ನಾವು ರೂಪಿಸಿದ್ದ ಕಾಯ್ದೆಗೂ, ಈಗಿನ ಕಾಯ್ದೆಗೂ ಅಜಗಜಾಂತರ ವ್ಯತ್ಯಾಸ
News

ನಾವು ರೂಪಿಸಿದ್ದ ಕಾಯ್ದೆಗೂ, ಈಗಿನ ಕಾಯ್ದೆಗೂ ಅಜಗಜಾಂತರ ವ್ಯತ್ಯಾಸ

December 24, 2021

ಬೆಂಗಳೂರು, ಡಿ.23(ಕೆಎಂಶಿ)- ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೂಪಿ ಸಲಾಗಿದ್ದ ಮತಾಂತರ ನಿಷೇಧ ಕಾಯ್ದೆಯ ಕರಡನ್ನು ಸಚಿವ ಸಂಪುಟದ ಮುಂದೆ ತರುವಂತೆ ನಾನು ಸಹಿ ಹಾಕಿದ್ದೆ. ಆದರೆ ಬಿಜೆಪಿ ಸರ್ಕಾರದ ಕಾಯ್ದೆಗೂ, ನಾವಿದ್ದಾಗ ರೂಪಿ ಸಿದ್ದ ಕಾಯ್ದೆಗೂ ಅಜಗಜಾಂತರ ವ್ಯತ್ಯಾಸಗಳಿವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಸ್ಪಷ್ಟನೆ ನೀಡಿದರು.

ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ವಿರೋಧಿಸಿ ಮಾತನಾಡಿದ ಅವರು, ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎಂದರೆ ಸಮಾನರಲ್ಲಿ ಮೊದಲಿಗ ಎಂಬ ವ್ಯಾಖ್ಯಾನವಿದೆ. ಮುಖ್ಯಮಂತ್ರಿಯಾಗಿ ನಾನೊ ಬ್ಬನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಬರಲ್ಲ, ಕರಡು ಸಂಪುಟ ಸಭೆಯಲ್ಲಿ ಚರ್ಚೆ ಯಾಗಲಿ ಎಂಬ ಕಾರಣಕ್ಕೆ ಸಹಿ ಮಾಡಿದ್ದೆ. ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ.

ಮತ್ತೊಂದು ಪ್ರಮುಖ ಅಂಶವೆಂದರೆ ನಮ್ಮ ಸರ್ಕಾರದ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆಯ ಕರಡು ಸಂಪುಟದಲ್ಲಿ ಚರ್ಚೆಯೂ ಆಗಿಲ್ಲ, ಅನುಮೋದನೆಯೂ ಆಗಿಲ್ಲ. ಕೇವಲ ಸಂಪುಟದ ಚರ್ಚೆಗೆ ತನ್ನಿ ಎಂದು ಸಹಿ ಹಾಕಿದ ಕಡತಗಳೆಲ್ಲವೂ ಸರ್ಕಾರದ ನಿಲುವು ಹೇಗಾಗುತ್ತದೆ?
ನಾನು ಮತಾಂತರ ನಿಷೇಧ ಕಾಯಿದೆಯ ಕಡತವನ್ನು ಸಂಪುಟದ ಮುಂದೆ ತರುವಂತೆ ಸಹಿ ಹಾಕಿದ್ದು 2015ರ ನವೆಂಬರ್ ತಿಂಗಳಿನಲ್ಲಿ. ಇದಾಗಿ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದನ್ನು ಸಂಪುಟದ ಮುಂದೆ ತರಲು ನಾವು ಪ್ರಯತ್ನ ಮಾಡಲಿಲ್ಲ. ಕಾರಣ ನಮ್ಮ ಸರ್ಕಾರಕ್ಕೆ ಇಂಥಾ ಮಸೂದೆಯ ಬಗ್ಗೆ ಆಸಕ್ತಿ ಇರಲಿಲ್ಲ. ಮತಾಂತರ ನಿಷೇಧ ಕುರಿತ ಈ ಹಿಂದಿನ ಕರಡುಪ್ರತಿಗೂ, ಈಗಿನ ಮಸೂದೆಗೂ ಇರುವ ಪ್ರಮುಖ ವ್ಯತ್ಯಾಸಗಳೆಂದರೆ;

(i) ಹಿಂದಿನ ಕರಡು ಪ್ರತಿಯ ನಿಯಮ 3ರಲ್ಲಿ ವಿವಾಹ ಎಂಬ ಪದ ಬಳಕೆ ಇರಲಿಲ್ಲ. ಬಿಜೆಪಿಯವರು ತಮ್ಮ ಕಾಯ್ದೆಯಲ್ಲಿ ವಿವಾಹ ವನ್ನು ಹೊಸದಾಗಿ ಸೇರಿಸಿದ್ದಾರೆ. (ii)ಭಾರತೀಯ ದಂಡ ಸಂಹಿತೆಯ ಪ್ರಕಾರ ಸಾಕ್ಷ್ಯಾಧಾರಗಳ ಕೊರತೆ ಕಂಡುಬಂದರೆ ಆರೋಪಿ ಯನ್ನು ತಪ್ಪಿತಸ್ಥ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಈ ಹೊಸ ಕಾಯ್ದೆಯ ನಿಯಮ 12 ರ ಪ್ರಕಾರ ಸಾಕ್ಷ್ಯಾಧಾರ ಕೊರತೆ ಇದ್ದರೂ ಅದು ದೂರುದಾರನಿಗೆ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಕಾಯ್ದೆಯು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ. ಸಂವಿಧಾನದ 21 ಮತ್ತು 25ನೇ ವಿಧಿಯನ್ವಯ ಒಬ್ಬ ವ್ಯಕ್ತಿ ತನಗಿಷ್ಟವಾದ (ಯಾವುದೇ ಧರ್ಮಕ್ಕೆ ಸೇರಿದವರಾದರೂ ಸರಿ) ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಲು ಸಂಪೂರ್ಣ ಸ್ವಾತಂತ್ರ್ಯ ನೀಡಿರುವಾಗ, ಅದನ್ನು ಬೇಡ ಎನ್ನಲು ಸರ್ಕಾರಕ್ಕೇನು ಹಕ್ಕಿದೆ? ಇದೇ ಕಾರಣಕ್ಕೆ ಗುಜರಾತ್ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಮತಾಂತರ ನಿಷೇಧ ಕಾಯ್ದೆಗೆ ತಡೆಯಾಜ್ಞೆ ನೀಡಿರುವ ಅಲ್ಲಿನ ಹೈಕೋರ್ಟ್, ಸರ್ಕಾರಕ್ಕೆ ಛೀಮಾರಿ ಹಾಕಿದೆ. ಗುಜರಾತ್, ಉತ್ತರಪ್ರದೇಶ ಸರ್ಕಾರಗಳ ಮತಾಂತರ ನಿಷೇಧ ಕಾಯ್ದೆಯಲ್ಲಿ ಬಳಕೆ ಮಾಡಿರುವ ಪದಗಳು, ವಾಕ್ಯಗಳೇ ಇಲ್ಲಿಯೂ ಯಥಾವತ್ತಾಗಿವೆ. ಈ ಎಲ್ಲಾ ಸರ್ಕಾರಗಳ ಕರಡು ತಯಾರಿಕೆಯ ಹಿಂದೆ ಯಾವುದೋ ಒಂದು ಕಾಣದ ಕೈ ಇದೆ ಎಂಬ ಅನುಮಾನ ನನಗಿದೆ. ಅದು ಯಾವುದು ಎಂದು ಸರ್ಕಾರವೇ ಬಹಿರಂಗಪಡಿಸಬೇಕು.

ಬಲವಂತವಾಗಿ, ಆಸೆ ಆಮಿಷ ಒಡ್ಡಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ನಮ್ಮ ಸಂವಿಧಾನದಲ್ಲೇ ಸ್ಪಷ್ಟವಾಗಿ ಇರುವುದರಿಂದ ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯ ಅಗತ್ಯವೇನಿದೆ? ಇದೇ ಕಾರಣಕ್ಕೆ ನಾವು ವಿರೋಧ ಮಾಡುತ್ತಿದ್ದೇವೆ. ದೇಶದಲ್ಲಿ ಶತಮಾನಗಳ ಹಿಂದಿನಿಂದಲೂ ಮತಾಂತರ ನಡೆದುಕೊಂಡು ಬಂದಿದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಪಂಪ, ರನ್ನರು ಜೈನ ಧರ್ಮಕ್ಕೆ ಮತಾಂತರ ಗೊಂಡರು. ಸಾಮ್ರಾಟ್ ಅಶೋಕ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಹೋಗಿಲ್ಲವೇ? ಇದಕ್ಕೆ ಕಾರಣವೇನು ಎಂಬುದು ಯಾರಿಗೂ ತಿಳಿಯದ ವಿಷಯವಲ್ಲ.

ಕಾಯಕಯೋಗಿ ಬಸವೇಶ್ವರರು ಬ್ರಾಹ್ಮಣರಾಗಿ ಹುಟ್ಟಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲವೇ? ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಲಕ್ಷಾಂತರ ಜನರ ಜೊತೆಗೆ ಬೌದ್ಧ ಧರ್ಮಕ್ಕೆ ಮತಾಂತರ ಆಗಿಲ್ಲವೇ? ಇವರ್ಯಾರೂ ಅಧಿಕಾರವೋ ಅಥವಾ ಇನ್ಯಾವುದೋ ಕಾರಣಕ್ಕೆ ಮತಾಂತರಗೊಂಡವರಲ್ಲ.

ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಕ್ರಿಶ್ಚಿಯನ್ ಮತ್ತು ಮುಸ್ಲಿಮರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. 2001 ಮತ್ತು 2011 ರ ಜನಗಣತಿಯನ್ನು ನೋಡಿದರೆ ಸತ್ಯ ಏನೆಂದು ಅರಿವಾಗುತ್ತದೆ. 2001ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ 83.86% ಹಿಂದೂಗಳ ಪ್ರಮಾಣ 2011ಕ್ಕೆ ಶೇ.84ಕ್ಕೆ ಏರಿಕೆಯಾಗಿದೆ. ಮುಸ್ಲಿಮರ ಪ್ರಮಾಣ 12.23% ರಿಂದ 12.92 ಆಗಿದೆ. ಕ್ರೈಸ್ತರ ಪ್ರಮಾಣ 1.91% ಯಿಂದ 1.87%ಕ್ಕೆ ಇಳಿಕೆಯಾಗಿದೆ. ಇದು ನಮ್ಮ ರಾಜ್ಯದ ವಾಸ್ತವ ಸ್ಥಿತಿ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಸಂವಿಧಾನದ ಮೂಲ ನಿಯಮ. ಆದರೆ ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯಲ್ಲಿ ಮಹಿಳೆಯರು, ಅಪ್ರಾಪ್ತರು, ಬುದ್ಧಿಭ್ರಮಣೆಯಾದವರು, ಪರಿಶಿಷ್ಟ ಜಾತಿ ಮತ್ತು ವರ್ಗದವರನ್ನು ಕಾನೂನುಬಾಹಿರವಾಗಿ ಮತಾಂತರ ಮಾಡಿದರೆ ಮಾತ್ರ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಈ ಅಸಮಾನತೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದರು.

Translate »