ಸುಗಮ ಸಂಚಾರ ಮಾಹಿತಿಗಾಗಿ ಮೈಸೂರಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್ ವಿಎಂಎಸ್ ಅಳವಡಿಕೆ
ಮೈಸೂರು

ಸುಗಮ ಸಂಚಾರ ಮಾಹಿತಿಗಾಗಿ ಮೈಸೂರಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್ ವಿಎಂಎಸ್ ಅಳವಡಿಕೆ

September 19, 2018

ಮೈಸೂರು: ಸಂಚಾರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪೊಲೀಸರು ಮೈಸೂರಿನ ಮೂರು ಕಡೆ ಅತ್ಯಾಧುನಿಕ ತಂತ್ರಜ್ಞಾನದ ‘ಸ್ಮಾರ್ಟ್ ವೇರಿಯೆಬಲ್ ಮೆಸೇಜಿಂಗ್ ಸೈನ್ಸ್ (SMART VMS)ಅನ್ನು ಅಳವಡಿಸಿದ್ದಾರೆ.

ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್ ಬಂಕ್ ಸಿಗ್ನಲ್ ಲೈಟ್ ಜಂಕ್ಷನ್, ಮೈಸೂರು-ಬೆಂಗಳೂರು ಹೆದ್ದಾರಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್ ಹಾಗೂ ಆಲ್ಬರ್ಟ್ ವಿಕ್ಟರ್ ರಸ್ತೆಯ ಅರಮನೆ ಬಲರಾಮ ದ್ವಾರದ ಜಂಕ್ಷನ್ ಬಳಿ ವಿಎಂಎಸ್‍ಗಳನ್ನು ಅಳವಡಿಸಿದ್ದು, ಇಡೀ ರಾಜ್ಯದಲ್ಲೇ ಸ್ವಯಂಚಾಲಿತ ಸ್ಮಾರ್ಟ್ ವಿಎಂಎಸ್ ಇದಾಗಿದೆ.

ಎಲ್‍ಇಡಿ ಪರದೆ ಮೇಲೆ ಸಂಚಾರ ನಿಯಮ, ಆರೋಗ್ಯ ರಕ್ಷಣೆ, ತಾಪಮಾನ, ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಕ್ರಮ, ಮೈಸೂರು ನಗರದಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳು ಸೇರಿದಂತೆ ಬಹುಪಯೋಗಿ ಮಾಹಿತಿಗಳು ಬಿತ್ತರವಾಗುತ್ತದೆ.
4.8 ಮೀ x 1.98 ಮೀ. ಅಳತೆಯ ಪೂರ್ಣ ವರ್ಣಮಯ(Full colored) ಪ್ರದರ್ಶಕವನ್ನು ಈ ಸಾಧನವು ಹೊಂದಿದ್ದು, 10ರಿಂದ 100 ಮೀಟರ್ ಅಂತರದಿಂದ ವೀಕ್ಷಣೆ ಮಾಡಬಹುದಾಗಿದ್ದು, ಬೆಲ್ ಟೆಲಿಸರ್ವೀಸಸ್ ಇಂಡಿಯಾ ಪ್ರೈ. ಲಿಮಿಟೆಡ್ ಈ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತಿದೆ.

ಸಿಗ್ನಲ್ ಲೈಟ್‍ಗಳ ಉನ್ನತೀಕರಣ: ಮೈಸೂರು ನಗರದಲ್ಲಿರುವ 50 ಟ್ರಾಫಿಕ್ ಸಿಗ್ನಲ್ ಲೈಟ್‍ಗಳನ್ನು ನೂತನ ತತ್ರಾಂಶದೊಂದಿಗೆ ಉನ್ನತೀಕರಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷ್ನರ್ ಡಾ.ಎ. ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

ಸಂಚಾರ ದಟ್ಟಣೆಗನುಗುಣವಾಗಿ ಸಿಗ್ನಲ್‍ಗಳು ಸ್ವಯಂ ಬದಲಾಗುತ್ತವೆ. ಟ್ರಾಫಿಕ್ ಫ್ಲೂಗನುಗುಣವಾಗಿ ಕಾರ್ಯ ನಿರ್ವಹಿಸುವುದರಿಂದ ಸಿಗ್ನಲ್ ಲೈಟ್ ಜಂಕ್ಷನ್‍ಗಳಲ್ಲಿ ವಾಹನ ಸವಾರರು ಅನಗತ್ಯವಾಗಿ ಕಾಯುವ ಪ್ರಮೇಯವಿರುವುದಿಲ್ಲ.

ಒಂದು ಸಿಗ್ನಲ್‍ನಿಂದ ಮತ್ತೊಂದು ಸಿಗ್ನಲ್‍ಗೆ ಇಂಟರ್‍ಲಿಂಕ್ ಇರುವ ಕಾರಣ ವಾಹನ ದಟ್ಟಣೆಗನುಗುಣವಾಗಿ ಮುಂದಿನ ಸಿಗ್ನಲ್ ಲೈಟ್‍ಗೂ ಮಾಹಿತಿ ರವಾನೆ ಯಾಗಿ ಸುಲಭ ಸಂಚಾರಕ್ಕೆ ಅನುಕೂಲವಾಗುತ್ತದೆ. ತುರ್ತು ವಾಹನ ಅಥವಾ ಅತೀ ಗಣ್ಯ ವ್ಯಕ್ತಿಗಳ ವಾಹನಗಳು ಸಂಚರಿಸುವ ಸಮಯದಲ್ಲಿ ಅವುಗಳಿಗೆ ಕೂಡಲೇ ಗ್ರೀನ್ ಸಿಗ್ನಲ್ ನೀಡಿ ಮುಂದೆ ಕಳುಹಿಸುವ ವ್ಯವಸ್ಥೆಯನ್ನು ಕಂಟ್ರೋಲ್ ರೂಂನಲ್ಲೇ ಕುಳಿತು ಮಾಡ ಬಹುದಾಗಿದೆಯಲ್ಲದೆ, ಈ ವ್ಯವಸ್ಥೆಯಲ್ಲಿ ಸಿಗ್ನಲ್ ಲೈಟ್‍ಗಳ ಸ್ಥಿತಿಗತಿ, ಹಸಿರು ದೀಪದ ಸಮಯ, ಸ್ವಯಂಚಾಲಿತ ಮೋಡ್‍ಗಳ ಬಗ್ಗೆಯೂ ಮಾಹಿತಿ ತಿಳಿಯುತ್ತದೆ.

Translate »