ಸಿದ್ದಾಪುರ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಕೊಡಗು

ಸಿದ್ದಾಪುರ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

July 18, 2021

ಸಿದ್ದಾಪುರ, ಜು.17- ಮಳೆ ಪ್ರವಾಹ, ಪ್ರಕೃತಿ ವಿಕೋಪದಿಂದ ಸೂರು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, 3 ವರ್ಷ ಕಳೆದರೂ ಇಂದಿಗೂ ಸಮಸ್ಯೆ ಬಗೆಹರಿಯದೆ ಮತ್ತೊಮ್ಮೆ ಮಳೆಯ ಪ್ರವಾಹ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗೀಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೀಪಲ್ಸ್ ಫೌಂಡೇಷನ್, ಟೆಚ್ ಚಾರಿಟಬಲ್ ಟ್ರಸ್ಟ್ ಹಾಗೂ ಹೆಚ್‍ಆರ್‍ಎಸ್, ಜಮಾ ಅತೆ ಇಸ್ಲಾಮಿ ಹಿಂದ್ ವತಿಯಿಂದ ನೆರೆ ಸಂತ್ರಸ್ತರಿಗೆ 25 ಮನೆ ನಿರ್ಮಾಣ ಮಾಡಲು ನೆಲ್ಯಹುದಿ ಕೇರಿ ವ್ಯಾಪ್ತಿಯ ನಲ್ವತ್ತೆಕ್ರೆಯಲ್ಲಿ ನಡೆದ ಶಂಕುಸ್ಥಾಪನಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರ ಸಂಕಷ್ಟಕ್ಕೆ ಸ್ಪಂದಿಸಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಗ್ರಾಮಕ್ಕೆ ಹಲವಾರು ಸಮಾಜ ಸೇವಾ ದಾನಿಗಳು ಮುಂದೆ ಬಂದಿರುವುದು ಶ್ಲಾಘನೀಯ.

ದಾನಿಗಳು ನಿರ್ಮಿಸಿಕೊಡುವ ಮನೆ ನಿರ್ಮಾಣಕ್ಕೆ ಅಗತ್ಯ ದಾಖಲಾತಿಗಳನ್ನು ಸರಿಪಡಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸರಿಯಾದ ನಡೆಯಲ್ಲ.ಸರ್ಕಾರ ಮಾಡಬೇಕಾಗಿರುವುದನ್ನು ದಾನಿಗಳೇ ಮುಂದೆ ನಿಂತು ಮಾಡುವುದಕ್ಕೆ ಸರ್ಕಾರ ಸಹಕಾರ ನೀಡಬೇಕು.ಆದರೆ ಸರ್ಕಾರವು ಕೊಡಲ್ಲ, ದಾನಿಗಳಿಗೆ ಕೊಡಲು ಬಿಡೋ ದಿಲ್ಲ ಎಂದರೆ ಎಷ್ಟು ಸರಿ. ಇನ್ನಾದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕಾಗಿದೆ ಎಂದರು.

ಮಂಗಳೂರಿನ ಧಾರ್ಮಿಕ ಪಂಡಿತ ಯಹ್ಯಾ ತಂಙಳ್ ಮದನಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕೊಡಗು ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವಾ ಸಂಘಟನೆಗಳು ಹೆಚ್ಚು ಸಹಕಾರ ನೀಡಿದ್ದು, ಜಾಗ ಹಾಗೂ ಮನೆ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಸೇವಾ ಮನೋಭಾವದಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕೆಂದರು.

ಜಮಾ ಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯದ ಸಂಚಾಲಕ ಯು. ಅಬ್ದು ಸ್ಸಲಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್‍ಆರ್‍ಎಸ್ ಸಂಘಟನೆ ಜಿಲ್ಲೆಯಲ್ಲಿ ಸಮಾಜ ಸೇವೆ ಮೂಲಕ ಜನರ ಸಮಸ್ಯೆಗಳಿಗೆ ನೆರವಾಗಿದೆ.

ಸೂರು ಕಳೆದುಕೊಂಡು ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪೀಪಲ್ಸ್ ಫೌಂಡೇಷನ್ 2 ಎಕರೆ ಜಾಗ ದಾನವಾಗಿ ನೀಡಿದ್ದು, ಟೆಚ್ ಚಾರಿಟಬಲ್ ಟ್ರಸ್ಟ್ 25 ಮನೆಗಳ ನಿರ್ಮಾಣಕ್ಕೆ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಎರಡನೇ ಹಂತದ 25 ಮನೆ ನಿರ್ಮಾಣ ಕಾರ್ಯವು ಪ್ರಾರಂಭವಾಗಲಿದೆ. ಸಿದ್ದಾಪುರ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸುವ ಕಾರ್ಯ ಕಳೆದ ವರ್ಷವೇ ಪೂರೈಸಬೇಕಾಗಿತ್ತು. ಅಧಿಕಾರಿಗಳ ಸಹಕಾರ ಇಲ್ಲದೆ ತಡವಾಗಿದೆ.

ಎಲ್ಲರ ಸಹಕಾರದೊಂದಿಗೆ ಸದ್ಯದಲ್ಲೇ ಮನೆ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನೀತಾ ಮಂಜುನಾಥ್ ಮಾತನಾಡಿ, ಸಿದ್ದಾಪುರ ನೆಲ್ಯಹುದಿ ಕೇರಿ ವ್ಯಾಪ್ತಿಯಲ್ಲಿ ನೆರೆ ಸಂತ್ರಸ್ತರಾಗಿ ಸಂಕಷ್ಟದಲ್ಲಿರುವ ಸಂದರ್ಭ ದಲ್ಲಿ ಸಮಾಜ ಸೇವಾ ಸಂಘಟನೆಗಳು ತುರ್ತು ಸಂದರ್ಭದಲ್ಲಿ ಬೇಕಾದ ಸಹಾಯ ಮಾಡಿದೆ. ಸಂತ್ರಸ್ತರಿಗೆ ಸಮಾಜ ಸೇವಾ ಸಂಘಟನೆಗಳೇ ಮನೆ ನಿರ್ಮಿಸಿಕೊಡುತ್ತಿರುವುದು ಗ್ರಾಮದ ಜನರ ಭಾಗ್ಯವಾಗಿದೆ ಎಂದರು.

ಈ ಸಂದರ್ಭ ಗ್ರಾಪಂ ಸದಸ್ಯರಾದ ಎ.ಕೆ.ಹಕೀಂ, ಸುಹಾದ ಅಶ್ರಫ್, ಸಂಶೀರ್, ಸಫಿಯಾ ಮೊಹಮ್ಮದ್, ಅಶೋಕ, ವೆಲ್ ಫೇರ್ ಪಾರ್ಟಿ ಅಧ್ಯಕ್ಷ ಬಶೀರ್, ನಲ್ವತ್ತೆಕ್ರೆ ಮುಸ್ಲಿಂ ಜಮಾ ಅತ್ ಕಮಿಟಿ ಅಧ್ಯಕ್ಷ ಬೀರನ್‍ಕುಟ್ಟಿ ಹಾಜಿ, ಕಾರ್ಯದರ್ಶಿ ಸೈದು, ಉದ್ಯಮಿ ಮಹ್ ಪೂಝ್, ಜಮಾ ಆತೆ ಇಸ್ಲಾಮಿ ಹಿಂದ್ ಸಂಘಟನೆಯ ಜಿಲ್ಲಾ ಪ್ರಮುಖರಾದ ಅಬ್ದುಲ್ ರೆಹಮಾನ್, ಗಫೂರ್, ಮೊಹಮ್ಮದ್ ಅಶ್ರಫ್, ಸಫೀಕ್, ಇಸ್ಮಾಯಿಲ್ ಇತರರು ಹಾಜರಿದ್ದರು.

Translate »