ಸ್ಯಾಂಡಲ್ ವುಡ್‍ನ ಖ್ಯಾತ ಹಿರಿಯ ನಟ ಲೋಕನಾಥ್ ಅವರು ವಿಧಿವಶರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ರಂಗಭೂಮಿ ಹಾಗೂ ಕನ್ನಡ ಚಲನಚಿತ್ರರಂಗದ ಹಿರಿಯ ನಟ ಸಿ.ಎಚ್. ಲೋಕನಾಥ್ ಅವರು ವಯೋಸಹಜ ಅನಾ ರೋಗ್ಯದಿಂದ ನಿನ್ನೆ ರಾತ್ರಿ 12.15ಕ್ಕೆ ಕೊನೆ ಉಸಿರೆಳೆದಿದ್ದಾರೆ.
ಸುಮಾರು 650 ಸಿನಿಮಾಗಳು ಮತ್ತು 1ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದ ಲೋಕನಾಥ್ ಅವರು, 1970ರಲ್ಲಿ ತೆರೆಕಂಡಿದ್ದ ‘ಸಂಸ್ಕಾರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಲೋಕನಾಥ್ ಅವರು ಕೊನೆಯದಾಗಿ ‘ಏಕೆ 56’ ಮತ್ತು ‘ಭೀಮಾ ತೀರದಲ್ಲಿ’ ಚಿತ್ರಗಳಲ್ಲಿ ನಟಿಸಿದ್ದರು.
ಚಿತ್ರರಂಗದಲ್ಲಿ ‘ಅಂಕಲ್’ ಎಂದೇ ಖ್ಯಾತಿ ಪಡೆದಿದ್ದ ಲೋಕನಾಥ್ ಅವರು ಶಂಕರ್ ನಾಗ್ ಮತ್ತು ಅನಂತ್ ನಾಗ್ ಅವರ ಮಿಂಚಿನ ಓಟ ಚಿತ್ರದ ‘ಅಂಕಲ್’ ಪಾತ್ರದ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು. ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು 1972ರಿಂದ ‘ನಟ ರಂಗ’ದ ನಟನಾಗಿ 1000 ಪ್ರದರ್ಶನಗಳಲ್ಲಿ ಅಭಿನಯಿಸಿದ್ದರು.