ಕಲಬುರಗಿ, ಅ.20- ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕಾರ್ಮಿಕ ಹೋರಾಟಗಾರ, ರೈತ ಮುಖಂಡ ಮಾರುತಿ ಮಾನ್ಪಡೆ (65) ನಿಧನರಾಗಿದ್ದಾರೆ. ಕೋವಿಡ್ ದೃಢಪಟ್ಟ ನಂತರ ಕಲ ಬುರಗಿಯ ಜಿಮ್ಸ್ ಹಾಗೂ ಸೊಲ್ಲಾಪುರದ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾರುತಿ ಮಾನ್ಪಡೆ ಮೂರು ದಿನಗಳಿಂದ ವೆಂಟಿಲೇಟರ್‍ನಲ್ಲಿದ್ದರು. ಕರ್ನಾಟಕ ಪ್ರಾಂತ ರೈತಸಂಘದ ಉಪಾ ಧ್ಯಕ್ಷರಾಗಿದ್ದ, ಸಿಪಿಐ(ಎಂ) ಪಕ್ಷದ ಸದಸ್ಯರೂ ಆಗಿದ್ದರು. ಮಾನ್ಪಡೆ 4 ದಶಕಗಳಿಂದ ರೈತಪರ ಹೋರಾಟಗಳಲ್ಲಿ ತೊಡಗಿಕೊಂಡಿದ್ದರು. ಮಾನ್ಪಡೆ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಮಲಾಪುರದ ಲೆಂಗಟಿ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
