`ಸಿದ್ದರಾಮಯ್ಯರ ಜನಮುಖಿ ಆಡಳಿತ- ಒಂದು ಚಿಂತನೆ’ಗೆ ಚಾಲನೆ ನೀಡಿ ಸಾಹಿತಿ ಬಂಜಗೆರೆ ಜಯಪ್ರಕಾಶ್
ಮೈಸೂರು

`ಸಿದ್ದರಾಮಯ್ಯರ ಜನಮುಖಿ ಆಡಳಿತ- ಒಂದು ಚಿಂತನೆ’ಗೆ ಚಾಲನೆ ನೀಡಿ ಸಾಹಿತಿ ಬಂಜಗೆರೆ ಜಯಪ್ರಕಾಶ್

December 21, 2020

ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ 69ನೇ ಹುಟ್ಟುಹಬ್ಬದ ಅಂಗವಾಗಿ ಅಭಿನಂದನಾ ಸಭೆದಿಕ್ಕೆಟ್ಟವರಿಗೆ ದಿಕ್ಕು ತೋರಿಸುವ ನಿಜವಾದ ನಾಯಕ ಸಿದ್ದರಾಮಯ್ಯ
ಮೈಸೂರು, ಡಿ.20(ಆರ್‍ಕೆಬಿ)- ಕಳೆದ 25 ದಿನ ಗಳಿಂದ ರೈತರು ದೆಹಲಿನಲ್ಲಿ ಚಳುವಳಿ ಮಾಡುತ್ತಿ ದ್ದಾರೆ. ಪ್ರಧಾನಮಂತ್ರಿಯಾದವರು ಸಂಧಾನಕ್ಕೆ ಕಾಳಜಿ ವ್ಯಕ್ತಪಡಿಸದೆ ಇತರೆ ಕಾರ್ಯಕ್ರಮಗಳಲ್ಲಿ ಮಗ್ನರಾಗಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾ ರದ ಮಾಜಿ ಅಧ್ಯಕ್ಷರೂ ಆದ ಸಾಹಿತಿ ಬಂಜಗೆರೆ ಜಯಪ್ರಕಾಶ್ ಇಂದಿಲ್ಲಿ ಆರೋಪಿಸಿದರು.

ಮೈಸೂರಿನ ಮಾನಸಗಂಗೋತ್ರಿ ರಾಣಿಬಹ ದ್ದೂರ್ ಸಭಾಂಗಣದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮರೀಗೌಡರ 69ನೇ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಯೋಜಿಸಿದ್ದ `ಸಿದ್ದರಾಮಯ್ಯ ಅವರ ಜನಮುಖಿ ಆಡಳಿತ- ಒಂದು ಚಿಂತನೆ’ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಭಟನಾನಿರತ ರೈತರು ಮತದಾನ ಮಾಡಿರ ಲಿಲ್ಲವೇ? ಅಲ್ಲಿ ಸೇರಿರುವವರು ಭಾರತೀಯ ಪ್ರಜೆ ಗಳಲ್ಲವೇ? ಎಂದು ಪ್ರಶ್ನಿಸಿದ ಅವರು, ಜೀವನದ ಆತಂಕದಲ್ಲಿರುವವರ ಬಳಿ ಹೋಗಿ ಅಡ್ಡಿ ಆತಂಕ ನಿವಾರಿಸುವುದು ನಾಯಕನಿಗಿರಬೇಕಾದ ಜವಾ ಬ್ದಾರಿ. ಅಂತಹ ಶಕ್ತಿ ಸಿದ್ದರಾಮಯ್ಯನವರಿಗೆ ಮಾತ್ರ ಇದೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶೇ.75 ರಷ್ಟಿರುವ ಅಹಿಂದ ವರ್ಗದ ಮುಖ್ಯಮಂತ್ರಿಯಾಗದೇ ಎಲ್ಲಾ ಜನರ ಅಭಿವೃಧ್ಧಿಗೆ ಬದ್ಧರಾಗಿ ಕೆಲಸ ಮಾಡಿದರು. ಸಿಕ್ಕಿರುವ ಅಧಿಕಾರ ಎಲ್ಲರ ಏಳಿಗೆಗೆ ಬಳಸಿದರೆ ಅದು ನಿಜವಾದ ನಾಯಕತ್ವ. ದಿಕ್ಕೆಟ್ಟವರಿಗೆ ದಿಕ್ಕು ತೋರಿಸುವರೇ ನಿಜವಾದ ನಾಯಕ. ಅದು ಸಿದ್ದರಾಮಯ್ಯ ಮಾತ್ರ ಎಂದು ಅಭಿಪ್ರಾಯಪಟ್ಟರು.

ರಾಜಕಾರಣವನ್ನು ಕೇವಲ ಹಣ ಮಾಡುವ ದಂಧೆಯಾಗಿ ಮಾಡಿಕೊಂಡಿಲ್ಲ ಎಂದು ಹೇಳಬಹು ದಾದ ನಾಯಕ ಎಂದರೆ ಅವರು ಸಿದ್ದರಾಮಯ್ಯ. ಇದು ಉತ್ಪ್ರೇಕ್ಷೆಗಾಗಿ ಹೇಳುತ್ತಿಲ್ಲ. ಅವರಿಗೆ ಸಂಕೋಚ ಇದೆ. ರಾಜಕಾರಣವನ್ನು ದಂಧೆಯಾಗಿ ಬಳಸಲು ಸಾರ್ವಜನಿಕವಾದ ಹಿಂಜರಿಕೆ ಇದೆ. ಆದ್ದರಿಂದ ಅವರು ತಮ್ಮ ಹಿಂಬಾಲಕರು, ಜೊತೆಗಿರುವವರು ಏನಾದರೂ ಆಪಾದನೆ ಹೊತ್ತಾಗ ನಿಷ್ಪಕ್ಷಪಾತವಾಗಿ ಇದ್ದವರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಕುಟುಂಬದವರು ಎಷ್ಟು ಜನ ರಾಜಕಾರಣ ದಲ್ಲಿ ಕೈ ಹಾಕುತ್ತಿದ್ದರು? ವ್ಯವಹಾರಗಳನ್ನು ಮಾಡು ತ್ತಿದ್ದರು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಇಂದು ಅನಿವಾರ್ಯ: ಇಂದು ನಮ್ಮನ್ನು ಆಳುತ್ತಿರುವವರು ರಾಜಕಾರಣದ ಅನೈತಿಕ ಶಿಶುಗಳು. ಅನರ್ಹರನ್ನು, ಜನವಿರೋಧಿಗಳನ್ನು ಕಟ್ಟಿಕೊಂಡು ಆಡಳಿತ ಮಾಡುತ್ತಿದ್ದಾರೆ. ಇದು ನಮ್ಮ ದುರ್ದೈವ ಎಂದು ವಿಚಾರವಾದಿ ಪ್ರೊ.ಬಿ.ಪಿ. ಮಹೇಶ್‍ಚಂದ್ರಗುರು ಅಭಿಪ್ರಾಯಪಟ್ಟರು.

ಇಂದು ಸಮಸ್ತ ಶೋಷಿತ ಜನಾಂಗಗಳಲ್ಲಿ ನಮ್ಮನ್ನು ಕೇಳುವವರಿಲ್ಲ, ನೋಡುವವರಿಲ್ಲ, ಮಾತನಾಡಿಸುವವರಿಲ್ಲ, ಕಣ್ಣೀರು ಒರೆಸಿ, ಉದ್ಧಾರ ಮಾಡುವವರಿಲ್ಲವಲ್ಲ ಎಂಬ ಅನಾಥ ಪ್ರಜ್ಞೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಮಗೆ ಕಾಣಿಸುತ್ತಿರುವ ನಾಯಕನೆಂದರೆ ಸಿದ್ದರಾಮಯ್ಯ. ಅವರು ಜಾತಿ ನಾಯಕರಲ್ಲ. ಇಂದಿನ ಜಾತಿನಾಯಕರ ನಡುವೆ ಸಿದ್ದರಾಮಯ್ಯರಂತರ ಮೌಲ್ಯಾಧಾರಿತ ರಾಜ ಕಾರಣಕ್ಕೆ ಬದ್ಧರಾಗಿರುವಂತಹ ಸಮಸ್ತ ಜನಾಂಗ ಗಳ ನಾಯಕರು ಸಿಗುವುದು ಬಹಳ ಕಷ್ಟ. ಒಬ್ಬ ನಾಯಕನ ಮಹತ್ವ ಗೊತ್ತಾಗುವುದೇ ಅವರು ಅಧಿಕಾರ ಕಳೆದುಕೊಂಡಾಗ ಎಂದರು.

ಸಿದ್ದರಾಮಯ್ಯ ರಾಜಕಾರಣಿ ಅಲ್ಲ. ಅವರು ಚಿಂತಕ, ಹೋರಾಟಗಾರ, ಅನುಭವಿ, ಸಂವಿಧಾನ ನಿಷ್ಠರು. ರಾಜಕಾರಣಿಗಳಿಗೆ ಮುಂದಿನ ಆಡಳಿತ ಮುಖ್ಯ. ಆದರೆ ಮುತ್ಸದ್ದಿಗೆ ಮುಂದಿನ ಜನರ ಏಳಿಗೆ ಮುಖ್ಯ. ಇಡೀ ಬೊಕ್ಕಸವನ್ನು ಅಭಿವೃದ್ಧಿಗಾಗಿ ವಿನಿಯೋಗಿಸಿ, ದೇಶದಲ್ಲಿ ರಾಜ್ಯವನ್ನು 3ನೇ ಸ್ಥಾನಕ್ಕೆ ತಂದವರು. ಆರ್ಥಿಕ ಸಂಪನ್ಮೂಲವನ್ನು ರಾಜ್ಯದ ಅಭಿವೃದ್ಧಿಗೆ ವಿನಿಯೋಗಿಸಿದವರು. ರಾಜ್ಯ ದಲ್ಲಿ ಕೋಮುವಾದಿ ಮತ್ತು ಜಾತೀವಾದಿಗಳು ಕೈಜೋಡಿಸುತ್ತಿರುವ ಹೊತ್ತಿನಲ್ಲಿ ಕೋಮುವಾದಿ, ಜಾತೀವಾದಿಗಳನ್ನು ಕೆಳಗಿಳಿಸುವ ಕಾಯಕದಲ್ಲಿ ನಾಯಕತ್ವ ವಹಿಸಲು ಸಿದ್ದರಾಮಯ್ಯನವರೇ ಸೂಕ್ತ. ಹೀಗಾಗಿ ಇಂದು ಸಿದ್ದರಾಮಯ್ಯ ಅನಿವಾರ್ಯ ವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿವಿ ಡಾ.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್ ಮಾತನಾಡಿ, ಇಂದು ರಾಜ ಕೀಯ ಸಂಸ್ಕøತಿ ಮಲಿನವಾಗಿದೆ. ನಮ್ಮ ಸದನ ಗಳು, ಚರ್ಚೆಗಳು, ಪ್ರಚಾರಗಳು ಹೇಗೆ ನಡೆಯು ತ್ತಿವೆ ಎಂಬುದನ್ನೆಲ್ಲಾ ನೋಡಿದರೆ ಸಂವೇದನಾ ಶೀಲತೆಯುಳ್ಳ ರಾಜಕಾರಣಿಗಳ ಅಗತ್ಯತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಸಮಾಜದ ಎಲ್ಲಾ ವರ್ಗದ ಕಟ್ಟಕಡೆಯ ಬಡವರು, ಶೋಷಿತ ವರ್ಗದ ಜನರಿಗೆ ಕಾರ್ಯಕ್ರಮಗಳನ್ನು ಕೊಟ್ಟ ಸಿದ್ದರಾಮಯ್ಯ ನವರು ಹಸಿವು ಮುಕ್ತ ರಾಜ್ಯಕ್ಕಾಗಿ ಅನ್ನಭಾಗ್ಯ, ಬಡವರು, ಹಿಂದುಳಿದವರು, ಕಾರ್ಮಿಕರಿಗಾಗಿ ಇಂದಿರಾ ಕ್ಯಾಂಟೀನ್ ಮೂಲಕ 10 ರೂ.ಗೆ ಊಟ ಇತರೆ ನೀಡುವ ಮೂಲಕ ತಾವಿರುವುದು ಬಡ ವರ್ಗದ ಜನರಿಗಾಗಿ ಎಂಬುದನ್ನು ಸಾಬೀತು ಮಾಡಿದವರು. ಚುನಾವಣೆಯಲ್ಲಿ ಕೊಟ್ಟ ಪ್ರಣಾ ಳಿಕೆಗಳೆಲ್ಲವನ್ನೂ ಐದು ವರ್ಷದಲ್ಲಿ ಈಡೇರಿಸಿ ದವರು ಎಂದು ಹೇಳಿದರು.

ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾ ಲಯದ ನಿರ್ದೇಶಕ ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ದಲಿತ ಸಾಹಿತ್ಯ ಅಕಾಡೆ ಮಿಯ ರಾಜ್ಯಾಧ್ಯಕ್ಷ ಡಾ.ಸಿ.ವೆಂಕಟೇಶ್, ಶರಣ ಮಂಡಲಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಮಾಜಿ ಮೇಯರ್ ಚಿಕ್ಕಣ್ಣ, ಮುಖಂಡರಾದ ಎಂ. ನವೀನ್‍ಕುಮಾರ್, ಮಡ್ಡೀಕೆರೆ ಗೋಪಾಲ್, ಹಿಕನಲ್ ಪ್ರಕಾಶ್, ಎಸ್.ಆರ್.ರವಿ ಇನ್ನಿತರರು ಇದ್ದರು.

Translate »