ಮೈಸೂರು: ಬೆಂಗಳೂರು ಜಲಮಂಡಳಿ ಮಾದರಿಯಲ್ಲಿ ಮೈಸೂರು ನಗರದ ನೀರಿನ ಸಮರ್ಪಕ ನಿರ್ವಹಣೆಗೆ ಪ್ರತ್ಯೇಕ ಜಲಮಂಡಳಿ ಅಗತ್ಯವಿದ್ದು, ಈ ಸಂಬಂಧ ಪರಿಶೀಲಿಸಿ ಮುಂದುವರೆಯುವುದಾಗಿ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರಿನ ಜಲದರ್ಶಿನಿ ನೂತನ ಕಟ್ಟಡ ದಲ್ಲಿರುವ ಸಚಿವರ ಕಾರ್ಯಾಲಯದಲ್ಲಿ ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಮೈಸೂರು ನಗರಕ್ಕೆ ನೀರು ಸರಬರಾಜು ಸಂಬಂಧ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಪ್ರಸ್ತುತ ವ್ಯವಸ್ಥೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಬೆಂಗಳೂರು ಬಿಡ್ಲ್ಯೂಎಸ್‍ಎಸ್ ಮಾದರಿ ಯಲ್ಲಿ ಪ್ರತ್ಯೇಕ ಜಲಮಂಡಳಿ ಸ್ಥಾಪಿಸಿದರೆ ಮಾತ್ರವೇ ಮೈಸೂರು ನಗರದ ನೀರು ಪೂರೈಕೆ ಸಮರ್ಪಕ ರೀತಿಯಲ್ಲಿ ನಿರ್ವಹಣೆ ಆಗಲಿದೆ. ಈ ಸಂಬಂಧ ಪರಿಶೀಲಿಸಿ ಮುಂದಿನ ಕ್ರಮ ವಹಿಸುತ್ತೇನೆ ಎಂದು ಪ್ರಕಟಿಸಿದರು.
ನೀರಿಗೆ ಸಮಸ್ಯೆ ಆಗಬಾರದು: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಸಮ ನ್ವಯದಿಂದ ಕಾರ್ಯಪ್ರವೃತ್ತವಾಗಿ ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀರಿನ ಮಿತಬಳಕೆ ಬಗ್ಗೆ ಸಾರ್ವಜನಿಕ ರಲ್ಲಿ ಅರಿವು ಮೂಡಿಸಬೇಕು. ಮೊಟ್ಟ ಮೊದಲ ಆದ್ಯತೆಯನ್ನು ಕುಡಿಯುವ ನೀರಿಗೆ ನೀಡು ವಂತೆ ಹಾಗೂ ನೀರು ಪೋಲು ಮಾಡದಂತೆ ಎಚ್ಚರ ವಹಿಸುವ ಬಗ್ಗೆ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬೇಕು. ನೀರಿನ ಸಮಸ್ಯೆ ಬಗ್ಗೆ ದೂರು ನೀಡಲು ಪಾಲಿಕೆಯಲ್ಲಿ ನಿಯಂ ತ್ರಣ ಕೊಠಡಿ ವ್ಯವಸ್ಥೆ ಮಾಡಬೇಕು. ದೂರು ಕೇಳಿ ಬಂದ ಕೂಡಲೇ ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಅಧಿಕಾರಿ ಗಳು, ಸಿಬ್ಬಂದಿ ಆಗಾಗ್ಗೆ ಸಭೆ ನಡೆಸಿ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ನಿವಾರಿಸಲು ಕ್ರಮ ಕೈಗೊಳ್ಳ ಬೇಕು ಎಂದು ಮಾರ್ಗದರ್ಶನ ನೀಡಿದರು.
ಕಾಮಗಾರಿ ಪೂರ್ಣಗೊಳಿಸಲು ತಾಕೀತು: ಮೇಳಾಪುರ ಮತ್ತು ಹೊಂಗಳ್ಳಿ ನೀರು ಸರಬ ರಾಜು ಘಟಕಗಳಿಂದ ಹೆಚ್ಚುವರಿ ನೀರು ಪೂರೈಕೆ ಸಂಬಂಧ ನಡೆಯುತ್ತಿರುವ ಕಾಮಗಾರಿ ಯನ್ನು ತ್ವರಿತಗತಿಯಲ್ಲಿ ನಡೆಸಿ ಮುಂದಿನ ಮಾರ್ಚ್ ಒಳಗೆ ಪೂರ್ಣಗೊಳಿಸಲು ಗುತ್ತಿಗೆ ಪಡೆದಿರುವ ಕಂಪನಿಯ ಸಿಬ್ಬಂದಿಗೆ ಜಿ.ಟಿ.ದೇವೇಗೌಡ ತಾಕೀತು ಮಾಡಿದರು.
ಇದಕ್ಕೂ ಮುನ್ನ ಪೂರೈಕೆ ನೀರಿನ ಪ್ರಮಾಣ ವಿವರಿಸಿದ ಅಧಿಕಾರಿಗಳು, ಪ್ರಸ್ತುತ 250 ಎಂಎಲ್‍ಡಿ ಪ್ರಮಾಣದ ನೀರು ನಗ ರದ ಹೊರವಲಯವೂ ಒಳಗೊಂಡಂತೆ ಮೈಸೂರಿಗೆ ಪೂರೈಕೆ ಆಗುತ್ತಿದೆ. ಇದರಲ್ಲಿ ಮೈಸೂರು ನಗರ ಪ್ರದೇಶಕ್ಕೆ ಸುಮಾರು 180 ಎಂಎಲ್‍ಡಿ ಅಷ್ಟು ನೀರು ದೊರೆ ಯುತ್ತಿದೆ. ಮೇಳಾಪುರ ಮತ್ತು ಹೊಂಗಳ್ಳಿ ನೀರು ಸರಬರಾಜು ಘಟಕಗಳಿಂದ ಹೆಚ್ಚುವರಿ ನೀರು ಪೂರೈಕೆ ಮಾಡುವ ಸಂಬಂಧ ಅಮೃತ್ ಯೋಜನೆಯಡಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮ ಗಾರಿ ಪೂರ್ಣಗೊಂಡರೆ ಹೆಚ್ಚುವರಿ 43 ಎಂಎಲ್‍ಡಿ ಪ್ರಮಾಣದಷ್ಟು ನೀರು ಮೈಸೂರು ನಗರಕ್ಕೆ ಸರಬರಾಜು ಆಗಲು ಸಾಧ್ಯವಾಗ ಲಿದೆ. ಆದರೆ ಗುತ್ತಿಗೆದಾರರು ನಿಧಾನಗತಿಯ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋ ಪಿಸಿದರು. ಈ ವೇಳೆ ಗುತ್ತಿಗೆ ಕಂಪನಿಯ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡ ಸಚಿ ವರು, ನಿಗದಿತ ಅವಧಿಯಂತೆ ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಗುತ್ತಿಗೆ ರದ್ದು ಮಾಡಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತ್ಯೇಕ ನೀರಿನ ಮಾರ್ಗ ನಿರ್ಮಿಸಿ: ಮೈಸೂರು ನಗರದಲ್ಲಿ ಸಮರ್ಪಕ ನೀರು ಪೂರೈಕೆ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪ್ರತ್ಯೇಕ ನೀರಿನ ಸಂಪರ್ಕ ಮಾರ್ಗ ನಿರ್ಮಿಸಿದರೆ ಉತ್ತಮ ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು.
ವಿಜಯನಗರ 3 ಮತ್ತು 4ನೇ ಹಂತಕ್ಕೆ ಪಾಲಿಕೆಯಿಂದ ನೀರು ಸರಬರಾಜು ಮಾಡುತ್ತಿ ರಲಿಲ್ಲ. ಈಗ ಅನಿವಾರ್ಯತೆಯಿಂದ ನಗರದ ನೀರನ್ನು ಅಲ್ಲಿಗೆ ಕೊಡಬೇಕಾಗಿದೆ. ಇದನ್ನು ಬೇಡವೆಂದು ಹೇಳಲಾಗದು. ಆದರೆ ಈಗಿರುವ ಸಂಪರ್ಕ ಮಾರ್ಗದಲ್ಲೇ ಅಲ್ಲಿಗೆ ನೀರು ಸರಬರಾಜು ಮಾಡಿದರೆ ಮೈಸೂರು ನಗರದ ಅನೇಕ ಪ್ರದೇಶಗಳಿಗೆ ನೀರು ಪೂರೈಕೆಗೆ ಸಮಸ್ಯೆ ಆಗಲಿದೆ. ಹೀಗಾಗಿ ಚಾಮುಂಡೇ ಶ್ವರಿ ಕ್ಷೇತ್ರಕ್ಕೆ ಪ್ರತ್ಯೇಕ ನೀರು ಸಂಪರ್ಕ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸುವುದು ಸೂಕ್ತವಾಗಿದೆ ಎಂದು ಗಮನ ಸಳೆದರು.
ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ: ನೀರು ಪೂರೈಕೆ ಸಂಬಂಧ ಅಧಿಕಾರಿಗಳು ಸರಿ ಯಾಗಿ ಕಾರ್ಯ ನಿರ್ವಹಿಸಿದರೆ ಹೆಚ್ಚುವರಿಯಾಗಿ ಸರಬರಾಜು ಆಗುತ್ತಿರುವ ಪ್ರದೇಶದ ನೀರನ್ನು ಕೊರತೆ ಇರುವ ಕಡೆಗಳಿಗೆ ಪೂರೈಸಲು ಸಾಧ್ಯ ವಾಗಲಿದೆ. ಆದರೆ ಇಂತಹ ಸೂಕ್ಷ್ಮಗಳನ್ನು ಅರಿಯುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಈ ಹಿಂದೆ ನೀರು ಪೂರೈಕೆ ಜವಾಬ್ದಾರಿ ವಹಿಸಿಕೊಂಡಿದ್ದ ಜಸ್ಕೋದ ವರು ನೀರಿನ ಸಂಪರ್ಕ ಲೈನ್‍ಗಳನ್ನು ಮತ್ತಷ್ಟು ಹಾಳುಗೆಡವಿ ಅನೇಕ ಭಾಗ ಗಳಲ್ಲಿ ಸಮರ್ಪಕ ನೀರು ಪೂರೈಕೆ ಆಗ ದಂತೆ ಮಾಡಿಟ್ಟಿದ್ದಾರೆ. ಅಲ್ಲದೆ, ನೀರು ಪೂರೈಕೆ ಸಂಬಂಧ ಪಾಲಿಕೆ ಹಾಗೂ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾ ಗಾರ ಸಮರ್ಪಕ ರೀತಿಯಲ್ಲಿ ಸಿಬ್ಬಂದಿ ನಿಯೋ ಜಿಸುವಲ್ಲಿಯೂ ವಿಫಲವಾಗಿದೆ ಎಂದು ಶಾಸಕ ನಾಗೇಂದ್ರ ಆರೋಪಿಸಿದರು.
ಅಗತ್ಯವಿದ್ದರೆ ಸಿಬ್ಬಂದಿ ಪೂರೈಕೆ: ಇದೇ ವೇಳೆ ಮಾತನಾಡಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎನ್.ಜಯರಾಮ್, ನೀರು ಪೂರೈಕೆ ಸಂಬಂಧ ಅಗತ್ಯವಿರು ವಷ್ಟು ಸಂಖ್ಯೆಯಲ್ಲಿ ಇಂಜಿನಿಯರ್‍ಗಳನ್ನು ನೀಡಲು ಮಂಡಳಿ ಸಿದ್ಧವಿದೆ. ಅದಕ್ಕೆ ಬೇಕಾದ ಕ್ರಮ ವಹಿಸುವಂತೆ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮುಡಾ ಆಯುಕ್ತ ಕಾಂತರಾಜು, ಕಾರ್ಯ ಪಾಲಕ ಅಭಿಯಂತರ ಸುರೇಶ್‍ಬಾನು, ಕರ್ನಾ ಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳಾದ ಕೆ.ಪಿ.ಜಯ ರಾಮ್, ಪ್ರಸನ್ನಮೂರ್ತಿ, ಮೈಸೂರು ತಹಸೀಲ್ದಾರ್ ಟಿ.ರಮೇಶ್ ಬಾಬು, ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯ ಪಾಲಕ ಅಭಿಯಂತರ ಹರೀಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ಯಲ್ಲಿ ಪಾಲ್ಗೊಂಡಿದ್ದರು