ಕೊರೊನಾ ಮಾರಿಯಿಂದ ಏಳು ಮಂದಿ ಮುಕ್ತಿ
ಮೈಸೂರು

ಕೊರೊನಾ ಮಾರಿಯಿಂದ ಏಳು ಮಂದಿ ಮುಕ್ತಿ

April 13, 2020

ಮೈಸೂರು, ಏ.12(ಎಂಟಿವೈ)- ಲಾಕ್‍ಡೌನ್ ನಿರ್ಬಂಧ ದಿಂದ ಕಂಗೆಟ್ಟಿರುವ ಹಾಗೂ ಪ್ರತಿದಿನ ನೊವೆಲ್ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಆತಂಕ ಗೊಂಡಿರುವ ಮೈಸೂರು ಜನತೆಗೆ ಒಂದು ಸಂತಸದ ಸಂಗತಿ. ಕೊರೊನಾ ವೈರಸ್‍ಗೆ ಚಿಕಿತ್ಸೆ ಪಡೆಯುತ್ತಿರು ವವರಲ್ಲಿ 7 ಮಂದಿ ಸಂಪೂರ್ಣ ಗುಣಮುಖರಾಗಿ ಭಾನು ವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಕೊರೊನಾ ಸೋಂಕು ಅತ್ಯಂತ ಅಪಾಯಕಾರಿ. ಆ ಮೂಲಕ ಸೋಂಕು ಮಾರಣಾಂತಿಕ ಎಂಬ ಪರಿಭಾವ ದಿಂದ ತತ್ತರಿಸಿ ಹೋಗಿರುವವರು ಇದರಿಂದ ಕೊಂಚ ನೆಮ್ಮದಿಯಾಗಿರಬಹುದು. ದುಬೈನಿಂದ ಬಂದು, ಮೈಸೂರಿ ನಲ್ಲಿ ಸೋಂಕು ಪತ್ತೆಯಾಗಿದ್ದ ಕೇರಳದ ವ್ಯಕ್ತಿ ಹಾಗೂ ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯ 6 ಮಂದಿ ಉದ್ಯೋಗಿಗಳು ಸೇರಿ ಒಟ್ಟು 7 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾದರು. ಇದರೊಂದಿಗೆ ಮೈಸೂರಲ್ಲಿ 9 ಮಂದಿ ಕೊರೊನಾ ಸೋಂಕಿನಿಂದ ಮುಕ್ತರಾದಂತಾಗಿದೆ. ಜೊತೆಗೆ ಸೋಂಕಿತರ ಸಂಖ್ಯೆ 48ರಿಂದ 39ಕ್ಕೆ ಕುಸಿದಿದೆ. ಈ ಮಧ್ಯೆ ಭಾನುವಾರ ಜುಬಿಲಂಟ್ ಕಾರ್ಖಾನೆಯ 32 ವರ್ಷದ ನೌಕರನೊಬ್ಬನಲ್ಲಿ ಸೋಂಕು ದೃಢಪಟ್ಟಿದೆ.

ಬೆಂಗಳೂರನ್ನು ಹೊರತುಪಡಿಸಿದರೆ ಅತೀ ಹೆಚ್ಚು ಸೋಂಕಿತರು ಇರುವ ನಗರ ಎಂಬ ಅಪಕೀರ್ತಿಗೆ ಮೈಸೂರು ಒಳಗಾಗಿದ್ದು, ಇದುವರೆಗೆ 48 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಇಬ್ಬರು ವಿದೇಶದಿಂದ ಬಂದವರಾಗಿದ್ದರೆ, 8 ಮಂದಿ ದೆಹಲಿಯ ತಬ್ಲಿಘಿ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದವರು. ಉಳಿದ 38 ಮಂದಿ ನಂಜನ ಗೂಡಿನ ಜುಬಿಲಂಟ್ ಕಾರ್ಖಾನೆ ನೌಕರರು ಹಾಗೂ ಅವರ ಸಂಬಂಧಿಗಳೇ ಆಗಿದ್ದರು. ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ 39 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನು ವಾರವಷ್ಟೇ ಸೋಂಕು ದೃಢಪಟ್ಟಿರುವ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಆರಂಭಿಸಲಾಗಿದೆ. ಮೈಸೂರಿ ನಲ್ಲಿನ ಸೋಂಕಿತರಲ್ಲಿ ಯಾರನ್ನೂ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡುವ ಗಂಭೀರ ಪರಿಸ್ಥಿತಿ ಉದ್ಭವಿಸಿಲ್ಲ. ಈ ವಾರ ಮತ್ತಷ್ಟು ಮಂದಿ ಆಸ್ಪತ್ರೆಯಿಂದ ಬಿಡುಗಡೆ ಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

1531 ಮಂದಿ ನಿಗಾ: ಮೈಸೂರಲ್ಲಿ ನೊವೆಲ್ ಕೊರೊನಾ ವೈರಸ್ ಪತ್ತೆಯಾದ ದಿನದಿಂದ ಇದುವರೆಗೆ 3555 ಮಂದಿಯನ್ನು 14 ದಿನಗಳ ಹೋಮ್ ಕ್ವಾರಂಟೈನ್‍ನಲ್ಲಿಟ್ಟು ನಿಗಾ ವಹಿಸಲಾಗಿದೆ. ಅವರಲ್ಲಿ 1978 ಮಂದಿ ಯಶಸ್ವಿಯಾಗಿ ಕ್ವಾರಂಟೈನ್ ಮುಗಿಸಿದ್ದಾರೆ. ಪ್ರಸ್ತುತ 1531 ಮಂದಿ ಇನ್ನು ಕ್ವಾರಂಟೈನ್‍ನಲ್ಲಿದ್ದಾರೆ. ನಿಯಮ ಉಲ್ಲಂಘಿಸಿ ಮನೆಯಿಂದ ಹೊರಗೆ ಓಡಾಡುತ್ತಿದ್ದವರನ್ನು ಪತ್ತೆ ಮಾಡಿ ಅವರಿಗೆ ಜಿಲ್ಲಾಡಳಿತವೇ ವಿವಿಧ ಲಾಡ್ಜ್‍ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ.

ಆಸ್ಪತ್ರೆಯ ಸಿಬ್ಬಂದಿ ಸೇವೆಗೆ ಶ್ಲಾಘನೆ: ಮೈಸೂರಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಸೋಂಕಿ ತರು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಯದ ವಾತಾವರಣ ನಿರ್ಮಾಣ ವಾಗಿತ್ತು. ಅದರಲ್ಲೂ ನಂಜನಗೂಡಿನ ಜನತೆ ಆತಂಕದಲ್ಲಿದ್ದರು. ಸೋಂಕಿತರಿಗೆ ಕೋವಿಡ್ ಆಸ್ಪತ್ರೆ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಹಗಲು ರಾತ್ರಿ ಚಿಕಿತ್ಸೆ ನೀಡಿ, 9 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲು ಕಾರಣಕರ್ತರಾಗಿದ್ದಾರೆ. ಅವರ ಸೇವೆಯನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

Translate »