ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಚರಂಡಿ ಕಾಮಗಾರಿ: ವಾಹನ ಸಂಚಾರಕ್ಕೆ ತೀವ್ರ ಅಡಚಣೆ
ಮೈಸೂರು

ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಚರಂಡಿ ಕಾಮಗಾರಿ: ವಾಹನ ಸಂಚಾರಕ್ಕೆ ತೀವ್ರ ಅಡಚಣೆ

May 25, 2018

ಮೈಸೂರು:  ಮೈಸೂರು ನಗರ ಹೃದಯ ಭಾಗದಲ್ಲಿರುವ ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರ ಮಠದ ಎದುರು ಕೈಗೆತ್ತಿಕೊಂಡಿರುವ ಚರಂಡಿಯ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಭಾರಿ ಕಿರಿಕಿರಿಯಾಗಿ ಪರಿಣಮಿಸಿದೆ.

ಇಲ್ಲಿ ರಸ್ತೆಗೆ ಅಡ್ಡಲಾಗಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ ರಸ್ತೆಯ ಅರ್ಧ ಭಾಗಗಿಂತಲೂ ಕಡಿಮೆ ಅಳತೆಯಲ್ಲಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಅದೇ ರೀತಿ ಉಳಿದ ಮುಕ್ಕಾಲು ಭಾಗದ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಮೊದಲೇ ವಾಹನ ದಟ್ಟಣೆ ಹೆಚ್ಚಾಗಿರುವ ಈ ರಸ್ತೆಯಲ್ಲಿ ಇದೀಗ ಸಂಚಾರ ಎಂಬುದು ಸವಾಲಾಗಿದೆ.

ಈ ರಸ್ತೆ ಮೂಲಕ ಸಾಗುವ ವಾಹನ ಸವಾರರು ಸಂಚಾರಕ್ಕೆ ಮುಕ್ತವಾಗಿರುವ ಕಾಲುಭಾಗದಷ್ಟು ರಸ್ತೆಯ ಜಾಗದಲ್ಲಿ ಒಮ್ಮೆಲೇ ಮುನ್ನುಗ್ಗಲು ಪ್ರಯತ್ನಿಸುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಆಗಾಗ್ಗೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಚಾಮರಾಜ ಜೋಡಿ ರಸ್ತೆ ಮಾರ್ಗ ಹಾಗೂ ದೇವರಾಜ ಅರಸು ರಸ್ತೆ ಸೇರಿದಂತೆ ಇನ್ನಿತರ ರಸ್ತೆಗಳ ಮೂಲಕ ನಾರಾಯಣಶಾಸ್ತ್ರಿ ರಸ್ತೆಯ ಈ ಕಾಮಗಾರಿ ನಡೆಯುತ್ತಿರುವ ಸ್ಥಳದಿಂದ ಮುಂದೆ ಸಾಗಲು ಪರಿತಪಿಸುವಂತಾಗಿದೆ.

ಹೀಗೆ ಎರಡೂ ಕಡೆಯಿಂದ ಎದುರು ಬದುರು ಬರುವ ವಾಹನ ಸವಾರರಲ್ಲಿ ಬಹುತೇಕರು ತಾವೇ ಮುಂದೆ ಸಾಗಬೇಕು ಎಂಬ ಹಠಕ್ಕೆ ಬಿದ್ದವರಂತೆ ವಾಹನ ಚಾಲನೆ ಮಾಡುವ ಹಿನ್ನೆಲೆಯಲ್ಲಿ ಯಾರೂ ಮುಂದೆ ಸಾಗಲಾರದೆ ಸಂಚಾರ ದಟ್ಟಣೆ ತಲೆದೋರುತ್ತಿದೆ. ಪರಿಣಾಮ ಸವಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಇಂತಹ ಪರಿಸ್ಥಿತಿಯಿಂದ ಬೇಸರಗೊಳ್ಳುವ ಕೆಲ ಸವಾರರು ಪರ್ಯಾಯ ರಸ್ತೆಗಳನ್ನು ಆಶ್ರಯಿಸುತ್ತಿದ್ದಾರೆ.

ಪಾಲಿಕೆಯ ವಾರ್ಡ್ ನಂ. 36ರ ವ್ಯಾಪ್ತಿಯ ಪ್ರದೇಶ ಇದಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ವಹಿಸಬೇಕಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

Translate »