ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐತಿಹಾಸಿಕ ಕಾರ್ಯಕ್ರಮಗಳನ್ನು ಕೊಡಲು ಕಾರಣವೇ ಕಾಂಗ್ರೆಸ್ ಆರ್.ಧ್ರುವನಾರಾಯಣ್ ಅಭಿಮತ
ಮೈಸೂರು

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐತಿಹಾಸಿಕ ಕಾರ್ಯಕ್ರಮಗಳನ್ನು ಕೊಡಲು ಕಾರಣವೇ ಕಾಂಗ್ರೆಸ್ ಆರ್.ಧ್ರುವನಾರಾಯಣ್ ಅಭಿಮತ

February 24, 2021

ಮೈಸೂರು: ಪ್ರತ್ಯೇಕ ಅಹಿಂದ ಸಂಘಟನೆ ಬೇಕಾಗಿಲ್ಲ. ಆ ರೀತಿಯ ಸಂಘಟನೆಯ ಅವಶ್ಯಕತೆಯೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿರುಗೇಟು ನೀಡಿದ್ದಾರೆ.

ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೇ ನಮ್ಮ ಪರ ಇರುವಾಗ, ಅಹಿಂದ ಸಂಘಟನೆ ಏಕೆ? ಕಾಂಗ್ರೆಸ್ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಕೊಟ್ಟಿದೆ. ಕಟ್ಟ ಕಡೆಯ ವ್ಯಕ್ತಿಗಳಿಗೂ ರಾಜಕೀಯ ಸ್ಥಾನಮಾನ ಕೊಟ್ಟಿದೆ ಎಂದರು.

ಸಣ್ಣ ಸಮುದಾಯದ ವೀರಪ್ಪಮೊಯ್ಲಿ, ಬಂಗಾರಪ್ಪರನ್ನು ಪಕ್ಷ ಸಿಎಂ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದಲೇ ಸಿದ್ದರಾಮಯ್ಯ ಸಿಎಂ ಆಗಿದ್ದರು. ಇತಿಹಾಸದ ಪುಟದಲ್ಲಿ ಬರೆದಿಡುವಂತೆ ಸಿದ್ದರಾಮಯ್ಯ ಕಾರ್ಯಕ್ರಮಗಳನ್ನು ಕೊಟ್ಟಿದ್ದರು, ಅದಕ್ಕೆ ಕಾಂಗ್ರೆಸ್ ಕಾರಣ ಎಂದು ತಿಳಿಸಿದರು. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರೂ ಕೂಡಾ ಈಗಲೇ ಇಂತಹ ಹೇಳಿಕೆ ಕೊಡಬಾರದು. ಈ ರೀತಿಯ ಹೇಳಿಕೆಗಳಿಂದ ಪಕ್ಷ ಸಂಘಟನೆಗೆ ಧಕ್ಕೆಯಾಗುತ್ತದೆ. ಸಿಎಂ ಆಯ್ಕೆ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ. ಹಿಂದಿನಿಂದಲೂ ಶಾಸಕರ ಅಭಿಪ್ರಾಯ ಪಡೆದು ಸಿಎಂ ಆಯ್ಕೆ ಮಾಡುವ ಸಂಪ್ರದಾಯ ಇದೆ ಎಂದರು. 2013ರಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಬಲವಾಗಿ ಕೇಳಿ ಬಂದರೂ ಸಿದ್ದರಾಮಯ್ಯರನ್ನ ಆಯ್ಕೆ ಮಾಡಲಾಗಿತ್ತು. ಚುನಾವಣೆಗೆ ಇನ್ನೂ ಸಾಕಷ್ಟು ಕಾಲವಿದೆ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ತಿಳಿಸಿದರು.

 

 

Translate »