ಆರು ಟನ್ ನಕಲಿ ನಂದಿನಿ ತುಪ್ಪ ದಾಸ್ತಾನು
News, ಮೈಸೂರು

ಆರು ಟನ್ ನಕಲಿ ನಂದಿನಿ ತುಪ್ಪ ದಾಸ್ತಾನು

December 18, 2021

ಮೈಸೂರು, ಡಿ. ೧೭(ಆರ್‌ಕೆ)-ಮೈಸೂರು ಹೊರ ವಲಯದ ಹೊಸಹುಂಡಿ ಗ್ರಾಮದ ಬಳಿ ಪತ್ತೆಯಾದ ಗೋದಾಮಿನಲ್ಲಿ ೫ರಿಂದ ೬ ಟನ್‌ನಷ್ಟು ನಕಲಿ ನಂದಿನಿ ತುಪ್ಪ ದಾಸ್ತಾನಿರುವುದು ಮಹಜರು ವೇಳೆ ಕಂಡು ಬಂದಿದೆ ಎಂದು ಮೈಮುಲ್ ಅಧ್ಯಕ್ಷ ಪ್ರಸನ್ನ ತಿಳಿಸಿದ್ದಾರೆ.

ಈ ಕುರಿತು ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಗುರುವಾರ ಪತ್ತೆಯಾದ ನಂದಿನಿ ನಕಲಿ ತುಪ್ಪ ತಯಾರಿಕಾ ಘಟಕಕ್ಕೆ ಇಂದು ತಾವು ಒಕ್ಕೂಟದ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆವು.

ಗೋಡೌನ್‌ನಲ್ಲಿ ಸುಮಾರು ೩ರಿಂದ ೪ ಟನ್‌ನಷ್ಟು ಅಸಲಿ ನಂದಿನಿ ತುಪ್ಪ ಮತ್ತು ೫ರಿಂದ ೬ ಟನ್ ಕಲಬೆರಕೆ ತುಪ್ಪ ಇರುವುದು ಮಹಜರು ವೇಳೆ ಪತ್ತೆ ಯಾಗಿದೆ. ಆದರೆ, ಮೈಮುಲ್‌ನಿಂದ ತಯಾರಾದ ಅಷ್ಟೊಂದು ಪ್ರಮಾಣದ ಅಸಲಿ ನಂದಿನಿ ತುಪ್ಪ ಅಲ್ಲಿಗೆ ಸರಬರಾಜಾಗಿರುವುದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ನಂದಿನಿ ತುಪ್ಪ ಕಲಬೆರಕೆ ಮಾಡಲು ಗೋದಾಮಿನ ಮಾಲೀಕ ಮುರುಗೇಶ ಎಂಬ ವ್ಯಕ್ತಿ ಬಳಸುತ್ತಿದ್ದ ಡಾಲ್ಡಾ ತುಪ್ಪ, ಪಾಮ್ ಆಯಿಲ್, ಬಣ್ಣ, ಫ್ಲೇವರ್, ಪ್ಯಾಕ್ ಮಾಡಲು ಬಳಸುತ್ತಿದ್ದ ಪೌಚ್ ಫಿಲಂ, ಪ್ಯಾಕಿಂಗ್ ಯಂತ್ರ, ನಕಲಿ ಸ್ಟಿಕ್ಕರ್,ಆಗ್‌ಮಾರ್ಕ್ ಲೇಬಲ್, ನಕಲಿ ಟಿನ್ ಕ್ಯಾಪ್, ಬ್ಯಾಚ್ ಟೇಪ್ ಹಾಗೂ ಕಾರೋಗೇಟೆಡ್ ಬಾಕ್ಸ್ಗಳನ್ನು ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಅಸಲಿ ತುಪ್ಪದ ಜೊತೆಗೆ ಡಾಲ್ಡಾ ತುಪ್ಪ, ಪಾಮ್ ಆಯಿಲ್, ಫ್ಲೇವರ್‌ಗಳನ್ನು ಮಿಶ್ರಣ ಮಾಡಿ ನಂದಿನಿ ಹೆಸರಿನ ನಕಲಿ ತುಪ್ಪ ತಯಾರಿಸಲಾಗುತ್ತಿತ್ತು. ಈ ಬಗ್ಗೆ ಆಹಾರ ಸುರಕ್ಷತಾ ಪ್ರಾಧಿಕಾರದ ಕೇಂದ್ರ ಕಚೇರಿ ಆಯುಕ್ತರಿಗೂ ಮಾಹಿತಿ ನೀಡಿದ್ದರ ಮೇರೆಗೆ ಅವರು ಸಹ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಪ್ರಸನ್ನ ತಿಳಿಸಿದರು.
ಕಲಬೆರಕೆ ತುಪ್ಪದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದ ಗೋದಾಮನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಮತ್ತೊಂದೆಡೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳೂ ಈ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರಲ್ಲದೆ, ಅವರೂ ಸಹ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ ಎಂದು ಮೈಮುಲ್ ಅಧ್ಯಕ್ಷರು ತಿಳಿಸಿದರು.

Translate »