ಮೈಸೂರು ಅರಮನೆ ಅಂಗಳದಲ್ಲಿ ಗಾಯನ,  ವಾದನ ಆಸ್ವಾದಿಸಿದ ಸಂಗೀತ ಪ್ರೇಮಿಗಳು
ಮೈಸೂರು

ಮೈಸೂರು ಅರಮನೆ ಅಂಗಳದಲ್ಲಿ ಗಾಯನ, ವಾದನ ಆಸ್ವಾದಿಸಿದ ಸಂಗೀತ ಪ್ರೇಮಿಗಳು

October 13, 2021

ಮೈಸೂರು, ಅ.12(ಎಸ್‍ಬಿಡಿ)- ಸುಮಧುರ ಸುಗಮ ಸಂಗೀತ, ಇಂಪಾದ ಹಿಂದೂಸ್ತಾನಿ ಹಾಗೂ ಕೊಳಲು ವಾದನದ ಜುಗಲ್‍ಬಂದಿ ಸಮ್ಮಿಳಿತದಲ್ಲಿ ಸಂಗೀತ ಪ್ರೇಮಿಗಳು ಮಿಂದೆದ್ದರು.

ಮೈಸೂರು ದಸರಾ ಮಹೋತ್ಸವದ ಸಾಂಸ್ಕøತಿಕ ವೇದಿಕೆಯಲ್ಲಿ ಆರನೇ ದಿನ ವಾದ ಸೋಮವಾರ, ಸಂಗೀತ ಲೋಕವೇ ಸೃಷ್ಟಿಯಾಗಿತ್ತು. ಮಳೆಯ ಆತಂಕದ ನಡುವೆಯೂ ನೆರೆದಿದ್ದ ಕಲಾಪ್ರೇಮಿಗಳು ವಿದ್ಯುತ್ ದೀಪಾಲಂಕಾರದಿಂದ ಪ್ರಜ್ವ ಲಿಸುತ್ತಿದ್ದ ಅರಮನೆ ಮುಂಭಾಗ ಸಂಗೀತ ಸಾಗರದಲ್ಲಿ ತೇಲಿದರು.

ತಂದೆ-ಮಗ ಜುಗಲ್‍ಬಂದಿ: ತುಂತುರು ಮಳೆಯಲ್ಲಿ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹಾಗೂ ಅವರ ಪುತ್ರ ಷಡಜ್ ಗೋಡ್ಖಿಂಡಿ ಅವರ ಕೊಳಲು ವಾದನದ ಜುಗಲ್‍ಬಂದಿ ಮನಮೋಹಕ ವಾಗಿತ್ತು. ದುರ್ಗಾ ರಾಗದ ಮೂಲಕ ತಾಯಿ ಚಾಮುಂಡೇಶ್ವರಿಯನ್ನು ಸ್ಮರಿಸಿ ಕಾರ್ಯ ಕ್ರಮ ಆರಂಭಿಸಿದ ಇವರು, ವಿವಿಧ ರಾಗ ಗಳಲ್ಲಿ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಕೃತಿಗಳ ರಾಗಮಾಲಿಕೆಯನ್ನು ಪ್ರಸ್ತುತಪಡಿಸಿ, ದಸರಾ ಸಾಂಸ್ಕøತಿಕ ವೈಭವ ವನ್ನು ಇಮ್ಮಡಿಗೊಳಿಸಿದರು.

ತಬಲಾ ವಾದನದಲ್ಲಿ ಪ್ರವೀಣ್ ಗೋಡ್ಖಿಂಡಿ ಅವರ ಅಣ್ಣ ವಿದ್ವಾನ್ ಕಿರಣ್ ಗೋಡ್ಖಿಂಡಿ, ಸುನಿಲ್‍ಕುಮಾರ್ ಸಹ ಕೊಳಲು ಹಾಗೂ ಸಂಜನಾ ತಂಬೂರಿ ವಾದ್ಯದ ಮೂಲಕ ಗೋಡ್ಖಿಂಡಿ ಸಂಗೀತ ಲಹರಿಗೆ ಸಾಥ್ ನೀಡಿದರು.

ಮುದ್ದು ಸಂಗೀತ: ಇದಕ್ಕೂ ಮೊದಲು ನಿವೃತ್ತ ಐಎಎಸ್ ಅಧಿಕಾರಿ ಪಂಡಿತ್ ಮುದ್ದುಮೋಹನ್ ಅವರ ಹಿಂದೂಸ್ತಾನಿ ಗಾಯನವನ್ನು ನೆರೆದಿದ್ದವರು ತನ್ಮಯತೆ ಯಿಂದ ಆಸ್ವಾದಿಸಿದರು. ಶುದ್ಧಕಲ್ಯಾಣ ರಾಗದ ಮೂಲಕ ತಾಯಿ ಚಾಮುಂಡೇಶ್ವರಿಗೆ ನಮಿ ಸುವ ಮೂಲಕ ಸಂಗೀತ ಕಾರ್ಯಕ್ರಮ ಆರಂಭಿಸಿದ ಇವರು, `ಜಯದುರ್ಗೆ ದುರ್ಗತಿ ಪರಿಹಾರಿಣಿ…’, ಸರಸ್ವತಿ ಮಾತಾ…’ ಸೇರಿದಂತೆ ದುರ್ಗಾದೇವಿ, ಸರಸ್ವತಿ, ಮಹಾ ಲಕ್ಷ್ಮಿ ಸ್ತುತಿಸುವ ಭಜನೆ, ಸಂಗೀತವನ್ನು ಪ್ರಸ್ತುತಪಡಿಸಿ, ಭಕ್ತಿಸುಧೆ ಹರಿಸಿದರು. ತಬಲಾದಲ್ಲಿ ಡಾ.ರವಿಕಿರಣ್ ನಾಕೋಡ್ ಹಾಗೂ ದತ್ತಾತ್ರೇಯ ಜೋಶಿ, ಹಾರ್ಮೋ ನಿಯಂ ಸತೀಶ್, ತಾಳದಲ್ಲಿ ರಾಜೇಶ್, ತಂಬೂರಿ ವಾದನದಲ್ಲಿ ಜಗನ್ನಾಥ್‍ರಾವ್ ಹಾಗೂ ಶಿವಪ್ರಸಾದ್ ಸುಮಧರ ಸಂಗೀತ ಯಾನದಲ್ಲಿ ಜೊತೆಯಾಗಿದ್ದರು.

ಭಾವ ಲಹರಿ: ಮೊದಲ ಕಾರ್ಯಕ್ರಮ ವಾಗಿ ಅದಿತಿ ಪ್ರಹ್ಲಾದ್ ಹಾಗೂ ತಂಡದ ಕಲಾವಿದರಿಂದ ಮೂಡಿಬಂದ ಸುಗಮ ಸಂಗೀತ ಎಲ್ಲರ ಮನಸೂರೆಗೊಂಡಿತು.

ಖ್ಯಾತ ಕವಿ ಡಿ.ವಿ.ಗುಂಡಪ್ಪ (ಡಿವಿಜಿ) ನವರ `ಏನೀ ಮಹಾನಂದವೇ ಓ ಭಾಮಿನಿ …’, ರಾಷ್ಟ್ರಕವಿ ಕುವೆಂಪು ಅವರ `ಮುಚ್ಚು ಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಏ ಗುರುವೇ ಅಂತರಾತ್ಮ…’ ಹಾಗೂ `ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ…’, ಎನ್.ಎಸ್. ಲಕ್ಷ್ಮಿನಾರಾ ಯಣ ಭಟ್ಟರ `ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ, ಎಲ್ಲಿ ಅಲೆ ಯುತಿಹುದೋ ಏಕೆ ನಿಲ್ಲದಾಯಿತೋ…’ ಹೀಗೆ ನಾಡಿನ ಪ್ರಸಿದ್ಧ ಕವಿಗಳು ಪದಪುಂಜದಲ್ಲಿ ಕಟ್ಟಿರುವ ಹಲವು ಭಾವಗೀತೆಗಳನ್ನು ವಾದ್ಯ ನಿನಾದ ದೊಂದಿಗೆ ಅದಿತಿ ಪ್ರಹ್ಲಾದ್ ಇಂಪಾಗಿ ಹಾಡಿ ಪ್ರಶಂಸೆಗೆ ಪಾತ್ರರಾದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಇವರ ಪತ್ನಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಇನ್ನಿತರ ಗಣ್ಯರು, ಸಂಗೀತ ಕಲಾವಿದರಿಗೆ ಅಭಿನಂದಿಸಿದರು.

Translate »