ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ಮಾ.22ರಂದು ವಿಧಾನಸೌಧ ಚಲೋ ಚಳವಳಿ
ಮೈಸೂರು

ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ಮಾ.22ರಂದು ವಿಧಾನಸೌಧ ಚಲೋ ಚಳವಳಿ

February 24, 2021

ಮೈಸೂರು,ಫೆ.23(ಪಿಎಂ)- ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಕೃಷಿ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ಮಾ.22ರಂದು ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ, ಮೆಣಸು, ತಂಬಾಕು, ರೇಷ್ಮೆ ಮತ್ತು ಎಣ್ಣೆಕಾಳು ಸೇರಿದಂತೆ ಇನ್ನಿತರ ಉತ್ಪನ್ನಗಳಿಗೂ ಬೆಂಬಲ ಬೆಲೆ ವಿಸ್ತರಿಸುವಂತೆ ಹಾಗೂ ರಾಜ್ಯಕ್ಕೆ ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಹೋರಾಟಕ್ಕೆ ಪೂರಕವಾಗಿ ರಾಜ್ಯದ 150 ತಾಲೂಕುಗಳಲ್ಲಿ ಸಮಾವೇಶ ನಡೆಸಲಾಗುವುದು. ಈ ಕಾರ್ಯಕ್ರಮಗಳಿಗೆ ಸಂಯುಕ್ತ ಕಿಶಾನ್ ಮೋರ್ಚಾದ ನಾಯಕರನ್ನು ಆಹ್ವಾನಿಸಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೆ ಎಂಎಸ್‍ಪಿ (ಕನಿಷ್ಠ ಬೆಂಬಲ ಬೆಲೆ) ದರದಲ್ಲಿ 23 ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಲೆಗಿಂತಲೂ ಕಡಿಮೆ ದರಕ್ಕೆ ರಾಜ್ಯ ದಲ್ಲಿ ಮುಸುಕಿನಜೋಳ, ಕಡಲೆಕಾಯಿ, ತೊಗರಿ ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ `ಎಂಎಸ್‍ಪಿ ಎಲ್ಲಿದೆ ತೋರಿಸಿ’ ಶೀರ್ಷಿಕೆಯಡಿ ಇಡೀ ದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕೆ ರಾಜ್ಯದಿಂದ ಚಾಲನೆ ದೊರೆಯಲಿದೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಈ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ದಿನಾಂಕ ಮತ್ತು ಸ್ಥಳದ ಬಗ್ಗೆ ಮುಂಬರುವ ದಿನಗಳಲ್ಲಿ ಮಾಹಿತಿ ನೀಡಲಾಗುವುದು. ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರ ಮಟ್ಟದ ನಾಯಕ ಪ್ರೊ. ಯೋಗೇಂದ್ರ ಯಾದವ್ ಆಗಮಿಸಲಿದ್ದಾರೆ ಎಂದು ವಿವರಿಸಿದರು.

ಆಲಿಕಲ್ಲು ಮಳೆಯಿಂದ ನಷ್ಟವಾಗಿರುವ ತೋಟಗಾರಿಕೆ ಬೆಳೆ ಗಳ ಸಮೀಕ್ಷೆ ನಡೆಸಿ, ಪರಿಹಾರ ನೀಡಬೇಕು. ಕೊಡಗು ಸೇರಿ ದಂತೆ ಜಿಲ್ಲೆಯ ಹೆಚ್‍ಡಿ ಕೋಟೆ, ನಂಜನಗೂಡು, ಗುಂಡ್ಲುಪೇಟೆ ಹಾಗೂ ಮತ್ತಿತರ ಕಡೆ ಹುಲಿ ದಾಳಿ ಹೆಚ್ಚಾಗುತ್ತಿದೆ. ದಾಳಿ ನಡೆ ಸುವ ಹುಲಿಗಳನ್ನು ಸೆರೆ ಹಿಡಿಯಬೇಕು. ಕಾಡುಪ್ರಾಣಿಗಳಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ನಂಜನಗೂಡು ತಾಲೂಕು ಹಿಮ್ಮಾವು ಬಳಿ ಏಷ್ಯನ್ ಪೇಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದ ರೈತರ ಕುಟುಂಬ ದವರಿಗೆ ಉದ್ಯೋಗ ನೀಡುವ ಸಂಬಂಧ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ನಾಳೆ ಕಾರ್ಖಾನೆ ಎದುರು ಸಭೆ ನಡೆಸಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು. ಸಂಘದ ಮುಖಂಡರಾದ ಶೆಟ್ಟಹಳ್ಳಿ ಚಂದ್ರೇಗೌಡ, ಪಿ.ಮರಂ ಕಯ್ಯ, ನೇತ್ರಾವತಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

 

Translate »