ರೈತರ ಮನೆ ಬಾಗಿಲಿಗೇ ಬಿತ್ತನೆ ಬೀಜ, ರಸಗೊಬ್ಬರ ಸೇರಿ ಅಗತ್ಯ ವಸ್ತು ತಲುಪಿಸಬೇಕು
ಮೈಸೂರು

ರೈತರ ಮನೆ ಬಾಗಿಲಿಗೇ ಬಿತ್ತನೆ ಬೀಜ, ರಸಗೊಬ್ಬರ ಸೇರಿ ಅಗತ್ಯ ವಸ್ತು ತಲುಪಿಸಬೇಕು

April 25, 2020

ಮೈಸೂರು,ಏ.24-ಕೃಷಿ ಉತ್ಪನ್ನಗಳನ್ನು ಜಮೀನಿನಿಂದ ಮಾರುಕಟ್ಟೆಗೆ ಸರ್ಕಾರದ ವತಿಯಿಂದಲೇ ಸಾಗಿಸುವ ವ್ಯವಸ್ಥೆ ಆಗಬೇ ಕೆಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡರು ಆಗ್ರಹಿಸಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜಯಪುರದಲ್ಲಿ ಗುರುವಾರ ರೈತರು ಕೃಷಿ ಉತ್ಪನ್ನಗಳನ್ನು ಸರ್ಕಾರಕ್ಕೆ ಕೊಡುಗೆ ನೀಡಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರಲ್ಲಿ ರೈತರ ಸಂಕಷ್ಟ ಪರಿ ಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಜಿಟಿಡಿ, ರೈತರ ಸ್ವಾಭಿಮಾನ, ಧಾನ-ಧರ್ಮವನ್ನು ಯಾರೂ ಪ್ರಶ್ನಿಸಲಾಗದು. ಮಾತ್ರವಲ್ಲ ಆ ವಿಷಯದಲ್ಲಿ ಅವರಿಗೆ ಯಾರೂ ಸರಿ ಸಾಟಿ ಇಲ್ಲ. ದೇಶಕ್ಕೆ ಬೆನ್ನೆಲುಬಾಗಿರುವ ರೈತರ ಶಕ್ತಿ ಹೆಚ್ಚಿಸಲು ಸರ್ಕಾರಗಳು ಮುಂದಾಗಬೇಕೆಂದು ಒತ್ತಾಯಿಸಿದರು.

ಮಣ್ಣು ನಂಬಿ ಬದುಕುವ ರೈತರಿಗೆ ಸ್ವಾಭಿ ಮಾನವೇ ಉಸಿರು. ಆತ ನೀಡುವವನೇ ಹೊರತು ಎಂದಿಗೂ ಬೇಡುವವನಲ್ಲ. ಒಕ್ಕಣೆ ಮಾಡಿದಾಗ ಗ್ರಾಮದ ಕುಂಬಾರ, ಸವಿತಾ ಸಮಾಜ, ವಿಶ್ವಕರ್ಮ ಹೀಗೆ ಕುಶಲಕರ್ಮಿ ಗಳು, ಬಡವರಿಗೆ ಹಂಚಿದ ಬಳಿಕವೇ ಧಾನ್ಯ ವನ್ನು ತಮ್ಮ ಮನೆಗೆ ಕೊಂಡೊಯ್ಯುವ ಪ್ರತೀತಿಯಿದೆ. ಅದೇ ರೀತಿ ಈಗಲೂ ಸಹ ತಾವು ಸಂಕಷ್ಟದಲ್ಲಿದ್ದರೂ ಮತ್ತೊಬ್ಬರ ಕಷ್ಟಕ್ಕೆ ನೆರವಾಗುತ್ತಿದ್ದಾರೆ ಎಂದು ಭಾವುಕರಾಗಿ ನುಡಿದರು. ದವಸ ಧಾನ್ಯ, ಎಣ್ಣೆಕಾಳು, ತರಕಾರಿ, ಹೂ, ಹಣ್ಣು ಎಲ್ಲವನ್ನೂ ಬೆಳೆ ಯುವ ರೈತನೇ ದೇಶಕ್ಕೆ ಆಧಾರ. ಸರ್ಕಾರ ಗಳು ರೈತರ ಕೈಬಲಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ವಹಿಸಬೇಕು. ಬಿತ್ತನೆ ಬೀಜ, ರಸಗೊಬ್ಬರ ಇನ್ನಿತರ ಅವನ ಅಗತ್ಯ ವಸ್ತುಗಳ ರೈತರ ಮನೆ ಬಾಗಿಲಿಗೆ ತಲು ಪಿಸಬೇಕು. ರೈತನ ಜಮೀನಿಗೆ ವಾಹನ ಗಳನ್ನು ಕಳುಹಿಸಿ, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ವ್ಯವಸ್ಥೆಯಾಗ ಬೇಕು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿಗದಿ ಮಾಡಬೇಕು. ಬೆಲೆಯಿಲ್ಲದಿದ್ದರೆ ಬೆಳೆಯನ್ನು ಸರ್ಕಾರವೇ ದಾಸ್ತಾನು ಮಾಡಿ, ರೈತನಿಗೆ ಸಾಲ ನೀಡುವಂತಾಗಬೇಕು ಎಂದು ಜಿಟಿಡಿ ಮನವಿ ಮಾಡಿದರು.

ಕೊರೊನಾ ವಾರಿಯರ್ಸ್‍ಗೆ ಕೃತಜ್ಞತೆ: ನೊಂದವರಿಗೆ ನೆರವಾಗಿರುವ ರೈತ ಬಾಂಧ ವರು, ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲಾ ಅಧಿಕಾರಿಗಳು, ವೈದ್ಯರು, ನರ್ಸ್‍ಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರತಿಯೊಬ್ಬರೂ ಕೊರೊನಾ ಬಗ್ಗೆ ಜಾಗೃತವಾಗಿರಬೇಕು. ಲಾಕ್‍ಡೌನ್ ಮುಗಿಯುವವರೆಗೂ ಮನೆಯಲ್ಲೇ ಇರುವ ಮೂಲಕ ಕೊರೊನಾ ವಿರುದ್ಧದ ಹೋರಾ ಟಕ್ಕೆ ಸಹಕಾರ ನೀಡಬೇಕೆಂದು ಇದೇ ವೇಳೆ ಮನವಿ ಮಾಡಿದರು.

Translate »