ಸಿದ್ಧಾರ್ಥನಗರ, ಕೆಸಿ ನಗರ, ಜೆಸಿ ನಗರ ‘ಬಿ ಖರಾಬು’ ಮುಕ್ತ
ಮೈಸೂರು

ಸಿದ್ಧಾರ್ಥನಗರ, ಕೆಸಿ ನಗರ, ಜೆಸಿ ನಗರ ‘ಬಿ ಖರಾಬು’ ಮುಕ್ತ

July 16, 2020

ಮೈಸೂರು, ಜು. 15- ಕಳೆದ ಐದೂ ವರೆ ವರ್ಷಗಳಿಂದ ವನವಾಸ ಅನುಭವಿಸು ತ್ತಿದ್ದ ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂ. 4 ಮತ್ತು ಆಲನಹಳ್ಳಿ ಸರ್ವೆ ನಂ. 41ರಲ್ಲಿ ಸಿಐಟಿಬಿ ಮತ್ತು ಮುಡಾದಿಂದ ನಿರ್ಮಾಣ ಗೊಂಡ ಸಿದ್ಧಾರ್ಥನಗರ, ಕೆಸಿ, ಜೆಸಿ ಬಡಾ ವಣೆಗಳನ್ನು ‘ಬಿ ಖರಾಬು’ ಮುಕ್ತಗೊಳಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿ ಸಿದೆ. ಇದರಿಂದ ಈ ಬಡಾವಣೆಗಳ ಸುಮಾರು 25 ಸಾವಿರಕ್ಕೂ ಅಧಿಕ ನಿವಾಸಿ ಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬುಧವಾರ ಮೈಸೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್, ಮೇಲಿನ ಬಡಾ ವಣೆಗಳ ಭೂಮಿಯನ್ನು ‘ಬಿ’ ಖರಾಬಿ ನಿಂದ ಕೈಬಿಟ್ಟಿದ್ದು ಮಾತ್ರವಲ್ಲದೇ ಇದನ್ನು ಕಂದಾಯ ಇಲಾಖೆಯಿಂದ ನಗರಾಭಿ ವೃದ್ಧಿ ಇಲಾಖೆಗೆ ವರ್ಗಾಯಿಸಿ ಸರ್ಕಾರ ಮಂಗಳವಾರ ಹೊರಡಿಸಿದ್ದ ಆದೇಶ ಪ್ರತಿಯನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಹಸ್ತಾಂತರಿಸಿದರು.

ಸರ್ಕಾರದ ಆದೇಶದಂತೆ ಕುರುಬಾರ ಹಳ್ಳಿ ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ.41ರಲ್ಲಿ ಬರುವ ಸಿದ್ಧಾರ್ಥನಗರ ಬಡಾ ವಣೆಯ 205.9ಳಿ ಎಕರೆ, ಕೆಸಿ ಬಡಾವಣೆಯ 105 ಎಕರೆ, ಜೆಸಿ ಬಡಾವಣೆಯ 44.20 ಎಕರೆ ಸೇರಿದಂತೆ ಒಟ್ಟು 354.29ಳಿ ಎಕರೆ ಭೂಮಿಯನ್ನು ‘ಬಿ’ ಖರಾಬಿನಿಂದ ಕೈಬಿಟ್ಟು, ಕಂದಾಯ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ.

ನಗರಾಭಿವೃದ್ಧಿ ಇಲಾಖೆ, ಈ ಭೂಮಿ ಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರಕ್ಕೆ (ಮುಡಾ) ಹಸ್ತಾಂತರಿಸಲಿದ್ದು, ಹಲವು ವರ್ಷಗಳ ಹಿಂದೆ ತಾನೇ ಅಭಿವೃದ್ಧಿ ಪಡಿಸಿ, ಮಾರಾಟ ಮಾಡಿದ್ದ ಸಿದ್ಧಾರ್ಥ ನಗರ, ಕೆಸಿನಗರ, ಜೆಸಿ ನಗರ ಬಡಾವಣೆ ನಿವಾಸಿಗಳಿಗೆ ಮುಡಾ ಟೈಟಲ್ ಡೀಡ್ ಸೇರಿ ದಂತೆ ತಡೆಹಿಡಿದ ಅಗತ್ಯ ಎಲ್ಲಾ ದಾಖಲೆ ಗಳನ್ನು ನೀಡಬೇಕಾಗಿದೆ.
ಅಲ್ಲದೇ, ಈ ಬಡಾವಣೆಗಳ ನಿವೇಶನಗಳಿಗೆ ಖಾತೆ ಮಾಡಲು, ಕಂದಾಯ ನಿಗದಿಪಡಿಸಲು, ಕಟ್ಟಿರುವ ಮನೆಗಳಿಗೆ ಸಿಆರ್ ನೀಡಲು, ಹೊಸದಾಗಿ ನಿರ್ಮಾಣಕ್ಕೆ ನಕ್ಷೆ ಅನುಮೋದನೆ ಹೀಗೆ ಹಿಂದಿನ ಜಿಲ್ಲಾಧಿಕಾರಿಗಳು ವಿಧಿಸಿದ್ದ ನಿರ್ಬಂಧವನ್ನು ಹಾಲಿ ಜಿಲ್ಲಾಧಿಕಾರಿಗಳು ತೆರವುಗೊಳಿಸಿ, ಆದೇಶ ಹೊರಡಿಸಬೇಕಾಗಿದೆ.

ಆದೇಶದಲ್ಲಿ ಏನಿದೆ?: ಮೈಸೂರು ಜಿಲ್ಲೆ, ಮೈಸೂರು ತಾಲೂಕು, ಕುರುಬಾರಹಳ್ಳಿ ಸರ್ವೆ ನಂ.4ರಲ್ಲಿ ಮತ್ತು ಆಲನಹಳ್ಳಿ ಸರ್ವೆ ನಂ.41ರಲ್ಲಿ ನಿರ್ಮಾಣವಾಗಿರುವ ಸಿದ್ಧಾರ್ಥ ನಗರ, ಕೆಸಿ ಮತ್ತು ಜೆಸಿ ಬಡಾವಣೆಗಾಗಿ ಬಳಕೆಯಾಗಿರುವ ಒಟ್ಟು 354.29ಳಿ ಎಕರೆ ಜಮೀನನ್ನು ‘ಬಿ’ ಖರಾಬಿನಿಂದ ಹೊರತುಪಡಿಸಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಇಲಾಖೆಯು ಕಂದಾಯ ಇಲಾಖೆಯನ್ನು ಕೋರಿರುವ ಪ್ರಸ್ತಾವನೆಯನ್ನು 2018ರ ಮಾರ್ಚ್ 3ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ. ಮೇಲ್ಕಂಡ ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 68ರ ಅನ್ವಯ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಉಚಿತವಾಗಿ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ.

ಈ ತೀರ್ಮಾನದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಆದೇಶ ಹೊರಡಿಸುವ ಮುನ್ನ ಹೈಕೋರ್ಟ್‍ನಲ್ಲಿ ಈ ಜಮೀನುಗಳ ಕುರಿತು ಬಾಕಿ ಇರುವ ರಿಟ್ ಅರ್ಜಿ ಸಂಖ್ಯೆ 26717/2015 ಮತ್ತು ತತ್ಸಂಬಂಧಿತ ರಿಟ್ ಅರ್ಜಿಗಳಲ್ಲಿ ಪ್ರಸ್ತಾಪಿಸಿರುವಂತೆ ತೆಗೆದುಕೊಳ್ಳಲಾಗಿರುವ ತೀರ್ಮಾನವನ್ನು ಹೈಕೋರ್ಟ್ ಗಮನಕ್ಕೆ ತರುವುದು ಎಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಚಿವ ಸಂಪುಟ ಸಭೆಯ ಈ ನಿರ್ಣಯವನ್ನು ಹೈಕೋರ್ಟ್ ಗಮನಕ್ಕೆ ತಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲು ಅನುಮತಿ ಪಡೆಯಲು ನಿರೀಕ್ಷಿಸಲಾಗುತ್ತಿತ್ತು. ಆದರೆ, ಹೈಕೋರ್ಟ್ 2020ರ ಜೂನ್ 6ರ ಆದೇಶದಲ್ಲಿ ಕುರುಬಾರಹಳ್ಳಿ ಸರ್ವೆ ನಂ. 4 ಮತ್ತು ಆಲನಹಳ್ಳಿ ಸರ್ವೆ ನಂ. 41ರಲ್ಲಿನ ಜಮೀನನ್ನು ‘ಬಿ’ ಖರಾಬು ಎಂದು ಆದೇಶಿಸಿದ್ದ ಅಂದಿನ ಜಿಲ್ಲಾಧಿಕಾರಿಗಳ ಆದೇಶವನ್ನು ವಜಾಗೊಳಿಸಿದೆ. ಅಲ್ಲದೆ ಪ್ರಸ್ತಾಪಿತ ಜಮೀನುಗಳ ದಾಖಲೆಗಳಲ್ಲಿ ಎಲ್ಲೆಲ್ಲಿ ‘ಬಿ’ ಖರಾಬು ಎಂದಿದೆಯೋ ಅಲ್ಲೆಲ್ಲಾ ‘ಬಿ’ ಖರಾಬು ಎಂಬುದನ್ನು ತೆಗೆದು ಹಾಕುವಂತೆ ಹಾಗೂ ನಿಯಮಾನುಸಾರ ಅರ್ಜಿದಾರರ ಹೆಸರುಗಳಿಗೆ ಮ್ಯುಟೇಷನ್ ಮಾಡುವಂತೆ ಆದೇಶಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯು ಕೋರಿರುವಂತೆ ಮೇಲಿನ 354.29ಳಿ ಎಕರೆ ಜಮೀನು ‘ಬಿ’ ಖರಾಬು ಅಧಿಸೂಚನೆಗೆ ಒಳಪಡುವುದಿಲ್ಲ. ಮುಂದಿನ ಕ್ರಮಕ್ಕಾಗಿ ಈ ಜಮೀನನ್ನು ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಕಂದಾಯ ಇಲಾಖೆ (ಭೂ ಮಂಜೂರಾತಿ-1) ಅಧೀನ ಕಾರ್ಯದರ್ಶಿ ಸಿ. ಬಲರಾಂ ಆದೇಶ ಹೊರಡಿಸಿದ್ದಾರೆ.

ಹಿಂದಿನ ಮೈಸೂರು ಜಿಲ್ಲಾಧಿಕಾರಿಗಳು ಚಾಮುಂಡಿಬೆಟ್ಟದ ತಪ್ಪಲಿನ ಭೂಮಿ ‘ಬಿ ಖರಾಬು’ ಎಂದು ಘೋಷಿಸಿದ ನಂತರ ಹಿಂದಿನ ಸಿಐಟಿಬಿ ಮತ್ತು ನಂತರ ಮುಡಾ ಅಭಿವೃದ್ಧಿಪಡಿಸಿದ ಸಿದ್ಧಾರ್ಥನಗರ, ಕೆಸಿ ಮತ್ತು ಜೆಸಿ ಬಡಾವಣೆಗಳ ಭೂಮಿಯು ‘ಬಿ’ ಖರಾಬು ಎಂದು ಪರಿಗಣಿತವಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಈ ಬಡಾವಣೆಗಳ ನಿವಾಸಿಗಳು ಈಗ ಸರ್ಕಾರದ ಈ ಆದೇಶದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ನೆಮ್ಮದಿ ನಿಟ್ಟುಸಿರು ಬಿಟ್ಟ ಆತಂಕದಲ್ಲಿದ್ದ 25 ಸಾವಿರಕ್ಕೂ ಅಧಿಕ ನಿವಾಸಿಗಳು
ಮೈಸೂರು, ಜು. 15- ಈ ಹಿಂದಿನ ಸಿಐಟಿಬಿ ಮತ್ತು ಇಂದಿನ ಮುಡಾದಿಂದ ಹಲವಾರು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾದ ಸಿದ್ಧಾರ್ಥನಗರ, ಕೆಸಿ, ಜೆಸಿ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿಸಿ, ಮನೆ ನಿರ್ಮಿಸಿಕೊಂಡು ನೆಮ್ಮದಿಯಾಗಿದ್ದ ಸುಮಾರು 25 ಸಾವಿರ ನಿವಾಸಿಗಳಿಗೆ 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಹೊರಡಿಸಿದ್ದ ಒಂದು ಆದೇಶ ಬರಸಿಡಿಲಿನಂತೆ ಬಂದೆರಗಿತ್ತು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಭೂಮಿ ‘ಬಿ’ ಖರಾಬು (ಸರ್ಕಾರಿ ಭೂಮಿ) ಎಂದು 2015ರ ಮೇ 26ರಂದು ಅಂದಿನ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಅವರ ಆದೇಶದಂತೆ ಈ ಹಿಂದೆ ಸಿಐಟಿಬಿ ಮತ್ತು ಮುಡಾದಿಂದ ರಚನೆಗೊಂಡ ಬಡಾವಣೆಗಳೂ ಸರ್ಕಾರಿ ಭೂಮಿ ಎಂದೇ ಪರಿಗಣಿತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಡಾವಣೆಗಳಲ್ಲಿ ರುವ ನಿವೇಶನ, ನಿರ್ಮಾಣಗಳು ಹಾಗೂ ಇನ್ನಿತರೆ ಆಸ್ತಿಗಳಿಗೆ ಯಾವುದೇ ರೀತಿಯ ದಾಖಲೆಗಳನ್ನು ನೀಡಬಾರದು ಎಂದು ಅಂದಿನ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದಿಂದಾಗಿ ಈ ಬಡಾವಣೆಗಳ ನಿವೇಶನಗಳಿಗೆ ಖಾತಾ ಮಾಡಿಕೊಡುವುದು, ಕಟ್ಟಡ ಕಟ್ಟಲು ಪರವಾನಗಿ ನೀಡುವುದು, ಕಟ್ಟಿದ ಕಟ್ಟಡಕ್ಕೆ ಸಿಆರ್ ನೀಡುವುದು, ಖಾತಾ ಬದಲಾವಣೆ ಮಾಡುವುದು ಸೇರಿದಂತೆ ಯಾವುದೇ ದಾಖಲೆ ಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ಪಾಲಿಕೆ ಕೊಡುತ್ತಿರ ಲಿಲ್ಲ. ಅಷ್ಟೇ ಏಕೆ ಕಂದಾಯವನ್ನೂ ಪಾವತಿಸಿಕೊಳ್ಳುತ್ತಿರಲಿಲ್ಲ. ಕಟ್ಟಡ ಕಟ್ಟುವವರಿಗೆ ಬ್ಯಾಂಕ್‍ನಿಂದ ಸಾಲ ದೊರೆಯುತ್ತಿರಲಿಲ್ಲ. ಹಿರಿಯ ನಾಗರಿಕರು ತಮ್ಮ ಮಕ್ಕಳ ಹೆಸರಿಗೆ ಆಸ್ತಿ ಪರಭಾರೆ ಮಾಡಲಾಗುತ್ತಿರಲಿಲ್ಲ. ಕಷ್ಟದಲ್ಲಿ ಸಿಲುಕಿದವರು ತಮ್ಮದೇ ಆಸ್ತಿಯನ್ನು ಮಾರಾಟ ಮಾಡಿ ಕಷ್ಟ ನಿವಾರಿಸಿಕೊಳ್ಳೋಣ ಎಂದರೆ ಅದೂ ಅಸಾಧ್ಯವಾಗಿತ್ತು. ಒಂದು ರೀತಿಯಲ್ಲಿ ತಾವು ಕಷ್ಟಪಟ್ಟು ಸಂಪಾದಿಸಿ ಸರ್ಕಾರದ ಅಂಗ ಸಂಸ್ಥೆಯಿಂದಲೇ ಖರೀದಿಸಿದ ಆಸ್ತಿ ತಮ್ಮದಲ್ಲ ಎನ್ನುವಂತಹ ಪರಿಸ್ಥಿತಿ ಇಲ್ಲಿನ ನಿವಾಸಿಗಳ ಕಾಡತೊಡಗಿತ್ತು. ಕೆಲವರು ನ್ಯಾಯಾಲಯದ ಮೊರೆ ಹೋಗಿ ತಾತ್ಕಾಲಿಕವಾಗಿ ಪರಿಹಾರ ಕಂಡು ಕೊಂಡರಾದರೂ ಸಮಸ್ಯೆಯಂತೂ ಬಗೆಹರಿದಿರಲಿಲ್ಲ. ಈ ಕಾರಣದಿಂದಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್ ನೇತೃತ್ವದಲ್ಲಿ “ಕುರುಬಾರಹಳ್ಳಿ ಸರ್ವೆ ನಂ. 4ರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ” ರಚಿಸಿಕೊಂಡು ಹೋರಾಟಕ್ಕಿಳಿದರು. ಮುಡಾ ಮುಂದೆ ಹಲವಾರು ಬಾರಿ ಪ್ರತಿಭಟನೆ ನಡೆಸಿದರು. ಲಲಿತ ಮಹಲ್ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ಜನಪ್ರತಿನಿಧಿಗಳಿಗೆ ಮನವಿಗಳನ್ನು ಸಲ್ಲಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ, ಈ ಬಡಾವಣೆಗಳನ್ನು ‘ಬಿ’ ಖರಾಬಿನಿಂದ ಕೈಬಿಟ್ಟು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡರು. ಆದರೆ, ಅದು ಸರ್ಕಾರಿ ಆದೇಶವಾಗದೇ ನೆನೆಗುದಿಗೆ ಬಿದ್ದಿತ್ತು. ನಂತರ ಅಧಿಕಾರಕ್ಕೆ ಬಂದ ಹೆಚ್.ಡಿ. ಕುಮಾರಸ್ವಾಮಿ, ಸುತ್ತೂರು ಮಠಕ್ಕೆ ಆಗಮಿಸಿದಾಗ, ನಿವಾಸಿಗಳು ಅಲ್ಲಿಗೂ ತೆರಳಿ ತಮ್ಮ ಕಷ್ಟ ನಿವಾರಿಸುವಂತೆ ಮನವಿ ಸಲ್ಲಿಸಿದರು. ಹೀಗೆ ಕಳೆದ ಐದೂವರೆ ವರ್ಷಗಳಿಂದಲೂ ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸಿದ್ದರು. ಇವರು ಶಾಪದಿಂದ ಇಂದು ವಿಮುಕ್ತಿ ಹೊಂದಿದ ಸಂಭ್ರಮದಲ್ಲಿದ್ದಾರೆ.

ನಿವಾಸಿಗಳಿಗೆ ನೀಡಿದ ಭರವಸೆ ಈಡೇರಿಸಿದ್ದೇನೆ
ಮೈಸೂರು, ಜು.15- ಮೈಸೂರಿನ ಕುರುಬಾರಹಳ್ಳಿ ಸರ್ವೇ ನಂ.4 ಮತ್ತು ಆಲನಹಳ್ಳಿ ಸರ್ವೇ ನಂ.41ಕ್ಕೆ ಸೇರಿದ ಸಿದ್ದಾರ್ಥ ನಗರ, ಕೆಸಿ ಮತ್ತು ಜೆಸಿ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಟ್ಟು ಕಂದಾಯ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಿರುವ ಆದೇಶವನ್ನು ಈ ಹಿಂದೆ ತಾವು ನೀಡಿದ್ದ ಭರವಸೆಯಂತೆ ಕಂದಾಯ ಸಚಿವ ಆರ್.ಅಶೋಕ್ ಅವರು ಬಿಡು ಗಡೆ ಮಾಡಿದ್ದಾರೆ ಎಂದು ಕೆ.ಆರ್.ಕ್ಷೇತ್ರ ಶಾಸಕ ಎಸ್.ಎ.ರಾಮ ದಾಸ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಆದೇಶದ ಹಿನ್ನೆಲೆಯಲ್ಲಿ ಮೇಲಿನ ಬಡಾವಣೆಗಳು ಬಿ-ಖರಾಬಿಗೆ ಒಳಪಡುವು ದಿಲ್ಲ. ಆದ್ದರಿಂದ ಈ ಬಡಾವಣೆಗಳ ನಿವೇಶನಗಳಿಗೆ ಸಂಬಂಧಪಟ್ಟಂತೆ ಮುಡಾದಿಂದ ಟೈಟಲ್ ಡೀಡ್ ಮತ್ತು ಖಾತಾ, ಮೈಸೂರು ಪಾಲಿಕೆಯಿಂದ ಖಾತಾ, ಖಾತಾ ಎಕ್ಸ್ ಟ್ರಾಕ್ಟ್, ಕಟ್ಟಡ ನಿರ್ಮಾಣಕ್ಕೆ ಅನುಮೋದನೆ, ಕಟ್ಟಿದ ಕಟ್ಟಡಗಳಿಗೆ ಸಿಆರ್ ಹಾಗೂ ಮನೆ ಕಂದಾಯ ನಿಗದಿಪಡಿಸಲು ಅಗತ್ಯ ಆದೇಶ ಹೊರಡಿಸಬೇಕೆಂದು ತಾವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಕಳೆದ ಐದೂವರೆ ವರ್ಷ ಈ ಸಮಸ್ಯೆಯಿಂದಾಗಿ ಎಲ್ಲಾ ರೀತಿಯ ನೋವುಗಳನ್ನು ಅನುಭವಿಸಿಯೂ ಯಾವುದೇ ಸಂದರ್ಭದಲ್ಲಿಯೂ ಧೃತಿಗೆಡದೆ, ತಾಳ್ಮೆಯಿಂದ ಇದ್ದ ಈ ಬಡಾವಣೆಯ ನಿವಾಸಿಗಳಿಗೆ ಹಾಗೂ ನ್ಯಾಯ ಸಮ್ಮತವಾಗಿ ಕಾನೂನಿನ ಚೌಕಟ್ಟಿನೊಳಗೆ ಹೋರಾಟ ಮಾಡಿದಂತಹ ಮತ್ತು ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ತಾವು ಕೃತಜ್ಞತೆ ಸಲ್ಲಿಸುವುದಾಗಿ ರಾಮದಾಸ್ ತಿಳಿಸಿದ್ದಾರೆ.

 

Translate »