ಕೆಸರು ಗದ್ದೆಯಂತಿರುವ ನಾರಾಯಣಶಾಸ್ತ್ರಿ ರಸ್ತೆ
ಮೈಸೂರು

ಕೆಸರು ಗದ್ದೆಯಂತಿರುವ ನಾರಾಯಣಶಾಸ್ತ್ರಿ ರಸ್ತೆ

July 13, 2018

ಮೈಸೂರು: ಮೈಸೂರು ನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ವಾಹನ ಸವಾರರು ಕೆಸರಿನಲ್ಲಿ ಜಾರಿ ಬೀಳುವಂತಾಗಿದ್ದು, ರಸ್ತೆ ಮಧ್ಯೆ ನಡೆಸುತ್ತಿರುವ ಒಳ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮೈಸೂರಿನ ವಿನೋಬಾ ರಸ್ತೆಯಿಂದ ದೇವರಾಜ ಅರಸು ಜಂಕ್ಷನ್‍ವರೆಗೆ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನಗರ ಪಾಲಿಕೆ ಒಂದು ತಿಂಗಳ ಹಿಂದೆಯೇ ಒಳ ಚರಂಡಿ ಕಾಮಗಾರಿ ಆರಂಭಿಸಿತ್ತು. ಜೆಸಿಬಿಯಲ್ಲಿ ರಸ್ತೆ ಮಧ್ಯೆದಲ್ಲಿಯೇ ಒಳ ಚರಂಡಿ ಮಾರ್ಗಕ್ಕೆ ಪೈಪ್ ಲೈನ್ ಅಳವಡಿಸಲು ರಸ್ತೆಯುದ್ದಕ್ಕೂ ಗುಂಡಿ ತೋಡಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಪೂರ್ಣಗೊಳಿಸದೇ ಅರ್ಧಕ್ಕೆ ಕೆಲಸ ಸ್ಥಗಿತಗೊಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ `ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಜು.3ರಂದು ವರದಿ ಪ್ರಕಟಿಸಲಾಗಿತ್ತು. ಮರುದಿನ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರು ನಾಲ್ಕು ದಿನದೊಳಗಾಗಿ ಕಾಮಗಾರಿಯನ್ನು ಮುಗಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಇಂದಿಗೂ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಕೈಗೊಂಡಿದ್ದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಗುಂಡಿಯಲ್ಲಿ ಹುದುಗಿಸಲಾಗಿರುವ ಪೈಪ್‍ನಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ಕಾಮಗಾರಿಯನ್ನು ಸ್ಥಗಿತಗೊಳಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಅರ್ಧಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಿರುವ ಪಾಲಿಕೆ ಸಿಬ್ಬಂದಿ, ಈ ಹಿಂದೆ ತೋಡಲಾಗಿದ್ದ ಗುಂಡಿಗೆ ಮಣ್ಣನ್ನು ಮುಚ್ಚಿದ್ದಾರೆ. ಇನ್ನಷ್ಟು ಮಣ್ಣು ರಸ್ತೆಯ ತುಂಬೆಲ್ಲಾ ಹರಡಿದೆ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಆ ಮಣ್ಣಿನ ಮೇಲೆ ವಾಹನಗಳು ಸಂಚರಿಸಿದ್ದರಿಂದ ಕೆಸರಾಗಿದೆ. ಇದರಿಂದ ಕಳೆದ ಸಂಜೆಯಿಂದ ಇಂದು ಬೆಳಗಿನವರೆಗೆ ಸುಮಾರು 15ಕ್ಕೂ ಹೆಚ್ಚು ಮಂದಿ ಬೈಕ್ ಸವಾರರು ಕೆಸರಿನಿಂದ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ವಾಹನ ಸವಾರರಿಗೆ ನೆರವಾಗಬೇಕೆಂದು ಮನವಿ ಮಾಡಿದ್ದರೆ.

Translate »