ವೈದ್ಯರ ಚೀಟಿ ಇಲ್ಲದೆ ನಿದ್ದೆ ಮಾತ್ರೆ ಮಾರಾಟ ಮೆಡಿಕಲ್ ಶಾಪ್ ಮಾಲೀಕ ಸೇರಿ ಮೂವರ ಬಂಧನ
ಮೈಸೂರು

ವೈದ್ಯರ ಚೀಟಿ ಇಲ್ಲದೆ ನಿದ್ದೆ ಮಾತ್ರೆ ಮಾರಾಟ ಮೆಡಿಕಲ್ ಶಾಪ್ ಮಾಲೀಕ ಸೇರಿ ಮೂವರ ಬಂಧನ

May 4, 2021

ಕೆ.ಆರ್.ನಗರ, ಮೇ 3(ಕೆಟಿಆರ್)- ವೈದ್ಯರ ಸಲಹೆ ಚೀಟಿ ಇಲ್ಲದೆ ಗ್ರಾಹಕರು ಕೇಳಿದಷ್ಟು ನಿದ್ದೆ ಮಾತ್ರೆ ನೀಡುತ್ತಿದ್ದ ಮೆಡಿಕಲ್ ಸ್ಟೋರ್ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಮೈಸೂರು ಅಬಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಕೆ.ಆರ್.ನಗರದ ಬಾಲಾಜಿ ಮೆಡಿಕಲ್ಸ್ ಸ್ಟೋರ್ ಮಾಲೀಕ ಶಿವಕುಮಾರ್(44), ಮೈಸೂರಿನ ಶ್ರೀಕಂಠ (46), ರಾಜೇಶ್(49) ಬಂಧಿತರು. ಈ ಆರೋಪಿಗಳು ವೈದ್ಯ ಸಲಹೆ ಚೀಟಿ ಇಲ್ಲದೆ, ಯುವಕರು ಕೇಳಿದಷ್ಟು ನಿದ್ದೆ ಮಾತ್ರೆಗಳನ್ನು ನೀಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಮೈಸೂರು (ಗ್ರಾಮಾಂತರ) ಅಬಕಾರಿ ಉಪ ಆಯುಕ್ತೆ ಡಾ.ಮಹಾದೇವಿಬಾಯಿ ಮಾಧ್ಯಮಗಳಿಗೆ ತಿಳಿಸಿದರು.

ವೈದ್ಯರು ಸಂಬಂಧಪಟ್ಟ ರೋಗಿಗಳಿಗೆ 4-5 ನಿದ್ದೆ ಮಾತ್ರೆಗಳನ್ನು ಬರೆಯಬಹುದು. ಆ ಚೀಟಿ ನೋಡಿ ಔಷಧ ಅಂಗಡಿಯವರು ನೀಡುತ್ತಾರೆ. ಆದರೆ, ಈ ತಂಡ ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡಿರುವ ಡ್ರಗ್ಸ್ ಮಾಫಿಯಾ ಇಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ದುಶ್ಚಟಗಳಿಗೆ ಗುರಿಯಾಗಿರುವ ಕೆಲ ಯುವಕರು ಮದ್ಯ ಸೇವಿಸಿದರೆ ಮನೆಯವರಿಗೆ ತಿಳಿಯುವ ಭಯದಿಂದ ರಾತ್ರಿ ವೇಳೆ ಈ ಮಾತ್ರೆ ಸೇವಿಸಿ ಮಲಗುತ್ತಾರೆ. ಇನ್ನು ಕೆಲವರು ಸಾಫ್ಟ್ ಡ್ರಿಂಕ್ಸ್ ಜೊತೆ ಸೇವಿಸುತ್ತಾರೆ. ಡಿಸ್ಟಿಲರಿ ವಾಟರ್‍ನೊಂದಿಗೆ ಮಿಕ್ಸ್ ಮಾಡಿಕೊಂಡು ಇಂಜೆಕ್ಟ್ ಮಾಡಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

Translate »