ಮೈಸೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದರೆಂಬ ಆರೋಪದ ಮೇಲೆ ಖಾಸಗಿ ಶಾಲಾ ಶಿಕ್ಷಕರೊಬ್ಬರ ವಿರುದ್ಧ ಉದಯಗಿರಿ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.
ಮೈಸೂರಿನ ಗೌಸಿಯಾನಗರ ನಿವಾಸಿ ಯಾದ ಖಾಸಗಿ ಶಾಲಾ ಶಿಕ್ಷಕ ಅಬೂಬಕರ್ (23) 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆಂಬ ಗಂಭೀರ ಆರೋಪ ಎದುರಿಸುತ್ತಿರುವವರು.
ಬಾಲಕಿ ಬಟ್ಟೆ ಬಿಚ್ಚಿಸಿ ಲೈಂಗಿಕ ಕಿರುಕುಳ ನೀಡಿದರೆಂಬ ಕಾರಣಕ್ಕೆ ಸಾರ್ವಜನಿಕರು ಶುಕ್ರವಾರ ಶಾಲೆ ಬಳಿ ಘೇರಾವ್ ಮಾಡಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ಸಂತೋಷ್ ಹಾಗೂ ಸಿಬ್ಬಂದಿ, ಮಹಜರು ನಡೆಸಿ, ಬಾಲಕಿ ಹೇಳಿಕೆ ಪಡೆದು ಪೋಷಕರು ನೀಡಿದ ದೂರಿನನ್ವಯ ಶಿಕ್ಷಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದರು.
ಸುದೀರ್ಘ ವಿಚಾರಣೆ ನಡೆಸಿ, ವೈದ್ಯಕೀಯ ತಪಾಸಣೆಗೊಳಪಡಿಸಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.