ನಿರಾಶ್ರಿತ 15 ಮಂದಿ ವೃದ್ಧೆಯರಿಗೆ ಆಶ್ರಯ ಅವಕಾಶ
ಮೈಸೂರು

ನಿರಾಶ್ರಿತ 15 ಮಂದಿ ವೃದ್ಧೆಯರಿಗೆ ಆಶ್ರಯ ಅವಕಾಶ

July 29, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರದಲ್ಲಿ ಕುಂಡಲಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆಸಲ್ಪಡುತ್ತಿರುವ ಮಹಿಳಾ ವೃದ್ಧಾಶ್ರಮದಲ್ಲಿ ಈಗಾಗಲೇ 21 ಮಂದಿಗೆ ಉಚಿತವಾಗಿ ಆಶ್ರಯ ನೀಡಲಾಗಿದೆ. ಇನ್ನು 15 ಮಂದಿಗೆ ಆಶ್ರಯ ನೀಡಲು ವ್ಯವಸ್ಥೆ ಇದೆ. ನಿರಾಶ್ರಿತ ವೃದ್ಧೆಯರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಟ್ರಸ್ಟ್ ಅಧ್ಯಕ್ಷೆ ಸುಮಿತ್ರಾ ರಮೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಮೈಸೂರಿನ ರಾಮಕೃಷ್ಣನಗರದ ಸಾಯಿಬಾಬಾ ದೇವಸ್ಥಾನದ ಸಮೀಪ ಟ್ರಸ್ಟ್‍ನಡಿ ವೃದ್ಧಾಶ್ರಮ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ 21 ಮಂದಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು 15 ಮಂದಿಗೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗಿದ್ದು, 60 ವರ್ಷ ಮೇಲ್ಪಟ್ಟ ನಿರಾಶ್ರಿತ ಮಹಿಳೆಯರು ಆಶ್ರಮಕ್ಕೆ ಪ್ರವೇಶ ಪಡೆದುಕೊಳ್ಳಬಹುದು. ಆಶ್ರಮ ನಿವಾಸಿಗಳಿಗೆ ಬಟ್ಟೆ, ಊಟ ಹಾಗೂ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಕಲ್ಪಿಸಿಕೊಡಲಾಗುವುದು. ಸಾರ್ವಜನಿಕರು ತಮ್ಮ ನೆರೆಹೊರೆಯಲ್ಲಿ ನಿರಾಶ್ರಿತ ವೃದ್ಧ ಮಹಿಳೆಯರು ಕಂಡು ಬಂದರೆ ಆಶ್ರಮಕ್ಕೆ ಸೇರಿಸುವಂತೆ ಅವರು ಮನವಿ ಮಾಡಿದರಲ್ಲದೆ, ವಿವರಗಳಿಗೆ ಮೊ.ಸಂ. 9945617016 ಅನ್ನು ಸಂಪರ್ಕಿಸುವಂತೆ ಕೋರಿದರು. ಟ್ರಸ್ಟ್‍ನ ಉಪಾಧ್ಯಕ್ಷ ಮಂಜುಳಾ ಶಂಕರ್, ಸಂಚಾಲಕಿ ರಚನಾ ಶಿವಕುಮಾರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »