ಮೈಸೂರು,ಡಿ.31(ವೈಡಿಎಸ್)-ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾ ದರೂ ಉನ್ನತ ಶಿಕ್ಷಣದಲ್ಲಿ ಬಹಳ ಹಿಂದು ಳಿದಿದ್ದೇವೆ. ಅಭಿವೃದ್ಧಿಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ವಿದ್ಯಾಸಂಸ್ಥೆಗಳ ಆವರಣ ದಲ್ಲಿ ನೂತನವಾಗಿ ನಿರ್ಮಿಸಿರುವ `ಶತೋತ್ತರ ಸುವರ್ಣಸೌಧ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದಿಗೂ ಉನ್ನತ ಶಿಕ್ಷಣದಲ್ಲಿ ಬಹಳ ಹಿಂದೆ ಇದ್ದೇವೆ. ಸ್ವಾತಂತ್ರ್ಯ ಬಂದು 71 ವರ್ಷಗಳಾದರೂ ಉನ್ನತ ಶಿಕ್ಷಣದಲ್ಲಿ ಅಭಿ ವೃದ್ಧಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳು ಡಾಕ್ಟರ್, ಎಂಜಿನಿಯರ್ ಓದ ಬೇಕೆಂಬ ವ್ಯಾಮೋಹ ಪೋಷಕರಲ್ಲಿ ಹೆಚ್ಚಾಗಿದೆ. ಜತೆಗೆ ವಿಜ್ಞಾನಿ ಸೇರಿದಂತೆ ಇನ್ನಿತರೆ ಕ್ಷೇತ್ರಗಳ ಕಡೆಗೂ ಗಮನ ಹರಿಸುವುದು ಅಷ್ಟೇ ಮುಖ್ಯ ಎಂದರು.
ಶಿಕ್ಷಣಕ್ಕೆ ಹೆಚ್ಚು ಒತ್ತು: ಮಾನವ ಸಂಪ ನ್ಮೂಲ ವೃದ್ಧಿಯಾದರೆ ದೇಶದ ಅಭಿವೃದ್ಧಿಯೂ ಆಗುತ್ತದೆ. ಮುಂದುವರಿದ ದೇಶಗಳಲ್ಲಿ ಶಿಕ್ಷಣ-ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡು ತ್ತಾರೆ. ಹಾಗಾಗಿ ನಮ್ಮ ಸರ್ಕಾರದಲ್ಲಿ ಶಿಕ್ಷ ಣಕ್ಕೆ ಹೆಚ್ಚು ಒತ್ತು ನೀಡಿದ್ದೆ. ಇನ್ನು ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಶಾರದಾ ವಿಲಾಸ ವಿದ್ಯಾ ಸಂಸ್ಥೆ ಬಡವ, ಶ್ರೀಮಂತರೆನ್ನದೇ ಜಾತ್ಯತೀತವಾಗಿ ಎಲ್ಲರಿಗೂ ಶಿಕ್ಷಣ ನೀಡುತ್ತಿದೆ. ಶೇ.80-90ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಸೇರಿಸಿ ಕೊಂಡು ನಮ್ಮ ಕಾಲೇಜು ಫಸ್ಟ್ ಕ್ಲಾಸ್ ಬಂತು ಎಂದು ಹೇಳಿಕೊಳ್ಳುವುದು ಬೇರೆ, ಆದರೆ, ಶಾರದಾ ವಿಲಾಸ ಕಾಲೇಜು ಶೇ. 30-40ರಷ್ಟು ಅಂಕ ಪಡೆದ ವಿದ್ಯಾರ್ಥಿ ಗಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪ್ರತಿಭಾವಂತರನ್ನಾಗಿ ಮಾಡು ತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾರದಾ ವಿಲಾಸ ವಿದ್ಯಾಸಂಸ್ಥೆಯಲ್ಲಿಯೇ ನನ್ನ ರಾಜಕೀಯ ಬದುಕು ಆರಂಭವಾಗಿದ್ದು ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ಇಲ್ಲಿ ಓದಿದವರು ನ್ಯಾಯಾಧೀಶರು, ವಕೀ ಲರು, ಸಾಹಿತಿಗಳು, ರಾಜಕಾರಣಿಗಳು ಹೀಗೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ನಾನು ಲಾ ಮಾಡಿದ ಮೇಲೆ ಒಳ್ಳೆಯ ವಕೀಲ ನಾಗದಿದ್ದರೂ, ಒಳ್ಳೆಯ ಮೇಸ್ಟ್ರ್ರು ಆಗಿದ್ದೆ ಎಂದು ಹೆಮ್ಮೆಪಟ್ಟರು.
ಅವಕಾಶ ಸಿಕ್ಕಾಗ ವಿದ್ಯೆ ಕಲಿಸಿದ ಶಿಕ್ಷಣ ಸಂಸ್ಥೆ ಮತ್ತು ಗುರುಗಳ ಋಣವನ್ನು ತೀರಿಸ ಬೇಕು. ಆ ನಿಟ್ಟಿನಲ್ಲಿ ನಾನು ಸಿಎಂ ಆಗಿದ್ದ ವೇಳೆ ಇಲ್ಲಿಗೆ ಕಾರ್ಯಕ್ರಮಕ್ಕೆ ಬಂದಿದ್ದೆ. ಆಗ ಕಟ್ಟಡಗಳ ಕೊರತೆ ಸಂಬಂಧಿಸಿದಂತೆ ಮನವಿ ಮಾಡಿದರು. 2 ಕೋಟಿ ರೂ. ಅನುದಾನದ ಭರವಸೆ ನೀಡಿ, ಅದರಂತೆ ಹಣ ಮಂಜೂರು ಮಾಡಿದೆ. ಪರಿಣಾಮ ಇಂದು ಸುಸಜ್ಜಿತ ಕಟ್ಟಡ ಉದ್ಘಾಟನೆಗೊಂಡಿದೆ ಎಂದರು.
ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ: ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಕಾರ್ಯಕ್ರಮ ಆಯೋಜಿಸಬೇಕು. ಇದರಿಂದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿ ರುವವರು ಕಾಲೇಜಿನ ಅಭಿವೃದ್ಧಿಗೆ ನೆರವಾಗು ತ್ತಾರೆ ಎಂದು ಸಲಹೆ ನೀಡಿದರು.
ಬೇಡಿಕೆ-ಭರವಸೆ: ಸಿಎಂ ಆಗಿದ್ದ ವೇಳೆ ಸ್ನಾತಕೋತ್ತರ ಅಧ್ಯಯನ ಕೇಂದ್ರ ನಿರ್ಮಿ ಸಲು 10 ಎಕರೆ ಜಾಗವನ್ನು ಕೇಳಿದ್ದರು. ನೀಡ ಬೇಕೆಂದು ಬರೆದಿದ್ದೆ. ಈಗ ಆ ದಾಖಲೆ ಪತ್ರ ಕಾಣುತ್ತಿಲ್ಲ. ಅದನ್ನು ಪತ್ತೆ ಹಚ್ಚಿ. ಜಾಗ ಕೊಡಿಸು ವಂತೆ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ವಿದ್ಯಾಸಂಸ್ಥೆಯ ಅಧ್ಯಕ್ಷರು ಸ್ನಾತಕೋತ್ತರ ಅಧ್ಯಯನ ಕೇಂದ್ರ ನಿರ್ಮಿ ಸಲು 10 ಎಕರೆ ಜಮೀನು ಮಂಜೂರು, ಕಾಲೇಜಿನಲ್ಲಿ ಖಾಲಿ ಇರುವ ಅಧ್ಯಾಪಕ ಹುದ್ದೆ ಭರ್ತಿ ಮಾಡಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. ಅಲ್ಲದೆ, ಕಾಲೇಜಿನ ಅಭಿವೃದ್ಧಿ ಗಾಗಿ ಸಂಸದ ಧ್ರುವನಾರಾಯಣ್ ಸಂಸದರ ನಿಧಿಯಿಂದ 10 ಲಕ್ಷ ರೂ. ಹಾಗೂ ಶಾಸಕ ಯತೀಂದ್ರ ಅವರು ಅನುದಾನ ನೀಡ ಬೇಕೆಂದು ಮನವಿ ಮಾಡಿದರು.
ನಂತರ ಕಟ್ಟಡ ಉಪಸಮಿತಿ ಸದಸ್ಯರು, ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಸಂಸದ ಆರ್.ಧ್ರುವನಾರಾಯಣ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಶಾರದಾ ವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಗೌರವ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್ ಉಪಸ್ಥಿತರಿದ್ದರು.