ಕನ್ನಡಕ್ಕೂ ಕೋಡು ಮೂಡಿಸಿದ ಸರ್ ಸಿ.ವಿ.ರಾಮನ್ ಮೈಸೂರಲ್ಲಿ ಸಾಧಕರಿಗೆ ಸಲಾಂ
ಮೈಸೂರು

ಕನ್ನಡಕ್ಕೂ ಕೋಡು ಮೂಡಿಸಿದ ಸರ್ ಸಿ.ವಿ.ರಾಮನ್ ಮೈಸೂರಲ್ಲಿ ಸಾಧಕರಿಗೆ ಸಲಾಂ

March 2, 2021

ಮೈಸೂರು: ಭಾರತದಲ್ಲಷ್ಟೇ ಅಲ್ಲದೆ ಇಡೀ ಏಷ್ಯಾದಲ್ಲಿ ಮೊಟ್ಟಮೊದಲಿಗೆ ಭೌತ ವಿಜ್ಞಾನದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದು, ಭಾರತದ ಕೀರ್ತಿಪತಾಕೆಯನ್ನು ಜಗತ್ತಿನ ಉದ್ದಗಲಕ್ಕೂ ಬೆಳಗಿದ ವಿಜ್ಞಾನ ಲೋಕದ ದೈತ್ಯಪ್ರತಿಭೆ ಸರ್ ಸಿ.ವಿ. ರಾಮನ್, ಜಾಗತಿಕವಾಗಿ ಕನ್ನಡ ನಾಡು ಹಾಗೂ ಕನ್ನಡಕ್ಕೂ ಒಂದು ಕೋಡು ಮೂಡಿಸಿದವರು ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಸ್ಥೆಗಳು ಸಂಯುಕ್ತವಾಗಿ ಅಗ್ರ ಹಾರದ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀಕೃಷ್ಣ ಲಲಿತಾ ಕಲಾಮಂದಿರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಕಾರರಾಗಿ ಮಾತನಾಡಿದ ಅವರು, ಭಾರತರತ್ನ ಸರ್ ಸಿ.ವಿ.ರಾಮನ್ ಅವರು ಮೂಲತಃ ತಮಿಳುನಾಡಿನವರಾದರೂ ಕೂಡ ವಿಜ್ಞಾನ ಲೋಕದ ಅವರ ಎಲ್ಲಾ ರೀತಿಯ ಸಂಶೋಧನೆಗಳಿಗೂ ಕನ್ನಡನಾಡು ಕರ್ಮಭೂಮಿಯಾಗಿತ್ತು. ವಿಶೇಷವಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಬೆಳಕಿನ ಆವಿಷ್ಕಾರವಾದ ರಾಮನ್ ಎಫೆಕ್ಟ್ ಅಥವಾ ರಾಮನ್ ಪರಿಣಾಮದ ಸಂಶೋಧನೆಗೆ ಮೂಲವೇ ಕನ್ನಡನಾಡಿನ ಬೆಂಗಳೂರಾಗಿದ್ದು ಇದರ ಸಂಪೂರ್ಣ ಕ್ರೆಡಿಟ್ ನಮ್ಮ ಕನ್ನಡ ನಾಡಿಗೆ ಸಲ್ಲುತ್ತದೆ ಎಂದರು.

ಸರ್ ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆರಂಭವಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ನೂರಾರು ಶಾಲೆ ಗಳಲ್ಲಿ ಮಕ್ಕಳಿಗಾಗಿ ವಿಜ್ಞಾನ ಪ್ರಯೋಗಗಳನ್ನು ಏರ್ಪಡಿಸಿ ಮಕ್ಕಳಲ್ಲಿ ವಿಜ್ಞಾನದ ಅರಿವು ಮೂಡಿಸುತ್ತಿರುವ ವಿಶ್ರಾಂತ ವಿಜ್ಞಾನ ಶಿಕ್ಷಕ ಶಂಕರ್ ಅವರಿಗೆ ಸರ್ ಸಿ.ವಿ.ರಾಮನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಚ್.ವಿ.ಮುರಳೀಧರ ಅಧ್ಯಕ್ಷತೆ ವಹಿಸಿದ್ದರು. ಶ್ರೀಕೃಷ್ಣ ಲಲಿತ ಕಲಾಮಂದಿರ ಪ್ರೌಢಶಾಲೆ ಮುಖ್ಯ ಶಿಕ್ಷಕ ವಿಜಯಕುಮಾರ್, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಮುಂತಾದವರು ಉಪಸ್ಥಿತರಿದ್ದರು.

Translate »