯದ ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ. ಆ ಮೂಲಕ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಓಬಿಸಿ ಮೋರ್ಚಾದ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು. ಮೈಸೂರು ಗ್ರಾಮಾಂತರ ಓಬಿಸಿ ಮೋರ್ಚಾ ಅಧ್ಯಕ್ಷ ಪರಶುರಾಮಪ್ಪ, ರಾಜ್ಯ ಕಾರ್ಯಕಾರಿ ಸದಸ್ಯರಾದ ಮೈ.ಪು.ರಾಜೇಶ್, ಉಮೇಶ್, ರಾಜ್ಯ ಓಬಿಸಿ ಸೋಸಿಯಲ್ ಮೀಡಿಯಾ ಘಟಕದ ಸಹ ಸಂಚಾಲಕ ಸು.ಮುರಳಿ ಗೋಷ್ಠಿಯಲ್ಲಿದ್ದರು.

Translate »