ಹಿರಿಯ ಸಾಹಿತಿ, ಹೋರಾಟಗಾರ ಡಾ.ಮಳಲಿ ವಸಂತಕುಮಾರ್ ನಿಧನ
ಮೈಸೂರು

ಹಿರಿಯ ಸಾಹಿತಿ, ಹೋರಾಟಗಾರ ಡಾ.ಮಳಲಿ ವಸಂತಕುಮಾರ್ ನಿಧನ

March 19, 2021

ಮೈಸೂರು, ಮಾ.18- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಬುಧವಾರ ಸಂಜೆ ಬೆಂಗಳೂರಿನ ಅವರ ಮಗನ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

ಕೆಲವು ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಡಾ.ಮಳಲಿ ವಸಂತಕುಮಾರ್ ಪತ್ನಿ ಶಾಂತಾ ಮಳಲಿ, ಪುತ್ರಿ ರೂಪ ಹಾಗೂ ಪುತ್ರ ಸೇರಿದಂತೆ ಬಂಧು ಮಿತ್ರರು, ಶಿಷ್ಯ ವರ್ಗ ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಡಾ.ಮಳಲಿ ವಸಂತ ಕುಮಾರ್ ಮೈಸೂರಿನ ಮಹಾರಾಜ ಹಾಗೂ ಯುವ ರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಡಾ. ದೇಜಗೌ ಮೈಸೂರು ವಿವಿ ಕುಲಪತಿಗಳಾಗಿದ್ದ ಅವಧಿ ಯಲ್ಲಿ ಅವರ ಆಪ್ತ ಕಾರ್ಯದರ್ಶಿಯಾಗಿ, ಮಂಡ್ಯ ಮತ್ತು ಹಾಸನ ಸ್ನಾತಕೋತ್ತರ ಪ್ರಾದೇಶಿಕ ಕೇಂದ್ರಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಒಬ್ಬರಾಗಿದ್ದ ಡಾ.ಮಳಲಿ ಜನಪದ, ಸಣ್ಣ ಕಥೆ, ಕವನ, ವಚನ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರ ಗಳಲ್ಲಿ ಮೌಲಿಕ ಕೃತಿಗಳನ್ನು ಹೊರತಂದಿದ್ದರು. ರಾಷ್ಟ್ರಕವಿ ಕುವೆಂಪು ಅವರ ಆಪ್ತರಲ್ಲಿ ಒಬ್ಬರಾಗಿದ್ದ ಡಾ.ಮಳಲಿ, ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು. ಗೋಕಾಕ್ ಚಳವಳಿಯಲ್ಲಿ ಕನ್ನಡ ಕ್ರಿಯಾ ಸಮಿತಿ ಸಾಹಿತಿ ಕಲಾವಿದರಿಗೆ ಹೋರಾಟಕ್ಕೆ ಧುಮುಕುವಂತೆ ಕರೆ ನೀಡಿದಾಗ ಮುಂಚೂಣಿಯಲ್ಲಿ ನಿಂತು ವರನಟ ಡಾ.ರಾಜ್ ಅವರೊಂದಿಗೆ ರಾಜ್ಯಾದ್ಯಂತ ಸಂಚರಿಸಿ ಗೋಕಾಕ್ ಚಳವಳಿಯ ಕಿಚ್ಚು ಹೆಚ್ಚುವಂತೆ ಮಾಡಿದವರು. ಕನ್ನಡ ಶಾಸ್ತ್ರೀಯ ಭಾಷಾ ಸ್ಥಾನಮಾನ ಚಳವಳಿ, ಕಾವೇರಿ ಹೋರಾಟ ಹೀಗೆ ಸಾಕಷ್ಟು ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಮಳಲಿ, ನೂರಾರು ಯುವ ಸಾಹಿತಿಗಳು, ಸಂಘಟಕರು ಮತ್ತು ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿದವರು.

ಮೈಸೂರಿನ ತೋಟದಲ್ಲಿ ಅಂತ್ಯಕ್ರಿಯೆ: ಡಾ.ಮಳಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೈಸೂರಿನ ಕಳಲವಾಡಿಯಲ್ಲಿರುವ ಅವರ ಭೂಮಿತಾಯಿ ತೋಟದಲ್ಲಿ ನಾಳೆ (ಮಾ.19) ನೆರವೇರಲಿದ್ದು, ಅದಕ್ಕೆ ಮುನ್ನ ಅಂತಿಮ ದರ್ಶನಕ್ಕಾಗಿ ಮೈಸೂರಿನ ಟೌನ್‍ಹಾಲ್ ಮುಂಭಾಗದಲ್ಲಿ ಬೆಳಗ್ಗೆ 9ರಿಂದ 10ರವರೆಗೆ ಪಾರ್ಥಿವ ಶರೀರವನ್ನು ಇಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Translate »