ಕೋವಿಡ್ ಲಸಿಕೆ ಹಾಕಿಸಲು ವೃದ್ಧಾಶ್ರಮ  ಆಶ್ರಿತರಿಗೆ ಸರ್ಕಾರಿ ವಾಹನಗಳ ವ್ಯವಸ್ಥೆ
ಮೈಸೂರು

ಕೋವಿಡ್ ಲಸಿಕೆ ಹಾಕಿಸಲು ವೃದ್ಧಾಶ್ರಮ ಆಶ್ರಿತರಿಗೆ ಸರ್ಕಾರಿ ವಾಹನಗಳ ವ್ಯವಸ್ಥೆ

March 19, 2021

ಮೈಸೂರು, ಮಾ.18(ಆರ್‍ಕೆ)-ವೃದ್ಧಾಶ್ರಮಗಳಲ್ಲಿ ವಾಸಿಸುತ್ತಿರುವ ಹಿರಿಯರನ್ನು ಕರೆತಂದು ಕೋವಿಡ್ ಲಸಿಕೆ ಹಾಕಿಸಿ, ಅವರನ್ನು ಮತ್ತೆ ಅವರ ಸ್ಥಾನಕ್ಕೆ ಬಿಡಲು ಸರ್ಕಾರಿ ಇಲಾಖೆಗಳ ವಾಹನಗಳನ್ನು ಬಳಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಧೀನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅದೇ ರೀತಿ ರೋಟರಿ, ಲಯನ್ಸ್‍ನಂತಹ ಸಂಸ್ಥೆಗಳ ಸದಸ್ಯರ ಕುಟುಂಬದ ಹಿರಿಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಶಿಬಿರ ಏರ್ಪಡಿಸಿ ಕೊರೊನಾ ಲಸಿಕೆ ನೀಡುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಕೋವಿಡ್ ಲಸಿಕೆ ಪ್ರಮಾಣವನ್ನು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬೆನ್ನಲ್ಲೇ ಮೈಸೂರು ಜಿಲ್ಲಾಡಳಿತವು ಹೆಚ್ಚು ಹೆಚ್ಚು ಮಂದಿಗೆ ಲಸಿಕೆ ನೀಡಲು ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಗ್ಯ ಇಲಾಖೆ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ, ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆದಿರುವ ಹಿರಿಯರನ್ನು ಸರ್ಕಾರಿ ವಾಹನಗಳಲ್ಲಿ ಕರೆತಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಹಾಕಿಸಿ, ಮತ್ತೆ ಸುರಕ್ಷಿತವಾಗಿ ವೃದ್ಧಾಶ್ರಮಗಳಿಗೆ ಕರೆದೊಯ್ದು ಬಿಡುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದಾರೆ.

ಲಸಿಕೆ ಪಡೆದ ವೃದ್ಧರು ಅರ್ಧ ತಾಸು ವಿಶ್ರಾಂತಿ ಪಡೆಯಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿ, ಆ ವೇಳೆ ಆರೋಗ್ಯ ಸಿಬ್ಬಂದಿ ಜೊತೆಯಲ್ಲಿದ್ದು ನಿಗಾ ವಹಿಸ ಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಈಗಾಗಲೇ ಹೆಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲೂಕುಗಳಲ್ಲಿ ಬುಡಕಟ್ಟು ಸಮುದಾಯದ ವೃದ್ಧರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಿಗೆ ಕರೆದೊಯ್ದು ಲಸಿಕೆ ಹಾಕಿಸಿ ವಾಪಸ್ ಬಿಡಲು ಆಟೋ ರಿಕ್ಷಾಗಳನ್ನು ಬಾಡಿಗೆಗೆ ಪಡೆಯಲಾಗಿದೆ. ವೃದ್ಧಾಶ್ರಮಗಳಿಂದ ನಿವಾಸಿಗಳನ್ನು ಕರೆತಂದು ವಾಪಸ್ ಬಿಡಲು ಸರ್ಕಾರಿ ವಾಹನಗಳನ್ನು ಬಳಸಿ ಕೊಳ್ಳಬಹುದೆಂಬ ಸಲಹೆಯನ್ನು ಜಿಲ್ಲಾ ಟಿಬಿ ಅಧಿಕಾರಿಯಾದ ಕೋವಿಡ್ ನೋಡಲ್ ಅಧಿಕಾರಿ ಡಾ. ಮೊಹ ಮದ್ ಶಿರಾಜ್ ಅಹಮದ್ ಅವರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಆಶ್ರಿತರನ್ನು ಕರೆತರಲು ಬಹುತೇಕ ವೃದ್ಧಾಶ್ರಮಗಳಲ್ಲಿ ವಾಹನ ವ್ಯವಸ್ಥೆಗಳಿಲ್ಲ. ಆರೋಗ್ಯ ಇಲಾಖೆ ಅಧಿಕಾರಿ ಗಳು ತಮ್ಮ ವ್ಯಾಪ್ತಿಯಲ್ಲಿರುವ ವೃದ್ಧಾಶ್ರಮಗಳ ಮುಖ್ಯಸ್ಥ ರೊಂದಿಗೆ ಸಮಾಲೋಚಿಸಿ ಸರ್ಕಾರಿ ವಾಹನಗಳ ಮೂಲಕವೇ ಕರೆತಂದು ವೃದ್ಧರಿಗೆ ಲಸಿಕೆ ಹಾಕಿಸುವುದು ಒಳಿತು ಎಂದು ಅವರು ಅಭಿಪ್ರಾಯಪಟ್ಟರು.

ಆ ಸಲಹೆಯನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು. ಅದೇ ರೀತಿ ಲಯನ್ಸ್, ರೋಟರಿಯಂತಹ ಸಮಾಜ ಸೇವಾ ಸಂಸ್ಥೆಗಳ ಸದಸ್ಯರ ವಯಸ್ಸಾದ ತಂದೆ-ತಾಯಿ, ಕುಟುಂಬಸ್ಥರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಶಿಬಿರ ವ್ಯವಸ್ಥೆ ಮಾಡಿ ಕೋವಿಡ್ ಲಸಿಕೆ ನೀಡಲು ವ್ಯವಸ್ಥೆ ಮಾಡಿ ಎಂದು ತಿಳಿಸಿದ್ದಾರೆ. ಕೊರೊನಾ ಎರಡನೇ ಅಲೆ ಆರಂಭವಾಗಿ ರುವುದರಿಂದ ಕೋವಿಡ್ ಕೇರ್ ಸೆಂಟರ್‍ಗಳನ್ನು ಹಾಗೆಯೇ ಉಳಿಸಿಕೊಂಡು ಅಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಿ ಹಾಗೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ 10ರಿಂದ 20 ಹಾಸಿಗೆ ಗಳನ್ನು ಕೊರೊನಾ ಸೋಂಕಿತರಿಗಾಗಿ ಮೀಸಲಿರಿಸಿ ಎಂದು ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರನ್ನು ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿ, ಅಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿ ಎಂದ ಅವರು, ಜಿಲ್ಲೆಯಲ್ಲಿ ಪ್ರತೀ ದಿನ 5 ಸಾವಿರ ಆರ್‍ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ಎಂದು ತಿಳಿಸಿದರು.

Translate »