ಸಿದ್ದರಾಮಯ್ಯ ಅಂಕಿತ; ಬಿಜೆಪಿ ಸರ್ಕಾರದಿಂದ ಅಂತಿಮ  ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
News

ಸಿದ್ದರಾಮಯ್ಯ ಅಂಕಿತ; ಬಿಜೆಪಿ ಸರ್ಕಾರದಿಂದ ಅಂತಿಮ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

December 24, 2021

ಬೆಂಗಳೂರು, ಡಿ.23(ಕೆಎಂಶಿ)-ಬಲವಂತದ ಮತಾಂತರ ಇಲ್ಲವೇ ಮದುವೆ ಮಾಡಿಕೊಳ್ಳುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಹಕ್ಕು 2021 ತಿದ್ದುಪಡಿ ಮಸೂದೆಗೆ ಪ್ರತಿಪಕ್ಷಗಳ ವಿರೋಧ, ಗದ್ದಲ, ಗೊಂದಲದ ನಡುವೆ ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು.

ಇಡೀ ದಿನ ಮಸೂದೆಗೆ ಪರ, ವಿರುದ್ಧ ಚರ್ಚೆ ನಡೆದು, ಕೊನೆಗೆ ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧದ ನಡುವೆ ಸರ್ಕಾರ ತನ್ನ ಕಾರ್ಯಸೂಚಿಗೆ ಅನುಮೋದನೆ ಪಡೆದುಕೊಂಡಿತು. ಮಸೂದೆ ನಾವು ತಂದಿರುವುದಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಅಂದರೆ 2016 ರಲ್ಲೇ ಬಲವಂತ ಮತಾಂತರ ಕಾಯ್ದೆ ತರಲು ಕಾನೂನು ಆಯೋಗ ಕರಡಿಗೆ ಒಪ್ಪಿಗೆ ನೀಡಿತ್ತು. ಈ ಒಪ್ಪಿಗೆಗೆ ಅಂದಿನ ಕಾನೂನು ಸಚಿವ ಜಯಚಂದ್ರ ಸಹಿ ಹಾಕಿದ್ದಾರೆ. ನಾವು ಕೆಲ ಬದಲಾವಣೆಗಳೊಂದಿಗೆ ಮಸೂದೆ ತಂದಿದ್ದೇವೆ. ಅಂದು ನೀವೇ ಕಾನೂನು ತರಲು ಹೊರಟು ಇಂದು ವಿರೋಧ ವ್ಯಕ್ತಪಡಿಸುತ್ತಿರುವುದು ಏತಕ್ಕೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿಯವರ ಅನುಮತಿ ಮೇರೆಗೆ ಮಸೂದೆ ಸಿದ್ಧಪಡಿಸಲಾಗಿದೆ ಎಂದು ಜಯಚಂದ್ರ ಅವರು ಕಡತದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಅಂದು ಸಿದ್ಧಗೊಂಡ ಕರಡು ಮಸೂದೆ ಸಂಪುಟದ ಮುಂದೆ ಬರಲಿಲ್ಲ ಅಷ್ಟೇ. ಆದರೆ ಅಂದು ನೀವು ತಂದ ಕಾನೂನನ್ನೇ ನಾವು ತರಲು ಹೊರಟಿದ್ದೇವೆ. ಈಗ ನಿಮ್ಮ ವಿರೋಧ ಏಕೆ ಎಂದು ಪ್ರಶ್ನಿಸಿದರು.

ಮೊದಲು ನಾವು ತಂದೇ ಇಲ್ಲ ಎಂದು ಸಮರ್ಥನೆ ಮಾಡಿಕೊಂಡ ಸಿದ್ದರಾಮಯ್ಯ ಸಭಾಧ್ಯಕ್ಷರು ಕಡತದ ಮಾಹಿತಿ ನೀಡುತ್ತಿದ್ದಂತೆ ಜಯಚಂದ್ರ ಅವರು ನನಗೆ ತಪ್ಪು ಮಾಹಿತಿ ನೀಡಿದ್ದರು. ಆದರೆ ಅಂದಿಗೂ ಇಂದಿಗೂ ಭಾರೀ ಬದಲಾವಣೆಯಾಗಿದೆ. ನಾನು ಕರಡು ಮಸೂದೆ ತಂದರೂ ಅದನ್ನು ಸಂಪುಟದ ಒಪ್ಪಿಗೆ ಪಡೆದು, ಕಾನೂನು ತರಲು ಮುಂದಾಗಲಿಲ್ಲ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ನಂತರ ಸಿದ್ದರಾಮಯ್ಯ ಸೇರಿದಂತೆ ಆ ಪಕ್ಷದ ಶಾಸಕರು ಹಾಗೂ ಜೆಡಿಎಸ್‍ನ ಬಂಡೆಪ್ಪ ಕಾಶಂಪೂರ್ ಸೇರಿದಂತೆ ಪಕ್ಷದ ಸದಸ್ಯರು ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ರಾಜ್ಯದಲ್ಲಿ ಹತ್ತು ಹಲವು ಜ್ವಲಂತ ಸಮಸ್ಯೆಗಳು ಇರುವಾಗ ಈ ಕಾನೂನು ತರುವ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿದರು. ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಕಾಯ್ದೆ ತರುವುದು ಎಷ್ಟರ ಮಟ್ಟಿಗೆ ಸರಿ. ಹಿಂದೆ ರಾಜ ಮಹಾರಾಜರು, ಅಂಬೇಡ್ಕರ್ ಸೇರಿದಂತೆ ಮಹಾನ್ ನಾಯಕರು ಮತಾಂತರ ಗೊಂಡಿರುವ ನಿದರ್ಶನಗಳಿವೆ. ಕಾಣದ ಕೈಗಳ ಒತ್ತಡಕ್ಕೆ ಮಣಿದು ಈ ಮಸೂದೆ ತರುವುದಾದರು ಎಷ್ಟು ಸರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯ ಹಾಗೂ ರಾಷ್ಟ್ರದ ಜನಸಂಖ್ಯೆ ಹಾಗೂ ಮತಾಂತರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸದನದ ಮುಂದಿಟ್ಟರು.

ಇದಕ್ಕೂ ಮೊದಲು ಗೃಹ ಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಮಂಡಿಸಲಾದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, ಯಾವುದೇ ಧರ್ಮದ ವಿರುದ್ಧವಲ್ಲ, ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯ ಕಾಪಾಡಿಕೊಳ್ಳಲು ಈ ಕಾಯಿದೆ ಸಹಕಾರಿಯಾ ಗಲಿದೆ ಎಂದು ಸಮರ್ಥಿಸಿಕೊಂಡರು. ಸಮಾಜದಲ್ಲಿ ಪಿಡುಗಾಗಿ ಪರಿಣಮಿಸಿರುವ ಬಲವಂತದ ಹಾಗೂ ಆಮಿಷದ ಮತಾಂತರ ಹಾವಳಿಯನ್ನು ತಡೆಯುವ ಅಗತ್ಯವಿದೆ ಎಂದರು. ಸ್ವಇಚ್ಛೆಯಿಂದ ಯಾರಾದರೂ ಮತಾಂತರವಾದರೆ ಅದಕ್ಕೆ ಯಾರದೂ ಅಸಮ್ಮತಿಯಿಲ್ಲ. ಕಾಯ್ದೆ ಕುರಿತು, ಯಾರೂ ಭಯ ಪಡಬೇಕಾಗಿಲ್ಲ. ಪ್ರತಿಯೊಂದು ಧರ್ಮದವರ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಾಯಿದೆಯನ್ನು ತಂದಿದ್ದೇವೆ.

ಈ ಕಾಯಿದೆ, ವಾಸ್ತವವಾಗಿ ಹಿಂದಿನ ಕಾಂಗ್ರೆಸ್ ಸರಕಾರದ ಕೂಸು. ಅದನ್ನೇ ಇನ್ನಷ್ಟು ಬಲಗೊಳಿಸಿದ್ದೇವೆ. ಇದಕ್ಕೆ ಸದನದ ಸದಸ್ಯರು ಒಪ್ಪಿಗೆ ನೀಡಬೇಕು ಎಂದು ಸಚಿವರು ಮನವಿ ಮಾಡಿದರು. ಇಂಥಹ ಮಸೂದೆಗಳು, ರಾಷ್ಟ್ರದ ಇತರ ಎಂಟು ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿದೆ ಎಂದೂ ಸಚಿವರು ತಿಳಿಸಿದರು. ನಂತರ ಕಾನೂನು ಸಚಿವ ಮಾಧುಸ್ವಾಮಿ ಅವರು ನಿಮ್ಮ ಕೂಸಿಗೆ ಸ್ವಲ್ಪ ತಿದ್ದುಪಡಿ ಮಾಡಿ ಮಂಡನೆ ಮಾಡಿದ್ದೇವೆ. ಇದಕ್ಕೆ ಅನುಮತಿ ನೀಡಿ. ಸಮಾಜದ ಒಳಿತಿಗಾಗಿ ಇದರ ಅವಶ್ಯವಿದೆ. ಸಂವಿಧಾನದ ಪರಿಚ್ಛೇದಗಳನ್ನು ಅಳವಡಿಸಿಕೊಂಡೇ ಕಾನೂನು ಜಾರಿಗೊಳ್ಳುತ್ತಿದೆ. ಅಂದು ಕಾನೂನು ಮಾಡಿ, ಇಂದು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೀರಿ. ಇದು ಜನತೆಗೆ ಅಥರ್Àವಾಗುವುದಿಲ್ಲವೇ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸದಸ್ಯರನ್ನು ಚುಚ್ಚಿದರು. ಇದಕ್ಕೂ ಮೊದಲು ಬಲವಂತವಾಗಿ ಮತಾಂತರ ಮಾಡಿಸಿದಂತಹವರಿಗೆ 3 ರಿಂದ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.

Translate »