ಮೈಸೂರು,ನ.11(ಎಂಟಿವೈ)- ಮೈಸೂ ರಿನ ಪ್ರತಿಷ್ಟಿತ ಹೆರಿಗೆ ಆಸ್ಪತ್ರೆಗಳಲ್ಲಿ ಮುಂಚೂಣಿ ಯಲ್ಲಿರುವ ಚೆಲುವಾಂಬ ಆಸ್ಪತ್ರೆ ಮುಂದೆ ಕಳೆದ 1 ತಿಂಗಳಿಂದ ಚಪ್ಪಲಿ ರಾಶಿ ಬಿದ್ದಿದ್ದು, ಪಾರಂಪರಿಕ ಕಟ್ಟಡವೂ ಆಗಿರುವ ಆಸ್ಪತ್ರೆ ಅಂದಕ್ಕೆ ಧಕ್ಕೆಯುಂಟಾಗುತ್ತಿದೆ. ಮುಖ್ಯ ದ್ವಾರದ ಬಳಿಯೇ ರಾಶಿ ಬಿದ್ದಿರುವ ಚಪ್ಪಲಿ ಕಂಡು ಸಾರ್ವಜನಿಕ ವಲಯ ದಿಂದ ಆಕ್ರೋಶ ವ್ಯಕ್ತವಾಗಿದೆ.
ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಹೆರಿಗೆಗಾಗಿ ಹಲವು ಮಂದಿ ಮೈಸೂರಿನ ಚೆಲುವಾಂಬ ಹೆರಿಗೆ ಆಸ್ಪತ್ರೆ ಯನ್ನೇ ಅವಲಂಬಿಸಿದ್ದಾರೆ. ಇದರೊಂದಿಗೆ ತಪಾಸಣೆಗೆಂದು ಬರುವ ಗರ್ಭಿಣಿಯರ ಸಂಖ್ಯೆಯೂ ಹೆಚ್ಚಾಗಿದೆ. ಆಸ್ಪತ್ರೆಯಲ್ಲಿ ದಾಖ ಲಾಗಿರುವ ರೋಗಿ ಹಾಗೂ ರೋಗಿಗಳ ಸಂಬಂಧಿಕರ ಚಪ್ಪಲಿ ಆಸ್ಪತ್ರೆ ಮುಂಭಾಗದ ಮುಖ್ಯ ದ್ವಾರದ ಬಳಿ ರಾಶಿ ಬಿದ್ದಿದೆ. ಇದು ಆಸ್ಪತ್ರೆ ಅಂದಕ್ಕೆ ಧÀಕ್ಕೆಯುಂಟು ಮಾಡುತ್ತಿದೆ.
ಚಪ್ಪಲಿ ರಾಶಿಗೆ ಸಿಬ್ಬಂದಿಗಳೇ ಕಾರಣ: ಚೆಲುವಾಂಬ ಆಸ್ಪತ್ರೆ ಮುಂಭಾಗದ ದ್ವಾರದ ಬಳಿ ಬಿದ್ದಿರುವ ಚಪ್ಪಲಿಗೆ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳೇ ಕಾರಣ. ಆಸ್ಪತ್ರೆಯ ವಿವಿಧ ವಾರ್ಡ್‍ಗಳಲ್ಲಿ ದಾಖಲಾಗಿರುವ ರೋಗಿ ಗಳು, ರೋಗಿಗಳನ್ನು ನೋಡಲು ಬರುವ ಸಂಬಂಧಿಗಳು ವಾರ್ಡ್ ಬಾಗಿಲ ಬಳಿ ಬಿಡುವ ಪಾದರಕ್ಷೆಯನ್ನು ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ತಂದು ಆಸ್ಪತ್ರೆಯ ಹೊರಭಾಗದ ದ್ವಾರದ ಬಳಿ ಬಿಸಾಡುತ್ತಿದ್ದಾರೆ. ಪ್ರತಿದಿನ 20-30 ಜೋಡಿ ಪಾದರಕ್ಷೆಗಳನ್ನು ಒಂದೇ ಸ್ಥಳದಲ್ಲಿ ಗುಡ್ಡೆ ಹಾಕುತ್ತಿರುವುದರಿಂದ ದಿನದಿಂದ ದಿನಕ್ಕೆ ಪಾದರಕ್ಷೆಗಳ ರಾಶಿ ಬೆಳೆದು, ಆಸ್ಪತ್ರೆ ವಾತಾವರಣ ಹದಗೆಡುತ್ತಿದೆ.
ಮರಳಿ ಪಡೆಯುವವರ ಸಂಖ್ಯೆ ವಿರಳ: ಚೆಲುವಾಂಬ ಆಸ್ಪತ್ರೆಯ ವಿವಿಧ ವಾರ್ಡ್, ಲೇಬರ್ ವಾರ್ಡ್, ಓಪಿಡಿಗಳ ಬಳಿ, ವೈದ್ಯರ ಕೊಠಡಿ ಬಾಗಿಲ ಬಳಿ ರೋಗಿ ಹಾಗೂ ಸಂಬಂಧಿಗಳು ಬಿಟ್ಟಿರುವ ಪಾದರಕ್ಷೆಗಳನ್ನು ಏಕಾಏಕಿ ಸ್ವಚ್ಛತಾ ಸಿಬ್ಬಂದಿಗಳು ಆಸ್ಪತ್ರೆಯ ಹೊರಗೆ ಹಾಕುತ್ತಿರುವುದರಿಂದ ಕೆಲವರು ಪಾದರಕ್ಷೆಯನ್ನು ಯಾರೋ ಕದ್ದಿರಬಹು ದೆಂದು ಭಾವಿಸಿ ವಾಪಸ್ಸಾಗುತ್ತಿದ್ದಾರೆ. ಮತ್ತೆ ಕೆಲವರು ರಾಶಿಯಲ್ಲಿ ಅಡಗಿರುವ ತಮ್ಮ ಪಾದರಕ್ಷೆಯನ್ನು ಹುಡುಕುವುದಕ್ಕೆ ಹಿಂದೇಟು ಹಾಕಿ ಅಲ್ಲಿಯೇ ಬಿಟ್ಟು ವಾಪಸ್ಸಾಗುತ್ತಿದ್ದಾರೆ. ಇದರಿಂದ ವಾರಸುದಾರರಿಲ್ಲದ ಪಾದರಕ್ಷೆ ಆಸ್ಪತ್ರೆ ಮುಂಭಾಗದಲ್ಲಿ ರಾಶಿ ಕಂಡು ಬರುತ್ತಿದೆ.
ಸೂಕ್ತ ವ್ಯವಸ್ಥೆ ಮಾಡಿ: ಚೆಲುವಾಂಬ ಆಸ್ಪತ್ರೆಗೆ ಸ್ನೇಹಿತರ ಸಂಬಂಧಿಯೊಬ್ಬರ ತಪಾ ಸಣೆಗೆಂದು ಆಗಮಿಸಿದ್ದ ದೇವರಾಜ ಮೊಹ ಲ್ಲಾದ ನಿವಾಸಿ ಎಂ.ಎಸ್.ಗುರುರಾಜ ಶೆಟ್ಟಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಆಸ್ಪತ್ರೆ ಮುಂಭಾಗದ ಚಪ್ಪಲಿ ರಾಶಿಗೆ ಸಿಬ್ಬಂದಿ ಗಳೇ ಕಾರಣ. ಚೆಲುವಾಂಬ ಆಸ್ಪತ್ರೆಗೆ ಗ್ರಾಮೀಣ ಪ್ರದೇಶದ ನಿವಾಸಿಗಳು ಹಾಗೂ ಬಡ ಜನರೇ ಬರುತ್ತಾರೆ. ವಾರ್ಡ್‍ನಲ್ಲಿ ದಾಖಲಾಗಿರುವ ಸಂಬಂಧಿಗಳನ್ನು ನೋಡಲು ವಾರ್ಡ್ ಬಾಗಿಲ ಬಳಿ ಪಾದರಕ್ಷೆ ಬಿಟ್ಟು ಒಳಗೆ ಹೋಗಿ ಬರುವಷ್ಟರಲ್ಲಿ ಬಾಗಿಲ ಬಳಿ ಇದ್ದ ಪಾದರಕ್ಷೆಗಳು ಆಸ್ಪತ್ರೆಯ ಹೊರಗೆ ಬಂದು ಬಿದ್ದಿರುತ್ತವೆ. ಆಸ್ಪತ್ರೆಗೆ ಒಳಗೆ ಪಾದ ರಕ್ಷೆ ಹಾಕಿಕೊಂಡು ಬರದಂತೆ ಸೂಚಿಸಿ ದರೆ ಹೊರ ಭಾಗದಲ್ಲಿಯೇ ಪಾದರಕ್ಷೆ ಬಿಟ್ಟು ಜನರು ಆಸ್ಪತ್ರೆ ಒಳಗೆ ಬರುತ್ತಾರೆ. ಬರಿ ಗಾಲಲ್ಲಿ ಆಸ್ಪತ್ರೆ ಒಳಗೆ ಓಡಾಡುವುದು ಸುರಕ್ಷಿತ ವಲ್ಲ ಎಂದು ಆಸ್ಪತ್ರೆ ಸಿಬ್ಬಂದಿಗಳಿಗೆ ತಿಳಿದಿ ದ್ದರೂ, ಬಡ ಹಾಗೂ ಗ್ರಾಮೀಣ ಪ್ರದೇ ಶದ ಜನರ ಪಾದರಕ್ಷೆಯನ್ನು ಆಸ್ಪತ್ರೆಯಿಂದ ಹೊರ ಹಾಕುವುದು ಸರಿಯಲ್ಲ. ಸಿಬ್ಬಂದಿ ಸೂಚನೆ ನೀಡಲು ಕ್ರಮ ಕೈಗೊಳ್ಳಬೇಕು. ಕೆಲವರಿಗೆ ಹೊಸ ಚಪ್ಪಲಿ ಖರೀದಿಸುವ ಶಕ್ತಿಯೂ ಇರುವುದಿಲ್ಲ. ಇನ್ನಾದರೂ ಅವ್ಯ ವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದರು.
ಪಾದರಕ್ಷೆಗಾಗಿ ಸ್ಟ್ಯಾಂಡ್ ಮಾಡಿ: ದೇವ ರಾಜ ಮೊಹಲ್ಲಾದ ನಿವಾಸಿ ಆರ್.ಪ್ರಮೋದ್ ಗೌಡ ಮಾತನಾಡಿ, ಪರಿಚಯಿಸ್ಥರೊಬ್ಬ ರನ್ನು ನೋಡಲು ಚೆಲುವಾಂಬ ಆಸ್ಪತ್ರೆಗೆ ಬಂದಿದ್ದೆವು. ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿರುವ ಗರ್ಭಿಣಿಯರೊಂದಿಗೆ ಬಂದಿರುವ ಪೋಷಕರು ಇರಲು ವ್ಯವಸ್ಥೆ ಯಿಲ್ಲ. ಕೋವಿಡ್-19 ಆತಂಕದ ನಡುವೆಯೂ ರೋಗಿಗಳ ಪೋಷಕರು ಆಸ್ಪತ್ರೆ ಮುಂಭಾ ಗದ ಪಾರ್ಕ್‍ನಲ್ಲಿ ಕಾಲ ಕಳೆಯುವಂತಾಗಿದೆ. ಮಳೆ, ಬಿಸಿಲು, ಚಳಿಯಲ್ಲೂ ಪೋಷಕರು ಆಸ್ಪತ್ರೆ ಒಳಾವರಣ ಪ್ರವೇಶಿಸಲಾಗದೆ ಪಾರ್ಕ್‍ನಲ್ಲಿ ಕಾಯು ವಂತಾಗಿದೆ. ಹೆರಿಗೆ ಸಂದರ್ಭ ಹಾಗೂ ವಾರ್ಡ್‍ನಲ್ಲಿ ದಾಖಲಾಗಿರುವ ತಾಯಂದಿರ ಹಿತ ಕಾಯಲು ಯಾರಾದರೊಬ್ಬರು ಇರಲೇ ಬೇಕಾಗುತ್ತದೆ. ಇದನ್ನು ಮನಗಂಡು ಜಿಲ್ಲಾ ಡಳಿತ ಆಸ್ಪತ್ರೆ ಮುಂಭಾಗದಲ್ಲಿ ಪೋಷಕರ ವಾಸ್ತವ್ಯಕ್ಕೆ ಮೇಲ್ಛಾವಣಿ ವ್ಯವಸ್ಥೆಯೊಂದಿಗೆ ಚಪ್ಪಲಿ ಸ್ಟ್ಯಾಂಡ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.