ಕಾಯಕ ಯೋಗಿ ಶಿವನಲ್ಲಿ ಐಕ್ಯ
ಮೈಸೂರು

ಕಾಯಕ ಯೋಗಿ ಶಿವನಲ್ಲಿ ಐಕ್ಯ

January 23, 2019

ಗುರು ಉದ್ಧಾನ ಶ್ರೀ ಗದ್ದುಗೆ ಸಮೀಪವೇ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿ

ತುಮಕೂರು: ವಿಶ್ವಚೇತನ, ವಿಶ್ವರತ್ನ, ಕಾಯಕಯೋಗಿ, ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಗಳ ಯುಗಾಂತ್ಯವಾಗಿದೆ. ಸೋಮವಾರ ಬೆಳಿಗ್ಗೆ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದ ಮಹಾನ್ ಮಾನವತಾವಾದಿಗೆ ಕೋಟಿ ಮನಸುಗಳು ಭಾರ ಹೃದಯದಿಂದ ಬೀಳ್ಕೊಡುಗೆ ನೀಡಿದ್ದಾರೆ. ಸಿದ್ಧಗಂಗಾ ಮಠದ ಆವರಣದಲ್ಲಿ ಗುರು ಉದ್ಧಾನ ಶಿವಯೋಗಿಗಳ ಪಕ್ಕದಲ್ಲಿ ಶಿವಕುಮಾರ ಸ್ವಾಮೀಜಿ ಅವರನ್ನು ಗದ್ದುಗೆಯಲ್ಲಿ ಐಕ್ಯಗೊಳಿಸಲಾಗಿದೆ.

ಕ್ರಿಯಾ ಸಮಾಧಿ: ಮಂಗಳವಾರ ಸಂಜೆ 4.30ರ ವೇಳೆಗೆ ಆರಂಭವಾದ ಕ್ರಿಯಾ ವಿಧಾನ, ಧಾರ್ಮಿಕ ವಿಧಿವಿಧಾನಗಳು ಅಂತಿಮ ವಾಗಿ 11 ಗಂಟೆಗೆ ಪೂರ್ಣಗೊಂಡವು. ಶ್ರೀಗಳ ಚೈತನ್ಯ ಅವರ ದೇಹವನ್ನು ಬಿಟ್ಟು ಹೋದ ಬಳಿಕ ಅವರ ದೇಹಕ್ಕೆ ಮತ್ತೆ ಚೈತನ್ಯ ತುಂಬಲು ಕ್ರಿಯಾ ಸಮಾಧಿ ವಿಧಿವಿಧಾನ ಮಾಡಲಾಯಿತು. ಲಿಂಗಧಾರಣೆ ಮಾಡಿ, ಇಷ್ಟಲಿಂಗ ಪೂಜೆ ಮಾಡುವ ಅಧ್ಯಾತ್ಮ ಸಾಧಕರಿಗೆ ಮಾತ್ರ ಲಿಂಗಾಯತ ಕ್ರಿಯಾಸಮಾಧಿ ಮಾಡಲಾಗುತ್ತದೆ. ಶ್ರೀ ಮಠದ ಕಿರಿಯ ಶ್ರೀಗಳೇ ಮುಂದೆ ನಿಂತು ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಸಂಜೆ 5 ಗಂಟೆಗೆ ಶ್ರೀಗಳಿಗೆ ಮಹಾ ಮಂಗಳಾ ರತಿ ಮಾಡಿದ ಬಳಿಕ ಮೆರವಣಿಗೆ ಆರಂಭವಾ ಯಿತು. ಸಂಜೆ 5.15 ಗಂಟೆಗೆ ಲಿಂಗೈಕ್ಯ ದೇಹವನ್ನು 1 ಲಕ್ಷದ 1 ರುದ್ರಾಕ್ಷಿ ಹಾಗೂ ಬಗೆ ಬಗೆ ಹೂಗಳಿಂದ ಅಲಂಕೃತವಾಗಿದ್ದ ವಿಮಾನ ಗೋಪುರ ರಥದಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ಸಂಜೆ 6 ಗಂಟೆ ವೇಳೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಸಚಿವರಾದ ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದರಾದ ವೀರಪ್ಪ ಮೊಯ್ಲಿ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಮಾಜಿ ಸಚಿವರಾದ ವಿ.ಸೋಮಣ್ಣ, ಜನಾರ್ದನ ರೆಡ್ಡಿ ಸೇರಿದಂತೆ ಹಲವು ಸಂಸದರು, ಶಾಸಕರು, ಸಚಿವರು, ಗಣ್ಯರು ಸೇರಿದಂತೆ ನೂರಾರು ಜನಪ್ರತಿನಿಧಿಗಳು ಹಾಜರಿದ್ದು, ಶ್ರೀಗಳ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಬಳಿಕ 3 ಸುತ್ತು ಕುಶಾಲುತೋಪು ಹಾರಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಶ್ರೀಗಳ ಲಿಂಗಕಾಯದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶ್ರೀಮಠದ ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದರು. ಇದಕ್ಕೂ ಮುನ್ನ ಶ್ರೀಗಳ ಲಿಂಗಕಾಯಕ್ಕೆ ರಾಷ್ಟ್ರಧ್ವಜ ಹೊದಿಸುವಾಗ `ಶ್ರೀಗಳಿಗೆ ಭಾರತರತ್ನ ನೀಡಿ’ ಘೋಷಣೆ ಭಕ್ತ ಸಮೂಹದಿಂದ ಕೇಳಿಬಂದಿತು.

ಪಂಚವಾದ್ಯಗಳ ಮೂಲಕ ಶಿವಯೋಗಿಗಳ ಗದ್ದುಗೆವರೆಗೂ ಮೆರವಣಿಗೆ ಮಾಡಲಾಯಿತು. ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ, ನಡೆದಾಡುವ ದೇವರಿಗೆ ಜಯವಾಗಲಿ, ಅನ್ನ ದಾಸೋಹಿಗೆ ಜಯವಾಗಲಿ, ಜ್ಞಾನ ದಾಸೋಹಿಗೆ ಜಯವಾಗಲಿ ಘೋಷಣೆ ಕೂಗುತ್ತಾ ಗದ್ದುಗೆ ಭವನದಲ್ಲಿ 3 ಪ್ರದಕ್ಷಿಣೆ ಮಾಡಲಾಯಿತು. ಬಳಿಕ ಗದ್ದುಗೆಯ ಸಮಾಧಿ ಸ್ಥಳದಲ್ಲಿ ಐವರು ಸ್ವಾಮೀಜಿಗಳು ಕ್ರಿಯಾ ವಿಧಿ ವಿಧಾನಗಳನ್ನು ಆರಂಭಿಸಿದರು. ಗದ್ದುಗೆ ಪೂಜೆ ಸ್ಥಳದಲ್ಲಿ ಕ್ರಿಯಾ ಸಮಾಧಿ ಶಾಸ್ತ್ರಗಳು, ಮಂತ್ರ ಪಠಣದ ಮೂಲಕ ಕಾರ್ಯ ನಡೆಯಿತು. ಅಟವೀ ಶಿವಯೋಗಿಗಳ ಗದ್ದುಗೆಯ ಅರ್ಚಕರೂ ಪೂಜೆಯಲ್ಲಿ ತೊಡಗಿಸಿಕೊಂಡಿದ್ದರು. ಬೆಳಿಗ್ಗೆಯಿಂದಲೇ ನಡೆದ ಪೂಜಾಶಾಸ್ತ್ರಗಳನ್ನು ಕಿರಿಯ ಸ್ವಾಮೀಜಿಗಳು ಪೂರ್ಣಗೊಳಿಸಿದರು. ಕ್ರಿಯಾ ಸಮಾಧಿ ವೇಳೆ 11 ಸಾವಿರ ವಿಭೂತಿ ಗಟ್ಟಿಗಳು, 20 ಚೀಲ ಅಂದರೆ 500 ಕೆಜಿ ಉಪ್ಪು, 10 ಚೀಲ ಮರಳು, ಬಿಲ್ವಪತ್ರೆ ಸೇರಿದಂತೆ 1001 ವಿವಿಧ ರೀತಿಯ ಪತ್ರೆಗಳನ್ನು ಬಳಕೆ ಮಾಡಲಾಗಿತ್ತು.

ಕ್ರಿಯಾ ಸಮಾಧಿ: ವೀರಶೈವ ಲಿಂಗಾಯಿತ ಆಗಮೋಕ್ತ ಕ್ರಿಯಾ ಸಮಾಧಿ ವಿಧಿ ವಿಧಾನಗಳ ಮೂಲಕ ಶ್ರೀಗಳ ಕ್ರಿಯಾ ಸಮಾಧಿಯನ್ನು ಮಾಡಲಾಯಿತು. 9 ಪಾದ ಆಳ, 9 ಪಾದ ಉದ್ದ, 5 ಪಾದ ಅಗಲದಲ್ಲಿ ನಿರ್ಮಾಣವಾಗಿರುವ ಕ್ರಿಯಾ ಸಮಾಧಿಯಲ್ಲಿ 3 ಹಂತಗಳಲ್ಲಿ ಸೋಪಾನ(ಮೆಟ್ಟಿಲು) ನಿರ್ಮಾಣ ಮಾಡಲಾಗಿತ್ತು. ಶ್ರೀಗಳ ಪಾರ್ಥಿವ ಶರೀರವನ್ನು ಕೂರಿಸಲು ಆದರೊಳಗೆ ತ್ರಿಕೋನಾಕೃತಿಯಲ್ಲಿ ಗೂಡು ನಿರ್ಮಿಸಲಾಗಿತ್ತು. ಇದರಲ್ಲಿ ಶ್ರೀಗಳ ಲಿಂಗಕಾಯವನ್ನಿಟ್ಟು, ವಿಭೂತಿ, ಬಿಲ್ವಪತ್ರೆ ಮತ್ತಿತರ ಪತ್ರೆಗಳು ಹಾಗೂ ಉಪ್ಪು ಸುರಿದು ಕ್ರಿಯಾ ಸಮಾಧಿಯನ್ನು ಮುಚ್ಚಲಾಯಿತು. ಮೊದಲಿಗೆ ಶ್ರೀಗಳ ಲಿಂಗಕಾಯಕ್ಕೆ ನಾಡಿನ ಪುಣ್ಯ ನದಿಗಳಿಂದ ತರಿಸಿದ್ದ ಪವಿತ್ರ ತೀರ್ಥದಿಂದ ಅಭಿಷೇಕ ನೆರವೇರಿಸಿ ಹೊಸ ಕಶಾಯ ವಸ್ತ್ರಗಳ ಧಾರಣೆ ಮಾಡಲಾಯಿತು.

ಈ ವೇಳೆ ಪಂಚಾಮೃತ ಹಾಗೂ ಪತ್ರೆ ಇಟ್ಟು ಪ್ರತಿ ಸೋಪಾನದಲ್ಲೂ ಅಭಿಷೇಕ ನಡೆಸಲಾಯಿತು. ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಿ, ಕೈಗೆ ಇಷ್ಟ ಲಿಂಗವನ್ನು ನೀಡಲಾಯಿತು. ನಂತರ ರುದ್ರ ಚಮಕ ಪಠಣ ಮಾಡುತ್ತಾ ಪಾರ್ಥಿವ ಶರೀರಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಈ ವೇಳೆ ಶ್ರೀಗಳಿಗೆ ಮಹಾ ಮಂಗಳಾರತಿ ಹಾಗೂ ತಂಬಿಟ್ಟು, ಚಿಗಲಿ ಹಾಗೂ ಹಸಿ ಕಡಲೆಕಾಳು ನೈವೇದ್ಯ ನೆರವೇರಿಸಲಾಯಿತು. ಕೆಳ ಭಾಗದಲ್ಲಿ ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿಗಳಿಂದ ಲಿಂಗ ಶರೀರವನ್ನು ಮುಚ್ಚಲಾಯಿತು.

Translate »