ಚಾಮರಾಜನಗರ: ತಾಲೂಕಿನ ಮರಿಯಾಲ ಗ್ರಾಮದ ಶ್ರೀಮುರುಘ ರಾಜೇಂದ್ರ ಮಠದಲ್ಲಿ ಶನಿವಾರ ಮಠದ ಹಿರಿಯ ಶ್ರೀಗಳಾದ ಲಿಂಗೈಕ್ಯ ಶ್ರೀ ಮಹಾಂತ ಸ್ವಾಮೀಜಿ ಅವರ ಮೊದಲನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಗುಂಡೇಗಾಲ ಮಠದ ವೃಷಭರಾಜೇಂದ್ರ ಸ್ವಾಮೀಜಿ ಮಾತನಾಡಿ, ಮರಿಯಾಲ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಮಹಾಂತಸ್ವಾಮೀಜಿ ಅವರ ಕಾಳಜಿಯಿಂದ ಶ್ರೀಮಠವು ಇಂದು ಹೆಮ್ಮರವಾಗಿ ಬೆಳೆದಿದೆ. ಅವರ ದೂರದೃಷ್ಟಿಯ ಫಲವಾಗಿ ಶ್ರೀಮಠದ ವಿದ್ಯಾಸಂಸ್ಥೆಯು ಉತ್ತಮವಾಗಿ ಬೆಳವಣಿಗೆ ಆಗಿದ್ದು, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಶ್ರೀಮಠಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಶ್ರೀಮಠದ ಶ್ರೀಗಳಾದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಪೂಜ್ಯ ಗುರುಗಳಾದ ಮಹಾಂತ ಸ್ವಾಮೀಜಿ ಅವರು ಲಿಂಗೈಕ್ಯರಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಅವರ ಅಗಲಿಕೆ ಮಠಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಪರಿಶ್ರಮವೇ ಇಂದು ಮಠವು ಇಷ್ಟು ಹೆಸರುಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗಲು ಕಾರಣ ವಾಗಿದೆ ಎಂದು ತಿಳಿಸಿದರು.
ದೇವನೂರು ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾದಪಟ್ಟಣ ಮಠದ ಸದಾಶಿವಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಾಮ ರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ, ಹಂಡ್ರಕಳ್ಳಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಮುಡುಗೂಡು ಮಠದ ಇಮ್ಮಡಿ ಉದ್ದಾನ ಸ್ವಾಮೀಜಿ, ಹಣಕೊಳ ಮಠದ ಚಿದ್ದನಶಿವಚಾರ್ಯ ಸ್ವಾಮೀಜಿ, ಕಾಳನಹುಂಡಿ ಶ್ರೀಕುಮಾರ ಸ್ವಾಮೀಜಿ, ದಿ.ರಾಜಶೇಖರ ಮೂರ್ತಿ ಪುತ್ರಿ ಶೀಲಾ ಹರಹಳಕಟ್ಟಿ ಇದ್ದರು.
ರಕ್ತದಾನ ಶಿಬಿರ: ರೋಟರಿ ಸಿಲ್ಕ್‍ಸಿಟಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧನಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಆಶ್ರಯ ದಲ್ಲಿ ಮಠದ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ 38 ಜನರು ರಕ್ತದಾನ ಮಾಡಿ ದರು. ಈ ವೇಳೆಯಲ್ಲಿ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ಸುಜಾತ, ಇಮ್ಮಡಿ ಮುರಾಘ ರಾಜೇಂದ್ರ ಸ್ವಾಮೀಜಿ, ರೋಟರಿ ಸಿಲ್ಕ್‍ಸಿಟಿ ಅಧ್ಯಕ್ಷ ಎಚ್.ಎಂ. ಅಜಯ್, ಕಾರ್ಯದರ್ಶಿ ಆಲೂರು ಪ್ರದೀಪ್, ನಿಯೋಜಿತ ಅಧ್ಯಕ್ಷ ಬಿ.ರವಿಶಂಕರ್, ಮಾಜಿ ಅಧ್ಯಕ್ಷರಾದ ಪಿ.ರಾಜು, ಚೇತನ್ ಹೆಗಡೆ, ಡಿ.ಪಿ.ವಿಶ್ವಾಸ, ದೊಡ್ಡರಾಯಪೇಟೆ ಗಿರೀಶ್, ಸದಸ್ಯ ಎ.ಬಿ. ಮಲ್ಲೇಶ್, ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಇದ್ದರು.