ಸಂಸದರಿಂದ ವಾಕ್-ಶ್ರವಣ ಸಂಸ್ಥೆಯ ನೂತನ ಕಟ್ಟಡ ಕಾಮಗಾರಿ ಪರಿಶೀಲನೆ
ಮೈಸೂರು

ಸಂಸದರಿಂದ ವಾಕ್-ಶ್ರವಣ ಸಂಸ್ಥೆಯ ನೂತನ ಕಟ್ಟಡ ಕಾಮಗಾರಿ ಪರಿಶೀಲನೆ

July 13, 2018
  • ಟಿ.ಕೆ.ಲೇಔಟ್‍ನಲ್ಲಿ 137 ಕೋಟಿ ರೂ. ಅಂದಾಜು ವೆಚ್ಚದ ಮೂರು ಅಂತಸ್ತಿನ ಕಟ್ಟಡ

ಮೈಸೂರು:  ಮೈಸೂರಿನ ಟಿ.ಕೆ.ಲೇಔಟ್‍ನಲ್ಲಿ 137 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನೂತನ ಕಟ್ಟಡ ಕಾಮಗಾರಿಯನ್ನು ಸಂಸದ ಪ್ರತಾಪ್‍ಸಿಂಹ ಗುರುವಾರ ಪರಿಶೀಲನೆ ನಡೆಸಿದರು.

2014ರಲ್ಲಿ ಪ್ರಾರಂಭಗೊಂಡಿದ್ದ ಕಾಮಗಾರಿ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಡಿಸೆಂಬರ್ ಒಳಗಾರಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಎಸ್.ಆರ್.ಸಾವಿತ್ರಿ, ಎಇಇ ರಾಜಶೇಖರ್, ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಆರ್.ಕೀರ್ತಿ ಇನ್ನಿತರರು ಇದ್ದರು.

ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್‍ಸಿಂಹ, 2.71 ಲಕ್ಷ ಚದರಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅನುಮತಿ ನೀಡಿತ್ತು. ಬಳಿಕ 2014ರಲ್ಲಿ ಕೇಂದ್ರದ ಎನ್‍ಡಿಎ ನೇತೃತ್ವದ ಸರ್ಕಾರ 137 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಡಾ.ಹರ್ಷವರ್ದನ ಶಂಕುಸ್ಥಾಪನೆ ನೆರವೇರಿಸಿದ್ದರು. ಕಟ್ಟಡದ ನೆಲ ಅಂತಸ್ತಿನಲ್ಲಿ ವಾಹನ ಪಾರ್ಕಿಂಗ್ ಹಾಗೂ ಉಳಿದ ಮೂರು ಅಂತಸ್ತಿನಲ್ಲಿ ಸಂಶೋಧನಾ ಕೇಂದ್ರಗಳು ಮತ್ತು ವಾಕ್ ಶ್ರವಣ ಸಂಬಂಧಿತ ಚಿಕಿತ್ಸಾ ಕೇಂದ್ರಗಳು ಇರಲಿವೆ ಎಂದರು.

ವಾಕ್ ಮತ್ತು ಶ್ರವಣ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ಹಾಗೂ ಉನ್ನತ ಮಟ್ಟದ ಚಿಕಿತ್ಸೆ ನೀಡಲು ಈ ಸೆಂಟರ್ ಆಫ್ ಎಕ್ಸಲೆನ್ಸ್ ಕಟ್ಟಡ ನಿರ್ಮಿಸಲಾಗುತ್ತಿದೆ. ಡಿಸೆಂಬರ್ ಒಳಗಾರಿ ಕಾಮಗಾರಿ ಪೂರ್ಣಗೊಳಿಸಿದರೆ ಇದರೊಂದಿಗೆ ಈಗಾಗಲೇ ಉದ್ಘಾಟನೆಗೆ ಸಿದ್ದವಾಗಿರುವ ಆರ್‍ಬಿಐ ಕರೆನ್ಸಿ ನೋಟು ಮುದ್ರಣ ಘಟಕ ಸೇರಿದಂತೆ ಇನ್ನಿತರೆ ಕಟ್ಟಡಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ನೆರವೇರಿಸಲಾಗುವುದು ಎಂದು ಹೇಳಿದರು.

ಹಾಸ್ಟೆಲ್ ಕಟ್ಟಡಕ್ಕೂ ಪ್ರಸ್ತಾವನೆ: ವಾಕ್ ಮತ್ತು ಶ್ರವಣ ಸಂಸ್ಥೆಗೆ ಚಿಕಿತ್ಸೆಗೆ ಬರುವ ಸಾಮಾನ್ಯವಾಗಿ ಬಹುತೇಕರು ಬಡವರೇ ಆಗಿರುತ್ತಾರೆ. ಅವರಿಗೆ ಚಿಕಿತ್ಸೆಗೆ ಪ್ರತಿನಿತ್ಯ ಊರಿನಿಂದ ಇಲ್ಲಿಗೆ ತಿರುಗಾಡಲು ಕಷ್ಟ. ಈ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪೂರ್ಣಗೊಳ್ಳುವವರೆಗೂ ಇಲ್ಲಿಯೇ ತಂಗಿ ಚಿಕಿತ್ಸೆ ಬಳಿಕ ತೆರಳಲು ಅನುಕೂಲವಾಗುವಂತೆ ಹಾಸ್ಟೆಲ್ ಒಂದನ್ನು ನಿರ್ಮಿಸಲು ಪ್ರಸ್ತಾವನೆ ಇದೆ. ಅಧಿಕಾರಿಗಳು ತಕ್ಷಣ ಪ್ರಸ್ತಾವನೆಯನ್ನು ನೀಡಿದರೆ ಕೇಂದ್ರ ಸಚಿವಾಲಯದಲ್ಲಿ ಮಂಜೂರಾತಿ ದೊರಕಿಸಿಕೊಡುವುದಾಗಿ ಹೇಳಿದರು.

Translate »